Advertisement
“ಅವನೇ ಶ್ರೀಮನ್ನಾರಾಯಣ ನನಗೆ ತೃಪ್ತಿ ಕೊಟ್ಟಿದೆ. ನಾನು ಆ ವಿಚಾರದಲ್ಲಿ ಪೂರ್ಣ ತೃಪ್ತ’-ಹೀಗೆ ಹೇಳಿ ಒಂದು ಕ್ಷಣ ಮೌನವಾದರು ರಕ್ಷಿತ್ ಶೆಟ್ಟಿ. ಮಾತು ಮತ್ತೆ ಮುಂದುವರೆಯಿತು. “ಕನ್ನಡದಲ್ಲಿ ಆ ಚಿತ್ರ ಚೆನ್ನಾಗಿ ಹೋಯಿತು. ಕಲೆಕ್ಷನ್‌ನಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಆ ಚಿತ್ರಕ್ಕೆ ಒಳ್ಳೆಯ ಮೈಲೇಜ್ ಇತ್ತು. ಆದರೆ ಬೇರೆ ಭಾಷೆಗಳಲ್ಲಿ ಮತ್ತಷ್ಟು ಚೆನ್ನಾಗಿ ಹೋಗಬೇಕಿತ್ತು’ ಎಂದರು ರಕ್ಷಿತ್ ಶೆಟ್ಟಿ. ಹೌದು, “ಅವನೇ ಶ್ರೀಮನ್ನಾರಾಯಣ’ ರಕ್ಷಿತ್ ಶೆಟ್ಟಿಯವರ ಬಹುನಿರೀಕ್ಷಿತ ಸಿನಿಮಾ. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಬಿಡುಗಡೆಯಾದ ಮೇಲೆ ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಅದೇನೇ ಮಿಶ್ರಪ್ರತಿಕ್ರಿಯೆ ಬಂದರೂ ಆ ಚಿತ್ರ ಕನ್ನಡದಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದ್ದು ಸುಳ್ಳಲ್ಲ. ಸಿನಿಮಾ ಬಗ್ಗೆ “ಏನೋ’ ಅಂದುಕೊಂಡಿದ್ದ ಮಂದಿಯೇ ಆರಂಭದ ವಾರಗಳಲ್ಲಿ ಆ ಚಿತ್ರದ ಕಲೆಕ್ಷನ್ ನೋಡಿ ಅಚ್ಚರಿಪಟ್ಟಿದ್ದರು. ಆದರೆ, ಕನ್ನಡದಲ್ಲಿ ಆದಂತೆ ಆ ಚಿತ್ರಕ್ಕೆ ಬೇರೆ ಭಾಷೆಗಳಲ್ಲಿ ಅಷ್ಟೇನೂ “ಸ್ವಾಗತ’ ಸಿಗಲಿಲ್ಲ. ಈ ಬೇಸರ ರಕ್ಷಿತ್ ಶೆಟ್ಟಿಯವರಿಗಿದೆ. ಬೇರೆ ಭಾಷೆಗಳಲ್ಲಿ ಆ ಸಿನಿಮಾ ಮತ್ತಷ್ಟು ರೀಚ್ ಆಗಬೇಕಿತ್ತು ಎಂಬ ಸಣ್ಣ ಬೇಸರ ರಕ್ಷಿತ್ ಶೆಟ್ಟಿಯವರದು. ಹಾಗಾದರೆ ಬೇರೆ ಭಾಷೆಗಳಲ್ಲಿ ತೊಡಕಾಗಿದ್ದು ಏನು ಎಂದು ನೀವು ಕೇಳಬಹುದು. ರಕ್ಷಿತ್ ಗಮನಕ್ಕೆ ಬಂದಂತೆ ಅಲ್ಲಿ ಮತ್ತಷ್ಟು ಪ್ರಚಾರ ಬೇಕಿತ್ತು. ಜೊತೆಗೆ ಆ ಚಿತ್ರರಂಗದ ಮಂದಿಯ ಬೆಂಬಲ ಕೂಡಾ ಬೇಕಿತ್ತು. ಹಾಗಂತ ರಕ್ಷಿತ್ ಶೆಟ್ಟಿ ಈಗ ಅದನ್ನೇ ಮೆಲುಕು ಹಾಕುತ್ತಾ ಕುಳಿತಿಲ್ಲ. ಹೊಸ ಕನಸು ಕಟ್ಟಿಕೊಂಡು ತಮ್ಮ ಸಿನಿಪಯಣ ಶುರುವಿಟ್ಟುಕೊಂಡಿದ್ದಾರೆ. ಸದ್ಯಕ್ಕೆ ಅವರ ಫೋಕಸ್ “777 ಚಾರ್ಲಿ’. ಇದು ರಕ್ಷಿತ್ ಶೆಟ್ಟಿಯವರ ಹೊಸ ಸಿನಿಮಾ. ಇದು ಕೂಡಾ ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ಮಾಡುತ್ತಿರುವ ಸಿನಿಮಾ. ಶ್ವಾನ ಹಾಗೂ ಮನುಷ್ಯ ಸಂಬಂಧವೊಂದರ ಸುತ್ತ ಈ ಸಿನಿಮಾ ಸಾಗಲಿದೆ.
Related Articles
Advertisement
ಪುಣ್ಯಕೋಟಿ ಮೊದಲು ರಿಚ್ಚಿ: ರಕ್ಷಿತ್ ಸದ್ಯ “777 ಚಾರ್ಲಿ’ಯಲ್ಲಿ ಬಿಝಿ. ಅದು ಮುಗಿಸಿಕೊಂಡು ಹೊಸ ಸಿನಿಮಾದಲ್ಲಿ ತೊಡಗಲಿದ್ದಾರೆ. ಅನೇಕರು ರಕ್ಷಿತ್ ಶೆಟ್ಟಿ “ಪುಣ್ಯಕೋಟಿ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರಾಹುಲ್ ಎನ್ನುವವರು ನಿರ್ದೇಶಿಸಲಿದ್ದಾರೆ. ಈ ಹಿಂದೆ ರಕ್ಷಿತ್ ಅವರ ಹಲವು ಚಿತ್ರಗಳಲ್ಲಿ ಸಹಾಯಕರಾಗಿದ್ದ ರಾಹುಲ್ “ರಿಚ್ಚಿ’ ಮೂಲಕ ಸ್ವತಂತ್ರ ನಿರ್ದೇಶಕರಾಗು ತ್ತಿದ್ದಾರೆ. ಇನ್ನು, ಇತ್ತೀಚೆಗಷ್ಟೇ ರಕ್ಷಿತ್ ಕೊಡೈಕೆನಾಲ್‌ನ ಸುಂದರ ಪರಿಸರದಲ್ಲಿ ತಮ್ಮ ಹೊಸ ಚಿತ್ರ “ಪುಣ್ಯಕೋಟಿ’ಯ ಕಥೆ ಬರೆಯಲು ಹೋಗಿದ್ದರು. ಈ ಬಗ್ಗೆ ಮಾತನಾಡುವ ರಕ್ಷಿತ್, “10 ದಿನಗಳ ಕಾಲ ಕೊಡೈಕೆನಾಲ್‌ನಲ್ಲಿ “ಪುಣ್ಯಕೋಟಿ’ಗಾಗಿ ಕಥೆ ಬರೆದೆ. ಇನ್ನು ಸಾಕಷ್ಟು ಕೆಲಸವಿದೆ. ಈಗ ರಾಜಸ್ತಾನದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಬಿಡುವಿನ ವೇಳೆಯಲ್ಲಿ ಇಲ್ಲಿ ಬರೆಯುತ್ತಿದ್ದೇನೆ’ ಎನ್ನುತ್ತಾರೆ.
ರವಿಪ್ರಕಾಶ್ ರೈ