Advertisement
ಶ್ರಾವಣ ಮಾಸವೆಂಬುದು ಸಂಬಂಧ ಮತ್ತು ಸಂಸ್ಕಾರಗಳಿಗೆ ಮಹತ್ವವನ್ನು ನೀಡುವ ಮಾಸವಾಗಿದ್ದು ಹುಣ್ಣಿಮೆಯ ದಿನದಂದು ಆಚರಿಸುವ ಹಬ್ಬವೇ ರಕ್ಷಾ ಬಂಧನ. ಮನುಷ್ಯ ತನ್ನ ಜೀವನದಲ್ಲಿ ಹಲವು ವಸ್ತುಗಳ ರಕ್ಷಣೆ ಮಾಡಲೇ ಬೇಕು. ಅದು ಹೆಚ್ಚಾಗಿ ಸ್ತ್ರೀ ಸಂಬಂಧಿತವಾದದ್ದು ಎನ್ನುವುದು ವಿಶೇಷ. ಇದರ ಅರ್ಥ ಅವರು ಅಬಲರು ಎಂದಲ್ಲ. ಅವರ ರಕ್ಷಣೆ ಕರ್ತವ್ಯವೆಂದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿಸುವಂತೆ ಕಾಡುವ ಹುಡುಗರಿಂದ ತಪ್ಪಿಸಿಕೊಳ್ಳಲು ರಕ್ಷಾಬಂಧನ ಆಚರಿಸುತ್ತಾರೆ. ರಕ್ಷಾ ಬಂಧನದಲ್ಲಿ ರಾಖೀ ಕಟ್ಟುವ ಸಂಪ್ರದಾಯವಿದ್ದು ಇದು ರಕ್ಷಣೆಯ ಸೂಚಕವೆಂದು ಕರೆಯುತ್ತಾರೆ. ಹಾಗೆಂದು ಸಂಬಂಧಗಳನ್ನು ಕೈಗೆ ಕಟ್ಟಿದ ದಾರದಿಂದಾಗಲಿ ಅಥವಾ ಕೊಡುವ ಉಡುಗೊರೆಯಿಂದಾಗಲಿ ಅಳೆಯಲು ಸಾಧ್ಯವಿಲ್ಲ. ಸಹೋದರತೆಯ ಸಂಬಂಧ ಗಟ್ಟಿಗೊಳ್ಳಲು ನಂಬಿಕೆ, ಪ್ರೀತಿ ಎಂಬ ತಳಪಾಯದ ಅಗತ್ಯವಿದೆ. ಆದರೆ ಇಂದು ಇದು ಕೇವಲ ಸಾಮಾಜಿಕ ಜಾಲತಾಣದ ತೋರ್ಪಡಿಕೆಯ ಹಬ್ಬವಾಗಿ ಆಚರಿಸುತ್ತಿರುವುವುದು ಸಹೋದರತೆಯ ಭ್ರಾತೃತ್ವ ಎಂಬ ವಿಟಮಿನ್ ಕೊರತೆ ಯಿಂದ ಈ ಜಗತ್ತೇ ಬಳಲುತ್ತಿದೆ ಎಂಬ ಅರ್ಥವನ್ನು ಇದು ಕಲ್ಪಿಸುತ್ತದೆ. ಮಹಿಳೆ ಸಬಲಳೆಂದು ಮಾರುದ್ಧ ಬೋರ್ಡ್ ಹಾಕಿದರಾಯಿತೆ ಆಕೆ ಮನೆಯಿಂದ ಹೊರ ಹೋಗಲು ಇಂದಿಗೂ ಅಂಜುತ್ತಾಳೆ, ಉದ್ಯೋಗ ಕ್ಷೇತ್ರದಲ್ಲಿ ಅಭದ್ರತೆಯ ಭೂತ ಇನ್ನೂ ಆಕೆಯನ್ನು ಬಿಟ್ಟಿಲ್ಲ ಹೀಗೆ ತಾನಿದ್ದ ಪ್ರದೇಶವೆಲ್ಲ ಅಸುರಕ್ಷತೆ ಎಂದು ಆಕೆಗನಿಸುವ ಈ ಕಾಲಘಟಕ್ಕೆ ರಕ್ಷಾಬಂಧನವೆಂಬ ಆಚರಣೆ ಒಂದು ದಿನಕ್ಕೆ ಸೀಮಿತವಾದರೆ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವೇ ಎಂಬುದನ್ನು ಸಹ ಪ್ರಶ್ನಿಸಬೇಕಾಗುತ್ತದೆ. ಹಾಗಿದ್ದರೂ ಕಟ್ಟುವ ಸಣ್ಣ ದಾರದ ಮೂಲಕವಾದರೂ ಸಹೋದರತೆಯ ಬಂಧ ಉಳಿಯಲೆಂಬ ಚಿಂತನೆಯಲ್ಲಿ ಸಾಗೋಣ.
ಮಹಾಭಾರತದಂತಹ ಪೌರಾಣಿಕ ಹಿನ್ನೆಲೆ ರಕ್ಷಾಬಂಧನಕ್ಕಿದ್ದು ಈ ಜಗತ್ತಿನಲ್ಲಿ ಮೊದಲ ಅಣ್ಣ ತಂಗಿ ಎಂದರೆ ಅದು ಭಗವಾನ್ ಶ್ರೀ ಕೃಷ್ಣ ಹಾಗೂ ದ್ರೌಪದಿ. ಶಿಶುಪಾಲನ ತಾಯಿಗೆ ಮಾತನಿತ್ತ ಸಲುವಾಗಿ ಶ್ರೀ ಕೃಷ್ಣ ಆತ ನೂರು ತಪ್ಪು ಮಾಡುವವರೆಗೂ ಮೌನವಹಿಸುತ್ತಾನೆ ಆದರೆ ತುಂಬಿದ ಸಭೆಯಲ್ಲಿ ಶಿಶುಪಾಲ ಕೃಷ್ಣನ ತೇಜೋವಧೆ ಮಾಡಿ ನಿಂದಿಸುತ್ತಾನೆ ಅಲ್ಲಿಗೆ ಆತನ ಪಾಪದ ಕೊಡ ತುಂಬಿತ್ತು. ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಶಿಶುಪಾಲನ ಅಂತ್ಯ ಮಾಡುತ್ತಾನೆ. ಆದರೆ ಅದೇ ಸಂದರ್ಭ ಸುದರ್ಶನ ಚಕ್ರದ ವೇಗದ ರಭಸ ಕೃಷ್ಣನಿಗೂ ಘಾಸಿ ಮಾಡಿಸುತ್ತದೆ. ಅಲ್ಲಿದ್ದ ನೆರೆದವರು ಕೃಷ`ನ ಗಾಯ ಉಪಶಮನ ಮಾಡಲು ಏನಾದರೂ ಸಿಗಬಹುದೇ ಎಂದು ಯೋಚಿಸುತ್ತಿರುವಾಗ ದ್ರೌಪದಿ ಯೋಚಿಸದೆ ತನ್ನ ಸೀರೆಯ ಸೆರಗನ್ನು ಛೇದಿಸಿ ಕೃಷ್ಣನಿಗೆ ಕಟ್ಟುತ್ತಾಳೆ. ಅಲ್ಲಿಗೆ ರಕ್ಷಾಬಂಧನದ ಅರ್ಥ ಜನ್ಮತಾಳುತ್ತದೆ. ನನಗೆ ರಕ್ಷಣೆಯಿತ್ತ ನಿನ್ನ ರಕ್ಷಣೆಗೆ ಸದಾ ಸಿದ್ಧನೆಂದು ಕೃಷ್ಣ ವಚನವಿಟ್ಟನೆಂದು ಹೀಗೆ ರಕ್ಷಾಬಂಧನ ಜನ್ಮತಾಳಿದೆ ಎಂದು ಹೇಳಲಾಗುತ್ತದೆ. ರಕ್ಷಾಬಂಧನ ಎಂದರೆ ಪ್ರೀತಿಯ ಭಾವದಿಂದ ತನ್ನ ರಕ್ಷಣೆಯ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವುದು ಎಂದು ಹೇಳ ಬಹುದು. ದೇಶ ಕಾಯುವ ಯೋಧರು, ಮಾಹಿತಿ ನೀಡಿ ರಕ್ಷಿಸುವ ಮಾಧ್ಯಮ ದವರು, ನಮ್ಮನ್ನು ಒಂದೆಡೆ ಯಿಂದ ಇನ್ನೊಂದೆಡೆಗೆ ಸಾಗಿಸುವ ಸಾರಿಗೆಯವರು, ರೋಗ ಗುಣಪಡಿಸುವ ವೈದ್ಯರು, ಅನ್ನ ನೀಡುವ ರೈತರು, ಅಕ್ಷರ ಕಲಿಸುವ ಗುರುಗಳು, ಆರಕ್ಷಕರು ಇವರೆಲ್ಲ ನಮ್ಮ ರಕ್ಷಕರೇ. ಹೀಗೇ ಹಲವಾರು ಪ್ರಾಮಾಣಿಕ ಶಕ್ತಿಗಳು ನಮ್ಮ ರಕ್ಷಕರೇ ಆಗಿರುವರು. ಇವರೊಂದಿಗೆ ಸಾಧ್ಯ ವಾದಷ್ಟು ಭಾವ ಬಂಧವ ದಾರದೊಂದಿಗೆ ಬೆಸೆಯೋಣ. ಈ ಸಲದ ರಕ್ಷಾಬಂಧನವನ್ನು ಅರಿತು ಅರಿವಿರುವವರೊಂದಿಗೆ ಅರಿವಿಗಾಗಿ ಆಚರಿಸಿ ಸಂಬಂಧದ ಬಂಧವನ್ನು ಉಳಿಸೋಣ.
Related Articles
Advertisement