ನಟ ರಾಕೇಶ್ ಅಡಿಗ ಈಗ ನಿರ್ದೇಶಕರಾಗಿದ್ದಾರೆ. ಹೌದು, “ಜೋಶ್’ ಮೂಲಕ ನಾಯಕರಾದ ಅವರು, ಇದೀಗ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಅವರು ಸದ್ದಿಲ್ಲದೆಯೇ ಚೊಚ್ಚಲ ನಿರ್ದೇಶನ ಚಿತ್ರದ ಮೊದಲ ಹಂತವನ್ನೂ ಮುಗಿಸಿದ್ದಾರೆ. ಇಂತಿಪ್ಪ, ಆ ಚಿತ್ರಕ್ಕೆ “ನೈಟ್ ಔಟ್’ ಎಂಬ ಹೆಸರಿಡಲಾಗಿದ್ದು, ಅಮೇರಿಕಾದಲ್ಲಿರುವ ಡಾಕ್ಟರ್ ನವೀನ್ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ.
ಇವರಿಗಿದು ಮೊದಲ ಅನುಭವ. ಚಿತ್ರದಲ್ಲಿ ಭರತ್ ಮತ್ತು ಅಕ್ಷಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, “ಸಂಕಷ್ಟಕರ ಗಣಪತಿ’ ಚಿತ್ರದ ನಾಯಕಿ ಶ್ರುತಿ ಗೊರಾಡಿಯ ಚಿತ್ರದ ನಾಯಕಿ. “ಕಡ್ಡಿಪುಡಿ’ ಚಂದ್ರು ಅವರು ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಇಲ್ಲಿ ರಾಕೇಶ್ ಅಡಿಗ ಕೇವಲ ನಿರ್ದೇಶನದತ್ತ ಮಾತ್ರ ತಮ್ಮ ಚಿತ್ತ ಹರಿಸಿದ್ದಾರೆ.
ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಕಾರಣ, ನಿರ್ದೇಶನ ಮತ್ತು ನಟನೆ ಎರಡನ್ನೂ ನಿರ್ವಹಿಸುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಅದರಲ್ಲೂ ಮೊದಲ ನಿರ್ದೇಶನವಾಗಿರುವುದರಿಂದ ಒಂದೇ ಕಡೆ ಗಮನಹರಿಸಬೇಕೆಂಬ ಉದ್ದೇಶದಿಂದ ನಿರ್ದೇಶನ ಮಾತ್ರ ಮಾಡುತ್ತಿದ್ದಾರೆ. ಇನ್ನು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಅವರೇ ಬರೆದಿದ್ದಾರೆ.
ತಮ್ಮ ಗೆಳೆಯ ಜೊತೆಗೂಡಿ ಸಂಭಾಷಣೆ ಬರೆದಿದ್ದಾರೆ. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಯುತ್ತಿದೆ. ಎಲ್ಲಾ ಸರಿ, ಚಿತ್ರದ ಶೀರ್ಷಿಕೆ ಕೇಳಿದರೆ, ಇದೊಂದು ರಾತ್ರಿಯಲ್ಲಿ ನಡೆಯುವ ಕಥೆ ಎನಿಸುತ್ತದೆ. ಇಬ್ಬರು ಗೆಳೆಯರ ನಡುವಿನ ಸ್ಟೋರಿ ಇಲ್ಲಿದೆ. ಕೇವಲ 6 ಗಂಟೆಯಲ್ಲಿ ಏನೇನೆಲ್ಲಾ ನಡೆಯುತ್ತೋ ಅದೇ ಚಿತ್ರದ ಜೀವಾಳವಂತೆ.
“ಇದು ಕೇವಲ ಆರು ಗಂಟೆಯಲ್ಲಿ ನಡೆಯುವ ಕಥೆ. ಬೆಂಗಳೂರಿನ ಆಚೆ ಇರುವ ಒಂದು ಗ್ರಾಮದಲ್ಲಿ ಚಿತ್ರದ ಪಾತ್ರಧಾರಿ ಹುಚ್ಚನಂತೆ ಓಡಾಡುತ್ತ, ಕಿರುಚಾಡುತ್ತಿರುತ್ತಾನೆ. ಆರು ಗಂಟೆ ಹಿಂದಕ್ಕೆ ಬಂದರೆ, ರಾತ್ರಿ 12 ಗಂಟೆಯಲ್ಲಿ ಬಾರ್‌ವೊಂದರ ದೃಶ್ಯ ಶುರುವಾಗುತ್ತೆ. ಅಲ್ಲಿಂದ ಕಥೆ ಬಿಚ್ಚಿಕೊಳ್ಳುತ್ತದೆ. ಅವನು ಯಾಕೆ ಹುಚ್ಚನಂತೆ ಓಡಾಡ್ತಾನೆ, ಅದರ ಹಿಂದಿನ ಕಥೆ ಏನೆಂಬುದು ಸಸ್ಪೆನ್ಸ್.
ಒಂದು ಹಂತ ಮುಗಿದಿದ್ದು, ಇಷ್ಟರಲ್ಲೇ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಹೊರಡಲಿದೆ’ ಎನ್ನುತ್ತಾರೆ ರಾಕೇಶ್. ರಾಕೇಶ್ ಅಡಿಗ ಅವರಿಗೆ ನಟನೆಗಿಂತ ನಿರ್ದೇಶನ ಇಷ್ಟವಿದ್ದುದರಿಂದಲೇ ಈಗ ನಿರ್ದೇಶನಕ್ಕೆ ಅಣಿಯಾಗಿದ್ದಾರಂತೆ. ಅವರು ಹತ್ತನೇ ತರಗತಿ ಓದುವಾಗಲೇ, ಕಿರುಚಿತ್ರಗಳಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ನೋಡುತ್ತಿದ್ದರು. ಶಿವಮಣಿ ಅವರೊಂದಿಗೆ ಕಥೆ ಬರೆಯುವುದನ್ನು ಕಲಿತ ಅವರು, ಅನೇಕ ತಪ್ಪು,
ಸರಿಗಳನ್ನು ಶಿವಮಣಿ ಅವರಿಂದಲೇ ಕಲಿಸಿದ್ದಾರೆ. ಈಗ ಒಂದೊಳ್ಳೆಯ ಕಥೆ ಮಾಡಿಕೊಂಡು, ಚಿತ್ರ ಮಾಡಲು ಹೊರಟಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಅರುಣ್ ಅಲೆಕ್ಸಾಂಡ್ ಛಾಯಾಗ್ರಹಣವಿದೆ. ಸಮೀರ್ ಕುಲಕರ್ಣಿ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ಎರಡು ಬಿಟ್ ಇದೆ. ರ್ಯಾಪ್ ಹಾಡೊಂದಕ್ಕೆ ರಾಕೇಶ್ ಅಡಿಗ ಸಾಹಿತ್ಯ ರಚಿಸುತ್ತಿದ್ದಾರೆ. ಉಳಿದಂತೆ ಕಲ್ಯಾಣ್ ಮತ್ತೆ ಹೊಸಬರಿಂದ ಹಾಡು ಬರೆಸುವ ಯೋಚನೆ ಚಿತ್ರತಂಡದ್ದು.