ಬನಹಟ್ಟಿ : ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸೋಮವಾರ ಪೇಟೆಯ ನಿವಾಸಿ, ಮುಸ್ಲಿಂ ಸಮಾಜದ ಮುಖಂಡರಾಗಿದ್ದ ಮಲ್ಲಿಕಸಾಬ್ ಹನಗಂಡಿ(96) ಗುರುವಾರ ನಿಧನರಾದರು.
ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಇದ್ದಾರೆ. ಮಲ್ಲಿಕಸಾಬ್ರ ತಂದೆ ಖುದಾಭಕ್ಷ ಹನಗಂಡಿ ಕವಿಗಳಾಗಿದ್ದರು. ಹನಗಂಡಿ ಕುಟುಂಬ ಮುಸ್ಲಿಂರಾಗಿದ್ದರೂ ಕೂಡಾ ಅವರು ಗಜಾನನ ಜಾನಪದ ನಾಟ್ಯ ಮಂಡಳಿಯನ್ನು ಸ್ಥಾಪಿಸಿ ಹಲವಾರು ಪಾರಿಜಾತ ಹಾಗೂ ಸಾಮಾಜಿಕ ನಾಟಕಗಳನ್ನು ಪ್ರದರ್ಶನ ಮಾಡಿದ್ದರು. ತಂದೆ ಸ್ಥಾಪಿಸಿದ ಸಂಘವನ್ನು ಮಲ್ಲಿಕಸಾಬ್ ಮುಂದುವರೆಸಿಕೊಂಡು ಬಂದಿದ್ದರು.
ಈ ಸಂಘದ ಆದರ್ಶ ಪ್ರೇಮ, ದೇವ ಗೆದ್ದ ಮಾನವ ಹಾಗೂ ಮೂರು ದಿನದ ಸಂತೆ ನಾಟಕಗಳು ಬಹಳಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದವು. ದೀಪಾವಳಿ ನಾಟಕದ ಅಶೋಕನ ಪಾತ್ರದಿಂದ ಮನೆ ಮಾತಾಗಿದ್ದ ಮಲ್ಲಿಕಸಾಬ್ ಹನಗಂಡಿ, ಬಿ.ಪಿ.ಧುತ್ತರಗಿ ರಚಿತ ಸಂಪತ್ತಿಗೆ ಸವಾಲ್ ಬೈಲಾಟದ “ಭದ್ರಿ” ಪಾತ್ರಕ್ಕೆ ಜೀವ ತುಂಬಿದ್ದರು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಅನೇಕ ಪ್ರದೇಶಗಳಲ್ಲಿ ಅವರು ತಮ್ಮ ನಾಟಕಗಳನ್ನು ಪ್ರದರ್ಶನ ಮಾಡಿದ್ದರು.
ಮೊಹರಂ ಹಬ್ಬದ ಸಂದರ್ಭದಲ್ಲಿ ಕನ್ನಡ, ಹಿಂದಿ ಮತ್ತು ಉರ್ದು ಭಾಷೆಗಳ ರಿವಾಯತ್ ಪದಗಳನ್ನು ಹಾಡಿ ಗಮನ ಸೆಳೆದಿದ್ದರು. ಇವರ ಕಲೆಯನ್ನು ಗಮನಿಸಿದ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡ ಗೌರವಿಸಿತ್ತು.
ಮಲ್ಲಿಕಸಾಬ್ ಹನಗಂಡಿ ಮುಸ್ಲಿಂರಾಗಿದ್ದರೂ ಅವರು ಪ್ರತಿವರ್ಷ ತಮ್ಮ ಮನೆಯಲ್ಲಿ ಸತ್ಯನಾರಾಯಣನ ಪೂಜೆ ಮಾಡಿಸಿ ನೂರಾರು ಜನ ಹಿಂದೂ ಜನರಿಗೆ ಪ್ರಸಾದ ವ್ಯವಸ್ಥೆಯನ್ನು ಕೂಡಾ ಮಾಡುತ್ತಿದ್ದರು.