ಮುಂಬಯಿ: ವಂಚನೆ ಹಾಗೂ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿ ಇರಾನಿ ಯುವತಿಯೊಬ್ಬಳು ಮೈಸೂರಿನ ವಿವಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಟಿ ರಾಖಿ ಸಾವಂತ್ ಆದಿಲ್ ಖಾನ್ ವಿರುದ್ಧ ವಂಚನೆ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪವನ್ನು ಮಾಡಿ, ಓಶಿವಾರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ಬಳಿಕ ಅನೇಕ ಬಾರಿ ಆದಿಲ್ ವಿರುದ್ಧ ನಾನಾ ರೀತಿಯಲ್ಲಿ ಆರೋಪಗಳನ್ನು ರಾಖಿ ಮಾಡಿದ್ದು, ಯಾವುದೇ ರೀತಿಯ ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲ. ಇನ್ನು ನಾನು ಆತನಿಂದವಿಚ್ಛೇದನ ಪಡೆಯಲು ನಿರ್ಧರಿಸಿದ್ದೇನೆ ಎಂದು ರಾಖಿ ಹೇಳಿದ್ದರು.
ಸದ್ಯ ರಾಖಿಯ ಆರೋಪಗಳಿಂದ ಪ್ರಕರಣ ತನಿಖೆಯ ಹಂತದಲ್ಲಿ ಇರುವಾಗಲೇ ಮೈಸೂರಿನಲ್ಲಿ ಇರಾನಿ ಯುವತಿಯೊಬ್ಬಳು ಅತ್ಯಾಚಾರ ಆರೋಪವನ್ನು ಮಾಡಿ ಆದಿಲ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಿಲಿಂಡರ್ ಸ್ಫೋಟ: 12 ದಿನದ ನವಜಾತ ಶಿಶು ಸೇರಿ ಇಬ್ಬರು ಮಕ್ಕಳು ಮೃತ್ಯು; ಹಲವರಿಗೆ ಗಾಯ
ಮೈಸೂರಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾಗ ಮದುವೆಯ ನೆಪದಲ್ಲಿ ಆದಿಲ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾಳೆ. ಐದು ತಿಂಗಳ ಹಿಂದೆ ಆತನನ್ನು ಮದುವೆಯಾಗುವಂತೆ ಬೇಡಿಕೆ ಇಟ್ಟಾಗ ಅದನ್ನು ತಿರಸ್ಕರಿಸಿದ ಆತ ಅನೇಕ ಹುಡುಗಿಯರೊಂದಿಗೆ ಇದೇ ರೀತಿಯ ಸಂಬಂಧವನ್ನು ಹೊಂದಿದ್ದಾನೆ ಎಂದು ಹೇಳಿದ್ದಾಳೆ. ಆತ ನನ್ನ ಖಾಸಗಿ ಫೋಟೋಗಳನ್ನು ಕಳುಹಿಸಿ, ಯಾರಿಗೆ ದೂರು ನೀಡಬೇಡ ಎಂದು ಬ್ಲ್ಯಾಕ್ ಮೇಲ್ ಹಾಗೂ ಬೆದರಿಕೆಯನ್ನು ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ. ಐಪಿಸಿ ಸೆಕ್ಷನ್ 376, 417,420, 504 ಮತ್ತು 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇತ್ತೀಚೆಗೆ ನಟಿ ರಾಖಿ ಆದಿಲ್ ತನಗೆ ಮೋಸ ಮಾಡಿದ್ದಾನೆ. ಆತ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ. ನನ್ನ ಚಿನ್ನ ಹಾಗೂ ಹಣವನ್ನು ತಿಂದು, ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ರಾಖಿ ಆರೋಪ ಮಾಡಿದ್ದಾರೆ.