Advertisement

Raksha Bandhan: ಸಗಣಿಯಿಂದ ರಾಖಿ, ಆಭರಣ..!

05:59 PM Aug 18, 2024 | Team Udayavani |

ಹಸುವಿನ ಸಗಣಿ ಬಹುತೇಕ ಕಡೆ ಬೆರಣಿ ತಟ್ಟುವುದಕ್ಕಷ್ಟೇ ಸೀಮಿತವಾಗಿದೆ. ಆದರೆ, ಅದೇ ಸಗಣಿಯಿಂದ ಆಭರಣ, ರಾಖಿ ಮಾಡುವುದನ್ನು ಕೇಳಿದ್ದೀರಾ? ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಮಹಿಳೆಯರ ಗುಂಪೊಂದು ಕಳೆದ ಎರಡು ವರ್ಷಗಳಿಂದ ಇದೇ ಕಾಯಕದಲ್ಲಿ ತೊಡಗಿಕೊಂಡಿದೆ. ಹಸುವಿನ ಸಗಣಿ ಹೇಗೆಲ್ಲ ಉಪಯೋಗವಾಗುತ್ತದೆ? ಅದರಿಂದ ಏನೆಲ್ಲ ತಯಾರಿಸುತ್ತಾರೆ ಎಂಬುದರ ಕುರಿತು ಇಲ್ಲಿ ವಿವರಣೆಯಿದೆ…

Advertisement

ವೇದಗಳಲ್ಲಿ “ಗೋಮಯೇ ವಸತೇ ಲಕ್ಷ್ಮೀ’ ಎಂದು ಹೇಳಲಾಗಿದೆ. ಭಾರತದಲ್ಲಿ ಹಸು ಪೂಜನೀಯ ಸ್ಥಾನ ಪಡೆದಿದೆ. ಜನಜೀವನದ ಆರಂಭದಿಂದಲೂ ಅದರ ಸಾಕಾಣಿಕೆ ನಮ್ಮ ಸಾಮಾಜಿಕ ಮತ್ತು ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಆಧುನಿಕತೆಯ ಸಂದರ್ಭದಲ್ಲಿ ಗೋಮಯ (ಸಗಣಿ)ದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ವಿಭಿನ್ನ ಪ್ರಯತ್ನವೊಂದು ಈಗ ಸಣ್ಣ ಉದ್ಯಮದ ಸ್ವರೂಪ ಪಡೆದಿದೆ. ಈ ಉದ್ಯಮ ಆರಂಭಿಸಿರುವ ಅನಿರುದ್ಧ ದಿಂಡೋರೆ ಹೇಳುವುದು ಹೀಗೆ:

ಹಸುವಿನ ಸಗಣಿಯಿಂದ ಆಭರಣ ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಕಲ್ಪನೆಗೆ ನೀರೆರೆದದ್ದು, ತೀರ್ಥಹಳ್ಳಿಯ ಸಾವಯವ ಕೃಷಿ ಪರಿವಾರ ಹಾಗೂ ಚಿಕ್ಕೋಡಿಯ ಕೇಶವ ಸ್ಮತಿ ಟ್ರಸ್ಟ್‌. ಇವುಗಳ ಜಂಟಿ ಶ್ರಮದಿಂದ 2022ರ ಮೇ ತಿಂಗಳಲ್ಲಿ ಚಿಕ್ಕೋಡಿಯಲ್ಲಿ ನಾವು ಗೋ ಸಂವರ್ಧನ ಅನುಸಂಧಾನ ಕೇಂದ್ರ ಆರಂಭಿಸಿದೆವು. ಈ ಕೇಂದ್ರದಲ್ಲಿ ಹಸುಗಳಿಲ್ಲ. ಚಿಕ್ಕೋಡಿ ನಗರದ ಸುತ್ತಮುತ್ತಲಿನ ಹಳ್ಳಿಗಳಿಂದ ಗೋವಿನ ಸಗಣಿ ಖರೀದಿಸಿ, ಅದರಿಂದ ರಾಖಿ, ನೆಕ್‌ಲೇಸ್‌, ವಿವಿಧ ಆಭರಣ ಮುಂತಾದ ವಸ್ತುಗಳನ್ನು ತಯಾರಿಸುತ್ತೇವೆ. ರಾಖಿ ತಯಾರಿಕೆಯಿಂದ ಆರಂಭಗೊಂಡ ನಮ್ಮ ಈ ವಿಭಿನ್ನ ಕಾರ್ಯ ಬಹುಬೇಗ ಎಲ್ಲೆಡೆ ವ್ಯಾಪಿಸಿತು. ರಕ್ಷಾಬಂಧನ ಹಬ್ಬದ ಸಂದರ್ಭಕ್ಕೆ ಗೋಮಯದ ರಾಖಿ ಹೊಸತನ ಸೃಷ್ಟಿಸಿತು ಎನ್ನಬಹುದು. ಸ್ಥಳೀಯವಾಗಿ ಹಲವರು ಇದನ್ನು ಖರೀದಿಸಿದರು. ಕ್ರಮೇಣ ಬಾಯಿಂದ ಬಾಯಿಗೆ ಪ್ರಚಾರವಾಗಿ ಗೋಮಯದ ರಾಖಿಗೆ ದೂರದೂರಿನಿಂದಲೂ ಬೇಡಿಕೆ ಬಂದವು.

ರಾಖಿಯಿಂದ ಆಭರಣದವರೆಗೆ…

ರಾಖಿ ತಯಾರಿಕೆಗೆ ಮಾತ್ರವಲ್ಲ; ಹಬ್ಬಗಳು, ಸಂದರ್ಭಕ್ಕೆ ತಕ್ಕಂತೆ ಹೊಳೆಯುವ ಹೊಸ ಆಲೋಚನೆಗಳ ಅನುಸಾರ ವಿವಿಧ ಉತ್ಪನ್ನಗಳ ತಯಾರಿಕೆಗೆ ನಾವು ಕೈ ಹಾಕಿದೆವು. ದೀಪಾವಳಿ ಸಂದರ್ಭಕ್ಕೆ ಗೋಮಯದ ಪ್ರಣತಿ, ಮಂಗಲ ಕಳಶ, ಮನೆಯಲ್ಲಿ ಕಾಣಸಿಗುವ ಶುಭ ಸಂಕೇತಗಳಾದ ಓಂ, ಶ್ರೀ, ಸ್ವಸ್ತಿಕ್‌, ದೇವರ ಹುಂಡಿ, ಲಕ್ಷ್ಮೀ ತೋರಣಗಳನ್ನು ಗೋಮಯದಿಂದ ತಯಾರಿಸಿದೆವು. ಈ ವರ್ಷದಿಂದ ದೇವರ ವಿಗ್ರಹಕ್ಕೆ ಹಾಕುವ ಶ್ರೀಹಾರವನ್ನು ಗೋಮಯದಿಂದ ತಯಾರಿಸಲು ಶುರು ಮಾಡಿದ್ದೇವೆ. ಜತೆಗೆ ಹಸುವಿನ ಪಂಚಗವ್ಯದಿಂದ ತಯಾರಿಸಿದ ಸೋಪ್‌ ಪೌಡರ್‌, ಹಸುವಿನ ತುಪ್ಪ ಹಾಗೂ ಒಣ ಹಣ್ಣುಗಳಿಂದ ಮಾಡಿದ ಚಾಕಲೇಟ್‌ಗಳೂ ನಮ್ಮಲ್ಲಿ ಸಿಗುತ್ತವೆ. ಆಭರಣ ಎಂದರೆ ಸ್ತ್ರೀಯರಿಗೆ ಅಚ್ಚುಮೆಚ್ಚು. ಅವು ನಮ್ಮ ಕಲೆ, ಸಂಸ್ಕೃತಿಯ ಪ್ರತೀಕವೂ ಹೌದು. ಇದೇ ಪರಿಕಲ್ಪನೆಯಿಂದ ಗೋಮಯ ಆಭರಣಗಳ ತಯಾರಿಕೆಯೂ ಕಾರ್ಯರೂಪಕ್ಕೆ ಬಂದಿತು. ಅಚ್ಚುಗಳ ಸಹಾಯದಿಂದ ವಿವಿಧ ವಿನ್ಯಾಸ, ಬಣ್ಣಗಳ ಕೊರಳ ಹಾರ, ಕಿವಿಯೊಲೆಗಳನ್ನು ತಯಾರಿಸಿದೆವು. ಇವು ನಮ್ಮ ಕೇಂದ್ರದ ಉತ್ಪಾದನೆಗಳಲ್ಲಿನ ಪ್ರಮುಖ ಆಕರ್ಷಣೆಯಾಗಿವೆ.

Advertisement

ಸ್ತ್ರೀ ಸಬಲೀಕರಣದತ್ತ ಹೆಜ್ಜೆ…

ಗೋಮಯ ಉತ್ಪನ್ನಗಳೇ ಒಂದು ವಿಶೇಷವಾದರೆ, ಇದನ್ನು ತಯಾರಿಸುವ ಮೂಲಕ ಆರ್ಥಿಕವಾಗಿ ಗ್ರಾಮೀಣ ಮಹಿಳೆಯರು ಸಬಲರಾಗುತ್ತಿದ್ದಾರೆ. ಗೋ ಸಂವರ್ಧನ ಕೇಂದ್ರದಲ್ಲಿ ಸದ್ಯ 40 ಗ್ರಾಮೀಣ ಮಹಿಳೆಯರ ಗುಂಪು ಈ ಕಾಯಕದಲ್ಲಿ ತೊಡಗಿಕೊಂಡಿದೆ. ದಿನದ ಒಂದಿಷ್ಟು ಸಮಯವನ್ನು ಈ ಕೆಲಸಕ್ಕಾಗಿ ಅವರು ಮೀಸಲಿಡುತ್ತಾರೆ. ನನ್ನ ಪತ್ನಿ ಅಪರಾಜಿತಾ ಅವರಿಗೆ ಉತ್ಪನ್ನಗಳ ತಯಾರಿಕೆಯ ತರಬೇತಿ ನೀಡುತ್ತಾರೆ. ನಂತರ ಕಚ್ಚಾ ವಸ್ತುಗಳನ್ನು ಒಟ್ಟುಗೂಡಿಸುವುದರಿಂದ ಉತ್ಪನ್ನಗಳ ಪ್ಯಾಕಿಂಗ್‌ವರೆಗೂ ಎಲ್ಲವೂ ಅವರದ್ದೇ ಕಾರ್ಯ. ಉತ್ಪನ್ನಗಳ ಮಾರಾಟದಿಂದ ಬಂದ ಲಾಭದಲ್ಲಿ ಅವರಿಗೂ ಪಾಲು ನೀಡುತ್ತೇವೆ. ಸಾಮಾನ್ಯವಾಗಿ ತಿಂಗಳಿಗೆ 1500 ರೂ.ಕ್ಕೂ ಹೆಚ್ಚು ಆದಾಯವನ್ನು ಈ ಮಹಿಳೆಯರು ಗಳಿಸುತ್ತಾರೆ. ಇದು ಸ್ತ್ರೀ ಸ್ವಾವಲಂಬನೆಯೆಡೆಗೆ ಹಾಕಿದ ದಾಪುಗಾಲು ಎನ್ನಬಹುದು.

20 ರೂ.ನಿಂದ 1500 ರೂ.ವರೆಗೆ…

ಈ ವರ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ನಮ್ಮ ಕೇಂದ್ರದಿಂದ ತಯಾರಾದ ಗೋಮಯ ಪ್ರಣತಿಗಳು ಅತಿಹೆಚ್ಚು ಮಾರಾಟವಾಗಿದ್ದವು. ಉಳಿದಂತೆ ಗೋಮಯದ ಲಕ್ಷ್ಮೀ ತೋರಣ, ವಾಸ್ತು ಅಲಂಕಾರಿಕ ಸಾಮಗ್ರಿ, ರಾಖಿ, ಆಭರಣ ಸೇರಿದಂತೆ ನಮ್ಮ ಉತ್ಪನ್ನಗಳು ಈಗ ಕರ್ನಾಟಕವಷ್ಟೇ ಅಲ್ಲದೇ ಮಹಾರಾಷ್ಟ್ರಕ್ಕೂ ವ್ಯಾಪಿಸಿವೆ. ಗ್ರಾಹಕರಿಂದ ಉತ್ತಮ ಸ್ಪಂದನೆ, ಬೇಡಿಕೆ ಬರುತ್ತಿರುವುದು ನಮ್ಮ ಈ ಕೆಲಸಕ್ಕೆ ಮತ್ತಷ್ಟು ವೇಗ ಒದಗಿಸಿದಂತಾಗಿದೆ. ನಮ್ಮಲ್ಲಿ 20ರೂ. ನಿಂದ 1500 ರೂ. ವರೆಗೆ ವಿವಿಧ ಉತ್ಪನ್ನಗಳು ಲಭ್ಯ. ಚಿಕ್ಕೋಡಿಯ ಗೋ ಸಂವರ್ಧನ ಅನುಸಂಧಾನ ಕೇಂದ್ರದಲ್ಲಿ ಅವು ಸಿಗುತ್ತವೆ. ಬೇರೆ ಊರಿನವರು ದೂರವಾಣಿ (7620159335) ಮೂಲಕ ಸಂಪರ್ಕಿಸಿದರೆ ಅವರಿಗೆ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇವೆ.

ಗೋಮಯ ರಾಖಿ ತಯಾರಿಕೆ ಹೀಗೆ…

ಚಿಕ್ಕೋಡಿಯ ಗೋ ಕೇಂದ್ರದಲ್ಲಿ ಪ್ರತಿ ವರ್ಷ ಸರಾಸರಿ 5000 ರಾಖಿಗಳು ತಯಾರಾಗುತ್ತವೆ. ಇದರ ತಯಾರಿಯ ವಿಧಾನ ಅತ್ಯಂತ ಸರಳ. ಹಸುವಿನ ಸಗಣಿ, ಮುಲ್ತಾನಿ ಮಣ್ಣು, ನೈಸರ್ಗಿಕ ಅಂಟು, ನೀರಿನ ಆಧಾರಿತ ಬಣ್ಣಗಳು, ಸಾಮಾನ್ಯ ದಾರ- ಈ ಕಚ್ಚಾ ವಸ್ತುಗಳಿಂದ ರಾಖಿ ಸಿದ್ಧವಾಗುತ್ತದೆ. ಮೊದಲು ಸಗಣಿ ಯನ್ನು ಒಣಗಿಸಿ, ಪುಡಿ ಮಾಡುತ್ತೇವೆ. ನಂತರ ಅದಕ್ಕೆ ಮುಲ್ತಾನಿ ಮಣ್ಣು, ಅಂಟು ಸೇರಿಸಿ ಅದರ ಮಿಶ್ರಣ ಮಾಡಿಕೊಳ್ಳುತ್ತೇವೆ. ಹೂವು ಸೇರಿದಂತೆ ವಿವಿಧ ವಿನ್ಯಾಸಗಳ ಅಚ್ಚಿನಲ್ಲಿ ಮಿಶ್ರಣ ಹಾಕಿ, ಹೊರತೆಗೆದ ಕೂಡಲೇ ದಾರದೊಂದಿಗೆ ಕೂಡಿಸಲಾಗುತ್ತದೆ. ನಂತರ ಅದನ್ನು ಒಣಗಿಸುವ ಪ್ರಕ್ರಿಯೆ. ನಂತರ ಅದಕ್ಕೆ ಬಣ್ಣ ಲೇಪಿಸಿ, ಅಲಂಕಾರಿಕ ವಸ್ತುಗಳಿಂದ ಅಂತಿಮ ಸ್ಪರ್ಶ ನೀಡಿ, ಪ್ಯಾಕಿಂಗ್‌ ಮಾಡುತ್ತೇವೆ.

-ಅನಿರುದ್ಧ ದಿಂಡೋರೆ, ಚಿಕ್ಕೋಡಿ

Advertisement

Udayavani is now on Telegram. Click here to join our channel and stay updated with the latest news.

Next