Advertisement

“ಪಪ್ಪುಸಿ’ಖ್ಯಾತಿಯ ನಟ ರಾಕೇಶ್‌ ನಿಧನ

11:59 AM Oct 03, 2017 | |

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ, “ಚೆಲುವಿನ ಚಿತ್ತಾರ’ ಚಿತ್ರದ “ಬುಲ್ಲಿ’ ಪಾತ್ರದಲ್ಲಿ ನಟಿಸಿ ಅಪಾರ ಜನಮನ್ನಣೆ ಗಳಿಸಿದ್ದ ರಾಕೇಶ್‌ (21) ಅನಾರೋಗ್ಯದಿಂದ ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ. ಗ್ಯಾಂಗ್ರೀನ್‌ ಸಮಸ್ಯೆಯಿಂದ ಬಳಲುತ್ತಿದ್ದ ನಟ ರಾಕೇಶ್‌, ಕಳೆದ ಎರಡು ತಿಂಗಳ ಹಿಂದಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇತ್ತೀಚೆಗೆ ಕೋರಮಂಗಲದ ಸೇಂಟ್‌ ಜಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

Advertisement

ಆದರೆ, ದುರಾದೃಷ್ಟವಶಾತ್‌ ಚಿಕಿತ್ಸೆ ಫ‌ಲಿಸದೇ ಸೋಮವಾರ ಸಂಜೆ 7.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ರಾಜೇಶ್‌ ಸಾವಿಗೆ ಚಿತ್ರರಂಗದ ಗಣ್ಯರು, ಕಲಾವಿದರು, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಮೂಡಲಪಾಳ್ಯದ ನಿವಾಸಿಯಾಗಿದ್ದ ರಾಜೇಶ್‌ರ ತಾಯಿ ಆಶಾರಾಣಿ ಕೂಡ ನಟಿಯಾಗಿದ್ದು, ಕುಟುಂಬ ವರ್ಗಕ್ಕೆ ಮೊದಲಿನಿಂದಲೂ ಚಿತ್ರರಂಗದ ನಂಟಿತ್ತು.

ಎಸ್‌. ನಾರಾಯಣ್‌ ನಿರ್ದೇಶನದ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಜೇಶ್‌, ಬುಲ್ಲಿ ಪಾತ್ರದ ಮೂಲಕ ಮನೆಮಾತಾಗಿದ್ದರು. ಅವರ “ಪಪ್ಪುಸಿ’ (ಪೆಪ್ಸಿ) ಡೈಲಾಗ್‌ಗೆ ಚಿತ್ರರಸಿಕರು ಮನಸೂತಿದ್ದರು.

ಇದಾದ ಬಳಿಕ ಶಿವರಾಜ್‌ ಕುಮಾರ್‌ ನಟನೆಯ “ಭಜರಂಗಿ’, “ಬಂಧುಬಳಗ’, ದರ್ಶನ್‌ ಅಭಿನಯದ “ಅಭಯ್‌’, “ಅರ್ಜುನ್‌’, ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಹುಡುಗರು’, ಇದಲ್ಲದೆ “ಮೊದಲಾಸಲ’, “ಜಾನಿ ಮೇರಾನಾಮ್‌’, “ಅಕ್ಕ ತಂಗಿ’, “ಪ್ರೇಮ್‌ ಕಹಾನಿ’, “ಕೃಷ್ಣನ್‌ ಲವ್‌ ಸ್ಟೋರಿ’ ಸೇರಿದಂತೆ 45ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ರಾಕೇಶ್‌ ನಟಿಸಿದ್ದರು.

ಅಲ್ಲದೆ ಮೊದಲ ಬಾರಿ “ಧೂಮಪಾನ’ ಹೆಸರಿನ ಚಿತ್ರದಲ್ಲಿ ನಾಯಕನಟನಾಗಿ ನಟಿಸಿದ್ದರು. ಮಂಗಳವಾರ ಮೂಡಲಪಾಳ್ಯದ ನಿವಾಸದ ಬಳಿ ರಾಕೇಶ್‌ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಿ, ಆ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ರಾಕೇಶ್‌ರ ಕುಟುಂಬದ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next