Advertisement
ಯಾವುದೇ ಶುಭ ಕಾರ್ಯಕ್ರಮಗಳನ್ನು ಆರಂಭ ಮಾಡುವ ಮುನ್ನ ಕೈಗೆ ಅರಶಿನ ದಾರದಿಂದ ಅರಶಿನ ಕೊಂಬು ಸಹಿತ ಕೂಡಿದ ಕಂಕಣ ಕಟ್ಟುವ, ಬೆರಳಿಗೆ ಧರ್ಬೆಯ ಕೂರ್ಚದಿಂದ ಮಾಡಿರುವ ಪವಿತ್ರ ಧರಿಸುವ ಕ್ರಮವಿದೆ. ಎಲ್ಲಿಯವರೆಗೆ ಉದ್ದೇಶಿತ ಆ ಕಾರ್ಯಕ್ರಮ ಇರುತ್ತದೋ ಅಲ್ಲಿಯವರೆಗೆ ಆ ಕಂಕಣ, ಪವಿತ್ರ ನಮ್ಮ ಕೈಯಲ್ಲಿರಬೇಕು. ಅದು ನಮ್ಮನ್ನು ಸದಾ ಯಾವ ಕಾರ್ಯಕ್ಕಾಗಿ ನಾವು ಸಿದ್ದರಾಗಿದ್ದೇವೆಯೋ ಅದಕ್ಕೆ ಬದ್ಧ ರಾಗಿರುವಂತೆ ಪ್ರೇರೇಪಿಸುತ್ತಿರುತ್ತದೆ. ಆ ನೆಲೆಯಲ್ಲಿ ಶ್ರಾವಣ ಹುಣ್ಣಿಮೆಯಂದು ಆಚರಿಸಿಕೊಳ್ಳುವ ಸಹೋ ದರತೆಯ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬಕ್ಕಿರುವ ಮಹತ್ವ ಹಿರಿದು. ಹೌದು, ಇಂದು ನಾವು ಪರಸ್ಪರ ಕಟ್ಟಿಕೊಳ್ಳುವ ಈ ರಕ್ಷೆ ರಾಷ್ಟ್ರ ಕಾರ್ಯದಲ್ಲಿ ಸದಾ ಎಚ್ಚರದಲ್ಲಿ ಇರುವಂತೆ ಪ್ರೇರೇಪಿಸಬೇಕಾಗಿದೆ.
Related Articles
Advertisement
ಆರೋಗ್ಯ ಸುರಕ್ಷೆಯ ಸವಾಲು: ಕಳೆದ ಒಂದೂವರೆ, ಎರಡು ವರ್ಷ ಗಳಿಂದ ಇಡೀ ಜಗತ್ತು ಕಣ್ಣಿಗೆ ಕಾಣದಿರುವ ಒಂದು ಯಕಶ್ಚಿತ್ ವೈರಸ್‌ನ ಕಾರಣದಿಂದ ನಲುಗುತ್ತಿದೆ. ಒಂದು ಕಡೆ ಮಂಗಳನ ಅಂಗಳದಲ್ಲಿ ಮನೆ ಮಾಡಲು ಮನುಷ್ಯ ಸಿದ್ಧತೆ ನಡೆಸುವ ಹೊತ್ತಿನಲ್ಲೇ, ತನ್ನದೇ ಮನೆಯ ಅಂಗಳಕ್ಕೆ ಇಳಿಯಲು ಹತ್ತು ಬಾರಿ ಯೋಚಿಸುವ ಸ್ಥಿತಿ ನಮ್ಮ ಮುಂದೆ ಇರುವುದು ವಿಪರ್ಯಾಸ. ಒಂದು ರೋಗಾಣು ಆಧುನಿಕ ಮನುಷ್ಯನ ವೈಜ್ಞಾನಿಕ ಪ್ರಗತಿಗೆ ಸವಾಲು ಹಾಕುವಂತೆ ರಣಕೇಕೆ ಹಾಕುತ್ತಿದೆ. ಇಡೀ ಜಗತ್ತು ಇಂದು ಆರೋಗ್ಯ ಸುರಕ್ಷೆಯ ಬಗ್ಗೆ ಚರ್ಚಿಸುತ್ತಿದೆ. ಇನ್ನೂ ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯದ ಅಷ್ಟೇನೂ ಕಾಳಜಿ ಹೊಂದಿರದ ನಮ್ಮ ದೇಶದ ಅರೋಗ್ಯ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವುದೇ ಮತ್ತು ಅದು ಕಳೆದ ಒಂದೂವರೆ ವರ್ಷಗಳಲ್ಲಿ ಜಗಜ್ಜಾಹೀರು ಆಗಿದೆ ಅಷ್ಟೇ. ಆದರೂ ನಮ್ಮ ಜನಸಾಂದ್ರತೆಯನ್ನು ಹೋಲಿಕೆ ಮಾಡಿದರೆ ನಮ್ಮಲ್ಲಿ ಈ ಕೊರೊನಾ ಉಂಟುಮಾಡಿರುವ ಉಪದ್ವಾತ ಕಡಿಮೆ ಎಂದೇ ಹೇಳಬಹುದು. ಅದಕ್ಕೆ ಬಹಳ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ. ನಿತ್ಯ ಅಡುಗೆಯಲ್ಲಿ ಬಳಸಲ್ಪಡುತ್ತಿರುವ ಈ ಆನೇಕ ಸಂಬಾರ ಪದಾರ್ಥಗಳು ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಮುಖ್ಯ ಪ್ರಭಾವ ಬೀರಿದೆ ಎಂಬುದು ಆನುಭವ ಜನ್ಯ. ಆದರೆ ಇಂದು ಆಧುನಿಕ, ಪಾಶ್ಚಾತ್ಯ ಆಹಾರ ಪದ್ಧತಿಗಳಿಗೆ ಮಾರು ಹೋಗಿ ತಮ್ಮತನವನ್ನು ಕಳಕೊಳ್ಳುತ್ತಿರುವ ಎಲ್ಲರಿಗೂ ಎಚ್ಚೆತ್ತುಕೊಳಕ್ಷೆು ಇದು ಸಕಾಲ.
ಶಿಕ್ಷಣ ಸುರಕ್ಷೆ: ಯಾವುದೇ ಒಂದು ರಾಷ್ಟ್ರಕ್ಕೆ ತನ್ನದೇ ಆದ ಒಂದು ಶಿಕ್ಷಣ ನೀತಿ ಇರಬೇಕಾದುದು ಅತೀ ಅಗತ್ಯಗಳಲ್ಲಿ ಒಂದು. ಕೇವಲ ಅಂಕ, ಗ್ರೇಡ್ ಆಧಾರಿತ ಶಿಕ್ಷಣ ವ್ಯವಸ್ಥೆಯಿಂದ ಶಿಕ್ಷಣ ಕಲಿತ ವಿದ್ಯಾರ್ಥಿ, ಸ್ವಂತ ವಿವೇಕ, ವಿವೇಚನೆಗಳಿಂದ ಮುಕ್ತನಾಗಿ ವಿಶ್ವ ವಿದ್ಯಾನಿಲಯಗಳಿಂದ ಕೇವಲ ಉದ್ಯೋಗ ಪಡೆಯುವ ಪ್ರಮಾಣಪತ್ರ ಪಡೆಯುವುದಕ್ಕಷ್ಟೇ ಸೀಮಿತವಾಗಿರುವುದನ್ನು ಕಾಣುತ್ತಿದ್ದೇವೆ. ನಮ್ಮ ಜೀವನಕ್ಕೆ ಬೇಕಾದ ಯಾವ ಮೌಲ್ಯ, ಶಕ್ತಿ, ಸಾಮರ್ಥ್ಯವನ್ನು ಇಂದಿನ ಆಧುನಿಕ ಶಿಕ್ಷಣ ಪದ್ಧತಿ ನಮಗೆ ಕಲಿಸಿಕೊಡುವುದಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಜಾರಿಗೊಳ್ಳುತ್ತಿದೆ. ಈ ಕುರಿತು ಒಂದು ವ್ಯಾಪಕವಾದ ಧನಾತ್ಮಕ ಚರ್ಚೆ ಸಮಾಜದಲ್ಲಾಗಬೇಕಾಗಿದೆ.
ಒಂದು ಸ್ವಾವಲಂಬಿ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಇವೆಲ್ಲವೂ ಪೂರಕ, ಪ್ರೇರಕ. ಆಂತರಿಕ, ಬಾಹ್ಯ, ಬಲಿಷ್ಠ ಸುರಕ್ಷೆಯೊಂದಿಗೆ ಸ್ವಾಸ್ಥ್ಯಪೂರ್ಣ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರ ಭಾವದಿಂದ ನಾವು ಇಂದು ಕಟ್ಟಿಕೊಳ್ಳುತ್ತಿರುವ ರಕ್ಷೆ ಪ್ರೇರಣೆ ನೀಡಲಿ ಎಂಬುದು ಸದಾಶಯ.
– ಚಂದ್ರಶೇಖರ ಆಚಾರ್ಯ ಕೈಯಬೆ