Advertisement

“ಸಿದ್ದಿ’ಗನ್ನಡಂ ಗೆಲ್ಗೆ

12:40 PM Nov 03, 2019 | Lakshmi GovindaRaju |

ದೀಪಾವಳಿ ದಾಟುತ್ತಲೇ, ಕನ್ನಡದ ಹಣತೆಗೆ ಎಣ್ಣೆ ಎರೆದ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ ದಕ್ಕಿತು. ಅದರಲ್ಲಿ ಒಬ್ಬ ಸಾಧಕ, ಉತ್ತರ ಕನ್ನಡದ ಯಲ್ಲಾಪುರ ಮಂಚಿಕೇರಿ ಸಮೀಪದ ಕಾಡಿನ ಸಿದ್ದಿ ಸಮುದಾಯದ, ಪರಶುರಾಮ ಸಿದ್ದಿ. ಚಿನುವಾ ಅಚುಬೆ ಅವರ “ಥಿಂಗ್ಸ್‌ ಫಾಲ್‌ ಅಪಾರ್ಟ್‌’ ಕಾದಂಬರಿಯನ್ನು ನಿರ್ದೇಶಕ ಜಂಬೆ ಅವರು “ಕಪ್ಪು ಜನ ಕೆಂಪು ನೆರಳು’ ಎಂದು ನಾಟಕ ಮಾಡಿಸುವಾಗ ಕಾಡಿನ ಈ ಹೀರೋ “ವೋಕಾಂಕು’ ಆಗಿ ನಟಿಸಿದ್ದರು. ಕಾಡಿನಲ್ಲಿ ಸಂತನಂತೆ ಬದುಕು ಸವೆಸಿದ ಈ ಸಾಧಕನ ಕುರಿತು, ಅವರ ಪುತ್ರಿ ಇಲ್ಲಿ ಅಪ್ಪನನ್ನು ಚಿತ್ರಿಸಿದ್ದಾರೆ…

Advertisement

ಈಗ ಅಪ್ಪನಿಗೆ ಎಪ್ಪತ್ತು ತುಂಬಿದ ಬದುಕು. ಕಾಡಿನ ನಡುವೆ, ಹಸಿರನ್ನೇ ನೋಡುತ್ತಾ, ಬಣ್ಣದ ಬದುಕು ಕಟ್ಟಿದ ಜೀವ. ನನ್ನ ಅಪ್ಪ ನಿಜಕ್ಕೂ ಒಂದು ಕಣಜ. ಅವರು ನಮಗೆ ಮಾತ್ರ ಗುರು ಆಗಿರಲಿಲ್ಲ; ಬದಲಿಗೆ, ಎಷ್ಟೋ ಜನರಿಗೆ ಮಾರ್ಗದರ್ಶಿ. ಗುಂಗುರು ಕೂದಲಿನ, ತುಂಬಾ ಶಿಸ್ತಿನ ಮನುಷ್ಯ ಹಾಗೂ ಮುಂಗೋಪಿಯೂ ಆದ ಅಪ್ಪನಿಗೆ, ಆತನ ಮುಖದ ಮೇಲಿದ್ದ ಗಿರೀಜಾ ಮೀಸೆಯೇ ಏನೋ ಒಂದು ಸೌಂದರ್ಯ. ಆಗಿನ ಕಾಲದಲ್ಲಿಯೇ ಏಳನೇ ತರಗತಿ ಓದಿದ್ದ ಅಪ್ಪ, ಹುಟ್ಟು ಹೋರಾಟಗಾರ. ಮನೆಯ ಹಿರಿಯ ಮಗನಾಗಿದ್ದ ಅಪ್ಪನಿಗೆ ತುಂಬಾ ಜವಾಬ್ದಾರಿ. ಸಿದ್ದಿ ಜನಾಂಗದ ಮುಖಂಡನೂ ಆಗಿದ್ದ.

ಎಷ್ಟೋ ಸಂಸಾರಗಳ ಜಗಳ ಬಿಡಿಸುತ್ತಿದ್ದ. ಇದಕ್ಕಾಗಿ “ಪಾಯಿಂಟ್‌ ಪರಶುರಾಮ’ ಎಂಬ ಹೆಸರನ್ನೂ ಪಡೆದ. ಎಷ್ಟೋ ಮುದುಕಿಯರಿಗೆ, ಮುದುಕರಿಗೆ ಮಗನಾಗಿದ್ದ. ಅವರನ್ನು ತನ್ನ ಮನೆಯಲ್ಲಿಟ್ಟುಕೊಂಡು ಸಾಕಿದ್ದ. ಅವರ ದಿನಕರ್ಮವನ್ನು ಮಾಡಿದ್ದ. ಎಷ್ಟೋ ಹುಡುಗಿಯರಿಗೆ ಅಪ್ಪನ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ್ದ. ಎಲ್ಲೇ ಜಗಳ, ಗಲಾಟೆ, ಸಾವು ನೋವಾಗಲಿ, ಅಪ್ಪ ಅಲ್ಲಿಗೆ ತಕ್ಷಣ ಹೋಗುತ್ತಿದ್ದ. ಎಷ್ಟೇ ದೂರಾದರೂ ಹೋಗಿ, ಸ್ಪಂದಿಸುತ್ತಿದ್ದ. ನನ್ನ ಅಪ್ಪ ಎಲ್ಲರಂತೆ ಅಲ್ಲವೇ ಅಲ್ಲ. ಸೊಂಟಕ್ಕೆ ಕತ್ತಿ ಸಿಕ್ಕಿಸಿಕೊಂಡು, ವಿಜಯಾ ಬೀಡಿ ಸೇದುತ್ತಾ ಬೇಣಕ್ಕೋ, ಗದ್ದೆಗೋ ಹೋಗುತ್ತಿದ್ದ.

ತಾನೇ ಮಾಡಿಕೊಂಡಿದ್ದ (ಆಕಡಿ) ಸೊಂಟಪಟ್ಟಿಯನ್ನು ಸಿಕ್ಕಿಸಿ, ಮನೆಯ ಗೋಡೆಗೆ ಬಿದಿರಿನಿಂದ ಮಾಡಿದ್ದ ಉದ್ದನೆಯ ಹ್ಯಾಂಗರ್‌ನಲ್ಲಿಟ್ಟ ಕತ್ತಿಗಳಲ್ಲಿ ತನ್ನ ಕತ್ತಿಯನ್ನು ಎತ್ತಿಕೊಂಡು, ಅದನ್ನು ಬಿಳಿಕಲ್ಲಿಗೆ ಹಾಕಿ ಚೆನ್ನಾಗಿ ಉಜ್ಜಿ ಚೂಪಾಗಿಸಿಕೊಂಡು, ಸೊಂಟಕ್ಕೆ ಸಿಕ್ಕಿಸಿಕೊಂಡು, ಹಳೇ ಟಯರಿನ ಚಪ್ಪಲಿ ಧರಿಸಿ ಹೊರಡುತ್ತಿದ್ದ. ಬೆಳಗ್ಗೆ ಎಂಟಕ್ಕೆ ಹೊರಟರೆ, ತಿರುಗಿ ಹತ್ತು ಗಂಟೆಗೆ ಚಾ ಕುಡಿಯಲು ಬರುತ್ತಿದ್ದ. ಒಂದು ಚಾ ಕುಡಿದು ಹೊರಟರೆ, ಮಧ್ಯಾಹ್ನ ಒಂದು ಗಂಟೆಗೆ ಬಂದು ಊಟಮಾಡಿ, ಒಂದು ಸಣ್ಣಾದ ನಿದ್ದೆ ತೆಗೆಯುತ್ತಿದ್ದ. ಇದೆಲ್ಲ ಈಗಿನ ದಿನಚರಿ.

ಮೊದಲಿನ ನಮ್ಮ ಅಪ್ಪ ಹುಸಿ ಕೋಪದ, ಕಣ್ಣಿನಲ್ಲಿಯೇ ನಮ್ಮನ್ನು ಸುಮ್ಮನಾಗಿಸುವವ. ರಾತ್ರಿಯಾದರೂ ಭಯವಿಲ್ಲದೆ ಈ ದಟ್ಟ ಕಾಡಿನಲ್ಲಿ ಒಡಾಡುವ ಅಪ್ಪ ಧೈರ್ಯವಂತನಾಗಿದ್ದ. ನಮ್ಮ ಹಿರಿಯರು ಹೇಳುವ ದೆವ್ವ- ಭೂತದ ಕತೆಯ ಬದ್ಧವೈರಿ ಅವನು. ದೆವ್ವ- ಭೂತ ಎಂದು ಯಾರಾದರೂ ಹೇಳಿದರೆ, “ಅದೆಲ್ಲ ಸುಳ್ಳು’ ಎಂದು ಸಾಧಿಸಿ ತೋರಿಸುತ್ತಿದ್ದ. ಎಂಥದೇ ಸಂದರ್ಭದಲ್ಲೂ ಮೂಢನಂಬಿಕೆಯನ್ನು ನಂಬಿದವನೇ ಅಲ್ಲ. ಎಷ್ಟೋ ದೂರ ಬರಿಗಾಲಲ್ಲೇ ಕೆಲಸಕ್ಕೆ ಹೋಗುತ್ತಿದ್ದ. ಒಂದೊಂದು ದಿನ ಕಾಡಿನಲ್ಲೇ ದಿನಗಟ್ಟಲೇ ಕಳೆಯುತ್ತಿದ್ದ. ಜೇನು ಕೊಯ್ಯಲು ನೂರಡಿ ಎತ್ತರದ ಮರವನ್ನೂ ಸರಸರನೇ ಏರುತ್ತಿದ್ದ ಸರದಾರ.

Advertisement

ದೂರದಿಂದಲೇ ಇಂಥ ಪ್ರಾಣಿ, ಇಂಥ ಪಕ್ಷಿ, ಈ ಗಿಡ ಇಂಥ ಔಷಧಕ್ಕೆ ಬರುತ್ತೆ ಎನ್ನುವ ಧನ್ವಂತರಿ ಅವನು. ಒಗಟು ಹೇಳಿ, ನಮ್ಮನ್ನೆಲ್ಲ ಪೇಚಿಗೆ ಸಿಲುಕಿಸಿ, ಸಲೀಸಾಗಿ ಬಿಡಿಸಲು ಈಗಲೂ ನಿಸ್ಸೀಮ. ಅಪ್ಪನಿಗೆ ದಿನಕ್ಕೊಂದು ಕೆಲಸ. ಈ ದಿನ ಬ್ಯಾಣದ ಕೆಲಸವಾದರೆ, ಇನ್ನೊಂದು ದಿನ ಅಡಕೆ ಕೊಯ್ಯೋದು. ಇನ್ನೊಮ್ಮೆ ಯಾರೋ ಹೆಗ್ಗಡತಿಯನ್ನೋ, ಬಡ್ತಿಯನ್ನೋ ಅವರ ತವರಿಗೋ, ಗಂಡನ ಮನೆಗೋ ಕಳಿಸುವ ಕೆಲಸ. ಇನ್ನೊಮ್ಮೆ ಕಟ್ಟಿಗೆ ಒಡೆಯೋ ಕೆಲಸ. ಸಂಜೆಯೂ ಪುರುಸೊತ್ತಿಲ್ಲದೆ ಎಲ್ಲಿಗೋ ಹೋಗುತ್ತಿದವ, ರಾತ್ರಿ ಹತ್ತು ಗಂಟೆಗೆ ಬರುತ್ತಿದ್ದ. ನೋಡಿದರೆ, ನಮಗಾಗಿ ದೂರದ ಕಾಡಲ್ಲಿ ಒಂದು ಮನೆಯನ್ನೇ ಕಟ್ಟಿದ್ದ.

ಬಹಳ ದೂರ ಅದು. ಈಗ ನಾವಿರುವ ಊರಲ್ಲಿ ಅಜ್ಜಿಯಂತೂ ದೆವ್ವ- ಭೂತದ ಊರೆಂದು ಅಪ್ಪನನ್ನು ಬಯ್ಯುತ್ತಿದ್ದಳು. ಯಾಕೆಂದರೆ, ಅಷ್ಟು ದಟ್ಟವಾದ ಕಾಡು ಅದು. ಅಲ್ಲಿ ನೋಡಿದರೆ, ನಮಗೊಂದು ಬಿದಿರಿನ ತಟ್ಟಿಯ ಮನೆ ತಯಾರಾಗಿತ್ತು. ಮೇಲೆ ಸೋಗೆಯಿಂದ ಹೊಚ್ಚಿದ್ದ ಮಾಡು. ಅದೇ ಈಗ ನಾವಿರುವ ಅಣಲೇಸರದ ಮನೆ. ಸುತ್ತಲೂ ದಟ್ಟವಾದ ಕಾಡು, “ಜೀರ್‌ ಜೀರ್‌’ ಎಂದು ಕೂಗುವ ಜೀರುಂಡೆ. ಮೊದಮೊದಲು ತುಂಬಾ ಭಯ ಆಗುತ್ತಿತ್ತು. ನಂತರ ಅಭ್ಯಾಸವೇ ಆಗಿಹೋಯಿತು. ಆ ದಟ್ಟಕಾಡಿನಲ್ಲಿ ಇಡೀ ದಿನ ನಾನು, ಅಮ್ಮ, ಅಕ್ಕ ಅಷ್ಟೇ. ಸಂಜೆ ಐದಕ್ಕೆ ಅಪ್ಪ ಬರುತ್ತಿದ್ದ. ನಮ್ಮನ್ನು ಆ ಕಾಡಲ್ಲಿ ಬಿಟ್ಟು ಹೋಗಲು ಮನಸ್ಸಿರಲಿಲ್ಲ.

ಆದರೆ, ಹೊಟ್ಟೆಪಾಡಿಗಾಗಿ ನಾವಿದ್ದ ಊರಿನಿಂದ 4 ಮೈಲು ದೂರ ಕೆಲಸಕ್ಕೆ ಹೋಗುತ್ತಿದ್ದ. ಬರುವಾಗ ಜೋಳದ ಹಿಟ್ಟು, ರಾಗಿ ಹಿಟ್ಟಿನೊಂದಿಗೆ ಒಣ ಮೀನನ್ನೊ, ಹಸಿ ಮೀನನ್ನೋ ತರುತ್ತಿದ್ದ. ಬೆಳಗ್ಗೆ ಎದ್ದು ಮನೆಯ ಸುತ್ತಲಿನ ಪೊದೆಯನ್ನು ಸ್ವತ್ಛಮಾಡುತ್ತಿದ್ದ. ತೆಂಗಿನ ಸಸಿಗಳನ್ನು, ಅಡಕೆ ಗಿಡವನ್ನು ನೆಡುತ್ತಿದ್ದ. ಅಮ್ಮನೂ ಅಷ್ಟೇ, ಇಡೀ ದಿನ ಬಿದಿರಿನ ತಟ್ಟಿಯಿಂದ ಮಾಡಿದ ಮನೆಯನ್ನು ಮಣ್ಣಿನಿಂದ ಸಾರಿಸುತ್ತಿದ್ದರು. ಅದಕ್ಕೆ ಸುಣ್ಣವನ್ನು ಬಳಿದು, ಬಣ್ಣ ಬಣ್ಣದ ರಂಗೋಲಿ ಬಿಡಿಸುತ್ತಿದ್ದರು. ಒಮ್ಮೊಮ್ಮೆ ಅಪ್ಪ ಬರುವುದು ತಡವಾದರೆ, ಮರಗೆಣಸನ್ನು ಬೇಯಿಸಿ ಕೊಡುತ್ತಿದ್ದಳು.

ನಾಲ್ಕಾರು ನಾಯಿ, ಬೆಕ್ಕನ್ನು ನಮ್ಮ ಕಾವಲಿಗೆಂದೇ ಅಪ್ಪ ಇರಿಸಿದ್ದ. ಅವುಗಳಿಗೆ ತರಬೇತಿಯನ್ನೂ ಕೊಟ್ಟಿದ್ದ. ಅದಕ್ಕೆ ನಮ್ಮ ಮನೆಗೆ ಬರುವವರು ದೂರದಿಂದಲೇ ನಮ್ಮನ್ನು ಕರೆಯುತ್ತಿದ್ದರು. ಕಾಡಿನ ಪ್ರತಿ ಮರವನ್ನೂ ಬಲ್ಲ ಜಾಣ, ನನ್ನ ಅಪ್ಪ. ಯಾವ ಮರ ಹಾಕಿದರೆ, ಮನೆ ಬಹಳ ಗಟ್ಟಿ ಎನ್ನುವ ಆರ್ಕಿಟೆಕ್ಟ್. ಅವನನ್ನು ಹುಡುಕಿಕೊಂಡು ಬಂದು, ಮರಗಳ ಬಗ್ಗೆ ಮಾಹಿತಿ ಪಡೆದವರನ್ನು ನಾನು ಎಣಿಸಿಲ್ಲ. ಸ್ಟೀಲ್‌ ಪಾತ್ರೆಯ ಬದಲು, ಬಿದಿರಿನಿಂದ ಬುಟ್ಟಿ, ಬಿದಿರಿನ ನೀರಿನ ಅಂಡೆ, ಮಲಗಲು ಬಿದಿರ ಮಂಚ, ಮರದಿಂದ ಮಾಡಿದ ಉಪ್ಪಿನ ಪಾತ್ರೆ, ರೊಟ್ಟಿ ಬಡಿಯಲು ಬಟ್ಟಲು, ತೆಂಗಿನ ಗರಟೆಯ ಸೌಟುಗಳನ್ನು ಮಾಡಿದ್ದ.

ಕಾಡಿನಲ್ಲಿ ತೊಂದರೆಗಳು ತಪ್ಪುವುದೇ ಇಲ್ಲ. ಒಂದೆಡೆ ಕಾಡು ಪ್ರಾಣಿಗಳ ಕಾಟ, ಮತ್ತೂಂದೆಡೆ ಹಾವು- ಚೇಳುಗಳ ಕುಟುಕು. ಎಲ್ಲದಕ್ಕೂ ಅವನ ಬಳಿ ಪರಿಹಾರವಿತ್ತು. ಕರಡಿ ಬೆನ್ನಟ್ಟಿದರೆ, ಮರವನ್ನು ಸುತ್ತು ಹಾಕಬೇಕು ಅಥವಾ ಬೆಂಕಿ ತೋರಿಸಬೇಕು. ಹಂದಿ ಬಂದರೆ, ಹುಲಿ ಬಂದರೆ, ಏನೆಲ್ಲಾ ಮಾಡಬೇಕು ಎಂಬುದನ್ನು ಪಾಠ ಮಾಡುತ್ತಿದ್ದ. ಹಾವು ಬಂದರೆ, ಅದು ಕಚ್ಚಿದರೆ, ಯಾವ ಗಿಡ, ಮರದ ಬೇರನ್ನು ಹಚ್ಚಬೇಕು ಎಂದೆಲ್ಲ ಹೇಳುತ್ತಿದ್ದ. ಒಮ್ಮೊಮ್ಮೆ ಹುಲಿ, ಹಂದಿಯನ್ನೂ ಹತ್ತಿರದಿಂದ ತೋರಿಸಿದ್ದೂ ಇದೆ. ಅಪ್ಪ - ಅಮ್ಮ ಇಬ್ಬರೂ ಜನಪದ ಕಲಾವಿದರಾಗಿದ್ದರಿಂದ ಜನಪದ ಹಾಡುಗಳು, ಕೊಂಕಣಿ ಹಾಡುಗಳು, ನೂರಾರು ಕತೆಗಳು, ಒಗಟುಗಳನ್ನು ಹೇಳಿ ನಮ್ಮಲ್ಲಿನ ಭಯವನ್ನು ಮರೆಸುತ್ತಿದ್ದರು.

ಒಮ್ಮೆ ಮನೆಯ ಹತ್ತಿರ ಹುಲಿ ಬಂದು, ನಮ್ಮ ನಾಯಿಯನ್ನು ಹೊತ್ತೂಯ್ಯುವಾಗ, ಅದು ನಮಗೆ ಗೊತ್ತಾಗದಿರಲೆಂದು ಅಪ್ಪ ಡಮಾಮಿ ನುಡಿಸಿದ್ದನಂತೆ. ಬೆಳಗ್ಗೆ ಅಮ್ಮ ಹೇಳಿದಾಗ, ನಡುಗಿ ಹೋಗಿದ್ದೆ. ಆಗಾಗ ಬಂದು ಜಾಗ ಖಾಲಿ ಮಾಡಿರೆಂದು ಕ್ಯಾತೆ ತೆಗೆಯುವ ಅರಣ್ಯ ಇಲಾಖೆಯವರಿಗಂತೂ ಕೋಳಿ, ಬಾಳೆಗೊನೆಯನ್ನು ಕೊಟ್ಟು ಸಮಾಧಾನಿಸುತ್ತಿದ್ದ. ಕೆಲವೊಮ್ಮೆ ಕೋಪಗೊಂಡು, “ಕೊಡಲ್ಲ. ಏನು ಬೇಕಾದ್ರೂ ಮಾಡ್ಕಳಿ’ ಎಂದು ತಿರುಗಿ ಬೀಳುತ್ತಿದ್ದ. ನಾವಿದ್ದಲ್ಲಿಂದ 3 ಕಿ.ಮೀ. ದೂರದಲ್ಲಿತ್ತು ನಮ್ಮ ಶಾಲೆ. ಮೊದಮೊದಲು ಕಾಡನ್ನು ದಾಟಿಸಿ ಬರುತ್ತಿದ್ದ. ನಂತರ ನಾವೇ ಹೋಗಿಬರಲು ಕಲಿಸಿದ.

ಪಾಠವಾಗಲಿ, ಆಟವಾಗಲಿ, ತಪ್ಪಿಸುವಂತಿರಲಿಲ್ಲ. ನಮಗೆ ಈಜುವುದನ್ನೂ, ಮರ ಹತ್ತು¤ವುದನ್ನೂ ಕಲಿಸಿದ್ದೂ, ಅಪ್ಪನೇ. ನಾಟಕವಿರಲಿ, ಸಂಗೀತವಿರಲಿ, ಯಕ್ಷಗಾನವಿರಲಿ, ನಮ್ಮನ್ನು ಕರಕೊಂಡು ಮಂಚಿಕೇರಿಗೆ ಹೋಗಿ ತೋರಿಸುತ್ತಿದ್ದ. ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತವರು ನಮ್ಮ ಅಮ್ಮ ಲಕ್ಷ್ಮೀ ಸಿದ್ದಿ. ಅಪ್ಪ ಬಹಳ ಕಷ್ಟ ಜೀವಿ. ನಮಗೆ ಜೀವನದಲ್ಲಿ ಸಾಧಿಸುವುದನ್ನೂ ಕಲಿಸಿದ. ರಂಗಭೂಮಿಗೆ ಹುಡುಗಿಯರನ್ನು ಧೈರ್ಯವಾಗಿ ಕಳಿಸಿದ್ದ. ಅವರ ಈ ಸಹಕಾರವೇ ಅವರ ಮಕ್ಕಳಾದ ನಾವು ರಂಗಭೂಮಿಯಲ್ಲಿ ನಮ್ಮದೇ ಆದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿರುವುದು. ನನ್ನ ಅಪ್ಪನಿಗೆ ಇಷ್ಟು ದೊಡ್ಡಮಟ್ಟದ, ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದು, ನಮ್ಮ ಇಡೀ ಸಮುದಾಯಕ್ಕೆ ಸಿಕ್ಕ ಪ್ರಶಸ್ತಿಯೇ ಆಗಿದೆ.

* ಗೀತಾ ಸಿದ್ದಿ, ರಂಗಭೂಮಿ ಕಲಾವಿದೆ

Advertisement

Udayavani is now on Telegram. Click here to join our channel and stay updated with the latest news.

Next