ಮಣಿಪಾಲ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಏತನ್ಮಧ್ಯೆ ಗಣರಾಜ್ಯೋತ್ಸವದಂದು ರೈತರು ನಡೆಸಿದ ಟ್ರ್ಯಾಕ್ಟರ್ ರಾಲಿ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ರೈತ ಸಂಘಟನೆಯೊಳಗೆ ಬಿರುಕು ಮೂಡಿದೆ. ಇದೀಗ ಭಾರತೀಯ ಕಿಸಾನ್ ಸಂಘದ ರಾಕೇಶ್ ಟಿಕಾಯತ್ ಕೇಂದ್ರ ಬಿಂದುವಾಗಿದ್ದಾರೆ. ಈ ರಾಕೇಶ್ ಟಿಕಾಯತ್ ಯಾರು? ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಮಂಗಳೂರಿನಲ್ಲಿ ಗಲಭೆ ಮಾಡಲು ಹುನ್ನಾರ: ಮಾಯಾ ಗ್ಯಾಂಗ್ ಜೊತೆ ಇದೀಗ ‘ಕಾರ್ಖಾನಾ’ ಗ್ಯಾಂಗ್ ಬಂಧನ
ದೆಹಲಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಟಿಕಾಯತ್ ಕೆಲಸ:
ರಾಕೇಶ್ ಟಿಕಾಯತ್ ಮುಜಾಫರ್ ನಗರ್ ಜಿಲ್ಲೆಯ ಸಿಸೌಲಿ ಗ್ರಾಮದಲ್ಲಿ 1959ರ ಜೂನ್ 4ರಂದು ಜನಿಸಿದ್ದರು. ಇವರ ತಂದೆ ಮಹೇಂದ್ರ ಸಿಂಗ್ ಟಿಕಾಯತ್, ಭಾರತೀಯ ರೈತ ಸಂಘಟನೆಯ ಮಾಜಿ ಅಧ್ಯಕ್ಷರಾಗಿದ್ದರು. ಎಲ್ ಎಲ್ ಬಿ ಪದವಿ ಪಡೆದಿರುವ ರಾಕೇಶ್ ಟಿಕಾಯತ್ 1985ರಲ್ಲಿ ಸುನೀತಾ ದೇವಿ ಅವರನ್ನು ವಿವಾಹವಾಗಿದ್ದರು. 1985ರಲ್ಲಿಯೇ ದೆಹಲಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದರು. 1990ರಲ್ಲಿ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಮುಂದಾಳತ್ವದಲ್ಲಿ ದೆಹಲಿ ಕೆಂಪುಕೋಟೆಗೆ ರೈತರ ಮುತ್ತಿಗೆ ಚಳವಳಿ ನಡೆದಿತ್ತು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಂದೆ ರಾಕೇಶ್ ಟಿಕಾಯತ್ ಅವರ ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರ ಒತ್ತಡ ಹೇರಿತ್ತು. ಈ ವೇಳೆ ರಾಕೇಶ್ ಟಿಕಾಯತ್ ಎಸ್ ಐ ಹುದ್ದೆಗೆ ರಾಜೀನಾಮೆ ನೀಡಿ ರೈತರ ಪ್ರತಿಭಟನೆಗೆ ಕೈಜೋಡಿಸಿದ್ದರು.
ರೈತ ನಾಯಕನಾಗುವ ಮುನ್ನ ರಾಕೇಶ್ ಟಿಕಾಯತ್ ಅವರು ದೆಹಲಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲ ರೈತ ಪರ ಹೋರಾಟದಿಂದಾಗಿ ಬರೋಬ್ಬರಿ 44 ಬಾರಿ ಜೈಲುಶಿಕ್ಷೆ ಅನುಭವಿಸಿದ್ದಾರೆ.
ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ್ದ ರಾಕೇಶ್ ಟಿಕಾಯತ್ ಅವರನ್ನು ಮಧ್ಯಪ್ರದೇಶದಲ್ಲಿ 39 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿತ್ತು. ನಂತರ ಕಬ್ಬಿನ ಬೆಲೆಯನ್ನು ಹೆಚ್ಚಿಸುವಂತೆ ದೆಹಲಿಯ ಸಂಸತ್ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದ ಟಿಕಾಯತ್ ಅವರನ್ನು ತಿಹಾರ್ ಜೈಲಿಗೆ ಹಾಕಲಾಗಿತ್ತು. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಜೈಪುರ್ ಜೈಲುವಾಸವನ್ನು ಟಿಕಾಯತ್ ಅನುಭವಿಸಿದ್ದರು.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ರೈತರ ಟ್ರ್ಯಾಕ್ಟರ್ ರಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್ ಟಿಕಾಯತ್ ವಿರುದ್ಧ ಹಲವು ಎಫ್ ಐಆರ್ ದಾಖಲಾಗಿದೆ. ತಾನು ಯಾವುದೇ ಕಾರಣಕ್ಕೂ ಪ್ರತಿಭಟನೆ ಅಂತ್ಯಗೊಳಿಸಲ್ಲ ಎಂದು ಪಟ್ಟು ಹಿಡಿದಿರುವ ರಾಕೇಶ್, ಆತ್ಮಹತ್ಯೆ ಮಾಡಿಕೊಳ್ಳುವೆ, ಆದರೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯದಲ್ಲಿ ಸೋಲಿನ ರುಚಿ:
ಜನಪ್ರಿಯ ರೈತ ನಾಯಕರಾಗಿ ಹೊರಹೊಮ್ಮಿದ್ದ ರಾಕೇಶ್ ಟಿಕಾಯತ್ ಎರಡು ಬಾರಿ ರಾಜಕೀಯ ಅಖಾಡದಲ್ಲಿ ಸ್ಪರ್ಧಿಸುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದರು. 2007ರಲ್ಲಿ ಮುಜಾಫರ್ ನಗರದ ಖಾಟೌಲಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ನಂತರ 2014ರಲ್ಲಿ ಆಮ್ರೋಹ್ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್ ದಳ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಆದರೆ ಎರಡು ಚುನಾವಣೆಯಲ್ಲಿಯೂ ಟಿಕಾಯತ್ ಪರಾಜಯಗೊಂಡಿದ್ದರು.
ತಂದೆ ಮಹೇಂದ್ರ ಸಿಂಗ್ ಪ್ರಭಾವಶಾಲಿ ರೈತ ನಾಯಕ:
ಮಾಜಿ ರೈತ ಮುಖಂಡ ಮಹೇಂದ್ರ ಸಿಂಗ್ ಟಿಕಾಯತ್ ಪುತ್ರರಾಗಿರುವ ರಾಕೇಶ್ ಟಿಕಾಯತ್, ತಂದೆಯ ನಿಧನದ ನಂತರ ರೈತರ ಸಮಸ್ಯೆ ಕುರಿತು ರಾಕೇಶ್ ಚಳವಳಿಯನ್ನು ಮುಂದುವರಿಸಿದ್ದರು. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಸಮಯದಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಬಹುದೊಡ್ಡ ರೈತ ನಾಯಕರಾಗಿದ್ದರು. ಆ ನಿಟ್ಟಿನಲ್ಲಿ ರಾಕೇಶ್ ಟಿಕಾಯತ್ ಕೂಡಾ ಉತ್ತರಪ್ರದೇಶದಲ್ಲಿ ಪ್ರಭಾವಶಾಲಿ ನಾಯಕರೆನಿಸಿಕೊಂಡಿದ್ದಾರೆ.
ಮಹೇಂದ್ರ ಸಿಂಗ್ ಟಿಕಾಯತ್ ಗೆ ರೈತರ ಭಾರೀ ಬೆಂಬಲ ಇ್ತು. ಇದರಿಂದಾಗಿ ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೆಹಲಿ ರಾಜಕೀಯವನ್ನೇ ಅಲುಗಾಡಿಸುವಷ್ಟು ಪ್ರಭಾವ ಹೊಂದಿದ್ದರು ಎಂದು ವರದಿ ತಿಳಿಸಿದೆ.
1987ರಲ್ಲಿ ಶಾಮಿಲಿ ಜಿಲ್ಲೆಯ ಕರ್ಮುಖೇರಿಯಲ್ಲಿ ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ದೊಡ್ಡ ಮಟ್ಟದ ರೈತ ಚಳವಳಿ ನಡೆದಿತ್ತು. ಈ ಸಂದರ್ಭದಲ್ಲಿ ಜೈಪಾಲ್ ಮತ್ತು ಅಕ್ಬರ್ ಎಂಬ ಇಬ್ಬರು ರೈತರು ಪೊಲೀಸ್ ಗೋಲಿಬಾರ್ ಗೆ ಬಲಿಯಾಗಿದ್ದರು. ಬಳಿಕ ಸಿಂಗ್ ಭಾರತೀಯ ಕಿಸಾನ್ ಸಂಘ(ಬಿಕೆಯು)ವನ್ನು ಸ್ಥಾಪಿಸಿದ್ದರು.
1988ರಲ್ಲಿ ರಾಜೀವ್ ಗಾಂಧಿ ಸರ್ಕಾರದ ವಿರುದ್ಧ ರಣಕಹಳೆ:
ಕುತೂಹಲಕಾರಿ ವಿಷಯವೇನೆಂದರೆ 1988ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರು ಉತ್ತರಪ್ರದೇಶದಿಂದ ಸುಮಾರು 5 ಲಕ್ಷ ರೈತರೊಂದಿಗೆ ಟ್ರ್ಯಾಕ್ಟರ್ ಮೂಲಕ ದೆಹಲಿಯ ಬೋಟ್ ಕ್ಲಬ್ ಪ್ರದೇಶದಲ್ಲಿ ಪ್ರತಿಭಟನೆಗೆ ಇಳಿದುಬಿಟ್ಟಿದ್ದರು. ಒಂದು ವಾರಗಳ ಕಾಲ ನಡೆದ ತೀವ್ರ ಪ್ರತಿಭಟನೆಯಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಬಿದ್ದಿತ್ತು. ಇದರ ಪರಿಣಾಮ ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ಹೆಚ್ಚಳ, ರೈತರ ವಿದ್ಯುತ್ ಬಿಲ್ ಮನ್ನಾ ಸೇರಿದಂತೆ 35 ಬೇಡಿಕೆಗಳನ್ನು ಈಡೇರಿಸಿಬಿಟ್ಟಿತ್ತು.