Advertisement

ರಾಜ್ಯೋತ್ಸವ ಪ್ರಶಸ್ತಿ ವಯೋಮಿತಿ, ಸಂಖ್ಯೆ ಸಡಿಲಿಕೆ?

10:40 PM Oct 16, 2019 | Lakshmi GovindaRaju |

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಯೋಮಿತಿ ಮತ್ತು ಪ್ರಶಸ್ತಿ ಪುರಸ್ಕೃತರ ಸಂಖ್ಯೆಯಲ್ಲಿ ಸಡಿಲಿಕೆಗೆ ಪ್ರಯತ್ನ ನಡೆದಿದಿಯೇ? ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಸಮಿತಿಯ ವರದಿ ಆಧಾರದಲ್ಲಿಯೇ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾಡುತ್ತಾರೆಯೇ? ಅಥವಾ ವಯೋಮಿತಿ ಸಡಿಲಿಕೆ ಹಾಗೂ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಾರಾ ಎಂಬ ಕುತೂಹಲ ಮೂಡಿದೆ.

Advertisement

ನವೆಂಬರ್‌ 1ರಂದು ನಡೆಯುವ 64ನೇ ಕನ್ನಡ ರಾಜ್ಯೋತ್ಸವಕ್ಕೆ ಪ್ರಶಸ್ತಿ ನೀಡುವಂತೆ ಈಗಾಗಲೇ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪುರಸ್ಕೃತರ ಆಯ್ಕೆ ಕುರಿತಂತೆ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದ್ದು, ಪ್ರಶಸ್ತಿ ಪುರಸ್ಕೃತರ ವಯೋಮಿತಿಯನ್ನು 60 ವರ್ಷದಿಂದ ಕಡಿಮೆ ಮಾಡುವ ಹಾಗೂ ರಾಜ್ಯೋತ್ಸವದ ವರ್ಷದಷ್ಟೇ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ನಿಗದಿಪಡಿಸುವ ನಿಯಮ ಸಡಿಲಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

1956ರಲ್ಲಿ ಕರ್ನಾಟಕ ಏಕೀಕರಣಗೊಂಡಿರುವುದರಿಂದ ಅಂದಿನಿಂದ ಪ್ರತಿ ವರ್ಷ ಒಂದು ಪ್ರಶಸ್ತಿಯನ್ನು ಹೆಚ್ಚಳ ಮಾಡಿ ನೀಡಲಾಗುತ್ತಿದೆ. 2009-10ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ದಾಖಲೆಯ 159 ಜನರಿಗೆ ಪ್ರಶಸ್ತಿ ನೀಡಲಾಗಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಕರ್ನಾಟಕ ಏಕೀಕರಣಗೊಂಡ ವರ್ಷದಿಂದ ಪ್ರತಿ ವರ್ಷ ಎಷ್ಟನೇ ರಾಜ್ಯೋತ್ಸವ ಆಚರಿಸಲಾಗುತ್ತದೆಯೋ, ಅಷ್ಟೇ ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎಂದು ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಅಷ್ಟೇ ಅಲ್ಲದೇ ಪ್ರಶಸ್ತಿ ಪುರಸ್ಕೃತರು 60 ವರ್ಷ ಮೀರಿರಬೇಕು. ಒಂದು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಬೇಕು. ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿಗಳನ್ನು ಪ್ರಶಸ್ತಿಗೆ ಪರಿಗಣಿಸಬಾರದು ಎಂದು ಶಿಫಾರಸು ಮಾಡಿದೆ. ಸಮಿತಿ ನೀಡಿದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೂ ಸಲ್ಲಿಸಿದ್ದು, ಅದರಂತೆ ಪ್ರತಿ ವರ್ಷ ರಾಜ್ಯೋತ್ಸವದ ವರ್ಷದಷ್ಟೇ ಪ್ರಶಸ್ತಿ ಪುರಸ್ಕೃತರು ಹಾಗೂ 60 ವರ್ಷ ಮೀರಿದವರಿಗೆ ನೀಡುವ ಸಂಪ್ರದಾಯ ರೂಢಿಸಿಕೊಂಡು ಬರಲಾಗುತ್ತಿದೆ.

ಈ ಬಾರಿ 64ನೇ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಅಷ್ಟೇ ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕಿದೆ. ಅಲ್ಲದೇ 60 ವರ್ಷ ಮೀರಿದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ನೇತೃತ್ವದ 18 ಸದಸ್ಯರನ್ನೊಳಗೊಂಡ ಪ್ರಶಸ್ತಿ ಸಲಹಾ ಸಮಿತಿ, ಪ್ರಾಥಮಿಕ ಹಂತದಲ್ಲಿಯೇ ಪ್ರಶಸ್ತಿ ಪುರಸ್ಕೃತ ಗಣ್ಯರ ಪಟ್ಟಿ ಸಿದ್ಧಪಡಿಸಲಿದೆ.

Advertisement

ಆ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಉಪ ಮುಖ್ಯಮಂತ್ರಿಗಳು, ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಹಿರಿಯ ಸಾಹಿತಿಗಳು ಸೇರಿ 17 ಸದಸ್ಯರನ್ನೊಳಗೊಂಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಸಲ್ಲಿಸಲಿದೆ. ನಂತರ, ಅಂತಿಮ ಆಯ್ಕೆ ನಡೆಯಲಿದೆ.

ಮಾನದಂಡ ರೂಪಿಸುವಂತೆ ಸೂಚನೆ: 2015ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ತಮ್ಮ ಸೇವೆಯನ್ನು ಪರಿಗಣಿಸದೆ ನಿರ್ಲಕ್ಷ್ಯ ಮಾಡಿದೆ ಎಂದು ಸಾಹಿತಿ ಬಿ.ವಿ. ಸತ್ಯ ನಾರಾಯಣ ಎನ್ನುವವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲದೆ, ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಯಾವುದೇ ಮಾನದಂಡ ಇಲ್ಲ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್‌, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸೂಕ್ತ ಮಾನದಂಡ ರೂಪಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿತ್ತು.

ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಹಿರಿಯ ಸಾಹಿತಿಗಳನ್ನೊಳಗೊಂಡ ಸಮಿತಿ ರಚಿಸಿ, ಪ್ರಶಸ್ತಿ ಆಯ್ಕೆ ಕುರಿತ ಮಾನದಂಡ ರೂಪಿಸುವಂತೆ ಸೂಚಿಸಿತ್ತು. ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸೂಕ್ತ ನಿಯಮಗಳನ್ನು ಶಿಫಾರಸು ಮಾಡಿ, ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಆ ವರದಿಯ ಆಧಾರದಲ್ಲಿಯೇ ರಾಜ್ಯ ಸರ್ಕಾರ ಪ್ರಶಸ್ತಿ ನೀಡುತ್ತ ಬರುತ್ತಿದೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next