Advertisement

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್. ಹೆಗಡೆ ಕುಂದುರ್ಗಿ ನಿಧನ

11:39 AM Dec 22, 2022 | Team Udayavani |

ಯಲ್ಲಾಪುರ: ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತವಾಗಿ ದುಡಿದ ಶಿಕ್ಷಣ ಪ್ರೇಮಿ, ಸಾಹಿತ್ಯ ಪ್ರೇಮಿ, ಧಾರ್ಮಿಕ ಮುಂಧಾಳು, ಹಿರಿಯ ಸಾಮಾಜಿಕ ಕಾರ್ಯಕರ್ತ, ಸಹಕಾರಿ ಧುರಿಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್. ಹೆಗಡೆ ಕುಂದುರ್ಗಿ ಡಿ.21 ಬುಧವಾರ ನಿಧನರಾದರು.

Advertisement

90 ವರ್ಷದ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕರಿ ರಂಗದಲ್ಲಿ ಅಪಾರ ಕೊಡುಗೆ ನೀಡಿದವರಾಗಿದ್ದರು.

ಕುಂದರಗಿಯಲ್ಲಿ ಪೂರ್ಣ ಪ್ರಾಥಮಿಕ ಶಾಲೆ ಆರಂಬಿಸಿದ್ದರು. 1954 ರಲ್ಲಿ ಮಂಚೀಕೇರಿಯಲ್ಲಿ ತಾಲೂಕಿನ ಮೊಟ್ಟ ಮೊದಲ ಪ್ರೌಢಶಾಲೆ ಆರಂಭಿಸುವಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿ, 1974 ರಲ್ಲಿ ಭರತನ ಹಳ್ಳಿಯಲ್ಲಿ ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿ, ಬಡ ವಿದ್ಯಾರ್ಥಿಗಳಿಗಾಗಿ ಹಾಸ್ಟೇಲ್, ವಾಚನಾಲಯ, ಸಂಗೀತ ಕಲಿಕೆಗೂ ಅವಕಾಶ ನೀಡಿದ್ದರು.

ದೇಶ ವಿದೇಶದ ದಾನಿಗಳನ್ನು ಸಂಪರ್ಕಿಸಿ ಪ್ರಗತಿ ಸಂಸ್ಥೆಯ ಏಳಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದರು. ಸೋಂದಾ ಸ್ವರ್ಣವಲ್ಲೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿ ಸಂಸ್ಕೃತ ಕಾಲೇಜು ಆರಂಭಿಸುವಲ್ಲಿ ಮುಂಚೂಣಿ ಪತ್ರ ನಿರ್ವಹಿಸಿದ್ದರು.

ಶಿರಸಿಯ ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೂ ಆಗಿ ಕಾರ್ಯ ನಿರ್ವಹಿಸಿದ್ದರು. ಮಾವಿನಕಟ್ಟೆಯಲ್ಲಿ 1968 ರಲ್ಲಿ ಸೇವಾ ಸಹಕಾರಿ ಸಂಘ, 1966 ರಲ್ಲಿ ಭಕ್ತ ಬೆಳೆಗಾರರ ಸಹಕಾರಿ ಸಂಘ ಮತ್ತು ಅಕ್ಕಿ ಗಿರಣಿ ಆರಂಬಿಸಲು ಶ್ರಮಿಸಿದ್ದರು.

Advertisement

ಮಾವಿನಕಟ್ಟೆಯಲ್ಲಿ ಶೈಕ್ಷಣಿಕ, ಸಹಕಾರಿ ವ್ಯವಸ್ಥೆ ರೂಪಿಸಿದ ಎನ್.ಎಸ್. ಹೆಗಡೆಯವರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆಗಳನ್ನು ಕೂಡ ಮಂಜೂರಿ ಮಾಡಿಸಿ ಸಾರ್ವಜನಿಕರಿಗೆ ನೆರವಾಗಿದ್ದರು.

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮೊದಲ ಅಧ್ಯಕ್ಷರಾಗಿದ್ದ ಇವರು ಜಿಲ್ಲಾ ಕ.ಸಾ.ಪ.ಅಧ್ಯಕ್ಷರೂ ಆಗಿ ಎರಡು ಅವಧಿ ಕಾರ್ಯನಿರ್ವಹಿಸಿದ್ದರು.

ಶಿರಸಿಯ ಟಿ.ಎಸ್.ಎಸ್., ತಾಲೂಕು ಪಿ.ಎಲ್.ಡಿ.ಬ್ಯಾಂಕ್ ಮತ್ತು ಎ.ಪಿ.ಎಂ.ಸಿ.ನಿರ್ದೇಶಕರಾಗಿ, ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದರು.

ಕುಂದರಗಿಯ ಉಮಾಮಹೇಶ್ವರ ದೇಗುಲದ ಟ್ರಸ್ಟಿಗಳಾಗಿ 2006 ರಲ್ಲಿ ಈ ದೇವಾಲಯದ ಜೀರ್ಣೊಧ್ದಾರ ಗೊಳಿಸಿದ್ದರು.

ಸ್ವರ್ಣವಲ್ಲೀ ಶ್ರೀಗಳಿಂದ “ಸೇವಾ ರತ್ನಾಕರ” ಗೌರವ, ಮುಂಬೈನ ಹವ್ಯಕ ವೆಲ್ಫೇರ್ ಟ್ರಸ್ಟ್ ವತಿಯಿಂದ ಕರ್ಕಿ ವೆಂಕಟರಮಣ ಶಾಸ್ತ್ರೀ ಸೂರಿ ಇವರ ಸ್ಮರಣಾರ್ಥ ನೀಡುವ ದತ್ತಿನಿಧಿ ಪ್ರಶಸ್ತಿ ಪಡೆದುಕೊಂಡಿದ್ದರು.

ಅವರ ವಿಶಿಷ್ಠ ಸಾಮಾಜಿಕ ಸೇವೆಗೆ ರಾಜ್ಯ ಸರಕಾರ 2020 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಕರ್ಣಾಟಕ ಬ್ಯಾಂಕ್ ನೊಂದಿಗೆ ನಿಕಟ ಸಂಬಂಧ ಹೊಂದಿರುವ ಅವರು ಯಲ್ಲಾಪುರ ನಗರಕ್ಕೆ ಕರ್ಣಾಟಕ ಬ್ಯಾಂಕ್ ಶಾಖೆ ಆರಂಭಿಸಲು ಕೈಜೋಡಿಸಿದ್ದರು.

ಮೃತರ ನಿಧನಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಸಂಕಲ್ಪ ಸಂಸ್ಥೆಯ  ಅಧ್ಯಕ್ಷ ಪ್ರಮೋದ ಹೆಗಡೆ, ಸಂಸದ ಅನಂತ ಕುಮಾರ ಹೆಗಡೆ, ಮಾಜಿ ಶಾಸಕ ವಿ.ಎಸ್.ಪಟೀಲ್, ಎಂ.ಎಲ್.ಸಿ ಶಾಂತಾರಾಮ ಸಿದ್ದಿ, ಟಿಎಸ್ಸೆಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಕ.ಸಾ.ಪ. ಜಿಲ್ಲಾದ್ಯಕ್ಷ  ಬಿ.ಎನ್.ವಾಸರೆ, ತಾಲೂಕಾಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ, ಪ್ರಗತಿ ಶಿಕ್ಷಣ ಸಂಸ್ಥೆ, ಶ್ರೀಮಾತಾ ಸೌಹಾರ್ಧ ಸಹಕಾರಿ ಸಂಸ್ಥೆ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕುಂದರಗಿ ಸೇವಾ ಸಹಕಾರಿ ಸಂಘ, ಭರತನಹಳ್ಳಿ ಪ್ಯಾಡಿ ಸೊಸೈಟಿ, ಅಡಿಕೆ ವತರ್ತಕರ ಸಂಘ, ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸ ಗದ್ದೆ ಮುಂತಾದವರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next