Advertisement
2020ರಲ್ಲಿ ಕೊರೊನಾದಿಂದಾಗಿ ಹಾಗೂ 2021ರಲ್ಲಿ ಪುನೀತ್ ರಾಜಕುಮಾರ ನಿಧನದಿಂದಾಗಿ ಸರಳವಾಗಿ ಆಚರಣೆಯಾಗಿದ್ದ ಕರ್ನಾಟಕ ರಾಜ್ಯೋತ್ಸವ ಈ ಬಾರಿ ಅದ್ಧೂರಿಯಾಗಿ ನೆರವೇರಲಿದೆ. ಅದಕ್ಕಾಗಿ ಜಿಲ್ಲಾಡಳಿತ ಹಾಗೂ ಕನ್ನಡ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ. ಈ ಉತ್ಸವ ಇಡೀ ರಾಜ್ಯದಲ್ಲಿ ಮಾದರಿ ಆಗುವಂತೆ ಮಾಡಲು ತಯಾರಿ ನಡೆದಿದ್ದು, ಆದರೆ ನಾಡದ್ರೋಹಿ ಎಂಇಎಸ್ ಕರಾಳ ದಿನ ಆಚರಿಸುತ್ತಿದೆ.
Related Articles
Advertisement
ಗತವೈಭವ ಸಾರುವ ರೂಪಕಗಳು:
ಕರ್ನಾಟಕ ರಾಜ್ಯೋತ್ಸವಕ್ಕಾಗಿ ರೂಪಕಗಳ ಮೆರವಣಿಗೆಗಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ನಾಡಿನ ಗತವೈಭವ ಸಾರುವ, ಕಲೆ-ಸಂಸ್ಕೃತಿ ಬಿಂಬಿಸುವ ರೂಪಕಗಳನ್ನು ಮೆರವಣಿಗೆಯಲ್ಲಿ ತರುವಂತೆ ಆಯಾ ಇಲಾಖೆಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅದರಂತೆ ಕೆಲವೊಂದು ಇಲಾಖೆಗಳು ಈಗಾಗಲೇ ರೂಪಕಗಳ ತಯಾರಿಯಲ್ಲಿ ತೊಡಗಿವೆ. ಸುವರ್ಣ ವಿಧಾನಸೌಧ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ, ನಾಡಿನ ಖ್ಯಾತ ಸಾಹಿತಿಗಳು, ನಾಡಿನ ಪಾರಂಪರಿಕ ತಾಣಗಳು, ಪ್ರವಾಸಿ ತಾಣಗಳ ರೂಪಕಗಳು ರಾಜ್ಯೋತ್ಸವ ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.
ಕರ್ನಾಟಕ ರಾಜ್ಯೋತ್ಸವದ ವೈಭವದ ಮೆರವಣಿಗೆಗೆ ಬೆಳಗಾವಿ ಸಾಕ್ಷಿಯಾಗಲಿದೆ. ಅಂದು ಮೆರವಣಿಗೆ ವೀಕ್ಷಿಸಲು ಬೆಳಗಾವಿ ಸೇರಿದಂತೆ ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿಯಿಂದಲೂ ಜನರು ಆಗಮಿಸಲಿದ್ದಾರೆ. ಬೆಳಗಾವಿಯ ಹೃದಯಭಾಗ ರಾಣಿ ಚನ್ನಮ್ಮ ವೃತ್ತವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ.
ಡಿಜೆ-ಡಾಲ್ಬಿ ಹಾಡುಗಳಿಗೆ ಕನ್ನಡಿಗರು ಹೆಜ್ಜೆ ಹಾಕಲಿದ್ದಾರೆ. ಕನ್ನಡ ಹಾಡುಗಳು ಬೆಳಗಾವಿಯ ಮೆರವಣಿಗೆಯಲ್ಲಿ ಮಾರ್ದನಿಸಲಿವೆ. ಕನ್ನಡ ನಾಡು-ನುಡಿಗೆ ಸಂಬಂಧಿ ಸಿದ ಹಾಡುಗಳ ರಿಮಿಕ್ಸ್, ಡಿಜೆ ವರ್ಷನ್ ಮಾಡಲಾಗಿದೆ. ಶಿವರಾಜಕುಮಾರ, ಪುನೀತರಾಜಕುಮಾರ, ದರ್ಶನ, ರವಿಚಂದ್ರ ಸೇರಿದಂತೆ ಅನೇಕ ನಟರ ಚಿತ್ರಗಳಲ್ಲಿಯ ಕನ್ನಡಾಭಿಮಾನ ಬಿಂಬಿಸುವ ಹಾಡುಗಳಿಗೆ ಕನ್ನಡಿಗರು ಹುಚ್ಚೆದ್ದು ಕುಣಿಯಲಿದ್ದಾರೆ.
ಕರಾಳ ದಿನಕ್ಕೆ ಅನುಮತಿ ಇಲ್ಲ
ನ. 1ರಂದು ಎಂಇಎಸ್‌ನ ಕರಾಳ ದಿನಾಚರಣೆಗೆ ಅನುಮತಿ ನೀಡಿಲ್ಲ. ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ವೇಳೆ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗುವುದು. ಮೆರವಣಿಗೆ ಸಾಗುವ ಮಾರ್ಗದಲ್ಲಿ 350 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮೆರವಣಿಗೆ ಮೇಲೆ ನಿಗಾ ಇಡಲು 8 ಡ್ರೋಣ್ ಕ್ಯಾಮೆರಾ ಹಾರಾಡಲಿವೆ. ಕಮಿಷನರ್, ಮೂವರು ಡಿಸಿಪಿ, 12 ಜನ ಡಿಎಸ್‌ಪಿ, 60 ಜನ ಸಿಪಿಐ, 100 ಜನ ಪಿಎಸ್‌ಐ, 10 ಕೆಎಸ್ ಆರ್‌ಪಿ ತುಕಡಿ, 500 ಹೋಮ್ ಗಾರ್ಡ್, ಹೊರ ಜಿಲ್ಲೆಗಳಿಂದ 1200 ಸಿಬ್ಬಂದಿ ಸೇರಿ ಒಟ್ಟು 2500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ತಿಳಿಸಿದರು.
ಕನ್ನಡಿಗರಿಗೆ ಒಂದು ಲಕ್ಷ ಹೋಳಿಗೆ ಊಟ
ಈ ಬಾರಿಯ ಕರ್ನಾಟಕ ರಾಜ್ಯೋತ್ಸವಕ್ಕೆ ಹುಕ್ಕೇರಿ ಹಿರೇಮಠದಿಂದ ಒಂದು ಲಕ್ಷ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಬ್ಬರಿಗೆ ಎರಡು ಹೋಳಿಗೆಯಂತೆ 50 ಸಾವಿರ ಜನರಿಗೆ ಆಗುವಂತೆ ಒಂದು ಲಕ್ಷ ಹೋಳಿಗೆ ತಯಾರಿಸಿ ಊಟ ಹಾಕಲು ಹಿರೇಮಠ ಸಿದ್ಧತೆ ಮಾಡಿಕೊಂಡಿದೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ 200 ಬಾಣಸಿಗರು ಅಡುಗೆ ತಯಾರಿಸಲಿದ್ದು, ಇದರಲ್ಲಿ 150 ಮಹಿಳೆಯರು ಹೋಳಿಗೆ ಮಾಡಲಿದ್ದಾರೆ. ಹೋಳಿಗೆ, ಬದನೆಕಾಯಿ ಪಲ್ಯ, ಅನ್ನ, ಸಾರು, ಉಪ್ಪಿನಕಾಯಿ ವಿಶೇಷ ಮೆನ್ಯು ಇರಲಿದೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕನ್ನಡದ ಹಬ್ಬದಂದು ಕನ್ನಡಿಗರಿಗೆ ಹೋಳಿಗೆ ಊಟ ಹಾಕಿಸಲಿದ್ದಾರೆ.
-ಭೈರೋಬಾ ಕಾಂಬಳೆ