Advertisement

Karnataka Rajyotsava Awards: ಪಂ.ಮನ್ಸೂರ್ ಪುತ್ರಿಗೆ ನೀಲಾ ಗೆ ರಾಜ್ಯೋತ್ಸವ ಪ್ರಶಸ್ತಿ

07:03 PM Oct 31, 2023 | Team Udayavani |

ಧಾರವಾಡ : 68ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ಕರ್ನಾಟಕ ರಾಜ್ಯ ಸರಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಧಾರವಾಡ ಜಿಲ್ಲೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ಕು ಜನ ಸಾಧಕರು ಪ್ರಸಕ್ತ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಸಂಗೀತ ಸಾಧಕಿ ನೀಲಾ .ಎಂ. ಕೊಡ್ಲಿ ಅವರು, ಕೃಷಿ ಮತ್ತು ಪರಿಸರ ಕ್ಷೇತ್ರದಲ್ಲಿ ಪ್ರಗತಿಪರ ರೈತ ದ್ಯಾವನಗೌಡ ಟಿ. ಪಾಟೀಲ, ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟು ಅಶೋಕ ಗದಿಗೆಪ್ಪ ಏಣಗಿ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಹಿರಿಯ ಕಲಾವಿದೆ ಎಚ್.ಬಿ. ಸರೋಜಮ್ಮ ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯಸರ್ಕಾರವು 68 ನೇ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ವಿವಿಧ ಜಿಲ್ಲೆಗಳ 68 ಜನ ಗಣ್ಯರಿಗೆ ಹಾಗೂ10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಈ ಪೈಕಿ ಧಾರವಾಡ ಜಿಲ್ಲೆಯ 4 ಜನ ಸಾಧಕರಿಗೆ ಪ್ರಶಸ್ತಿ ಸಂದಿದೆ.

ನೀಲಾ ಕೊಡ್ಲಿ ಬಗ್ಗೆ ಒಂದಿಷ್ಟು : ದಿ. ಪದ್ಮವಿಭೂಷಣ ಪಂ.ಮಲ್ಲಿಕಾರ್ಜುನ ಮನಸೂರ ಅವರ ಪುತ್ರಿಯಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಿರಿಯ ಕಲಾವಿದೆ ನೀಲಾ ಎಂ ಕೊಡ್ಲಿ (78) ಅವರ ಸಂಗೀತ ಸೇವೆಗೆ ರಾಜ್ಯೋತ್ಸವ ಒಲಿದು ಬಂದಿದೆ. ಕಳೆದ 45 ವರ್ಷಗಳಿಂದ ಧಾರವಾಡ ಆಕಾಶವಾಣಿ ಕೇಂದ್ರದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ನೀಡುತ್ತಾ ಬಂದಿರುವ ನೀಲಾ ಅವರು, ಶಾಸ್ತ್ರೀಯ ಹಾಗೂ ಸುಗಮ ಸಂಗೀತಗಳೆರಡರಲ್ಲೂ ಆಕಾಶವಾಣಿಯಿಂದ ಎ ಗ್ರೇಡ್ ಕಲಾವಿದರಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ನೀಲಾ ಅವರು ತಂದೆ ಪಂ.ಮಲ್ಲಿಕಾರ್ಜುನ ಮನಸೂರರಿಂದ ಸಂಗೀತ ಶಿಕ್ಷಣ ಪಡೆದು, ಕರ್ನಾಟಕ ವಿಶ್ವವಿದ್ಯಾಲಯದ ಸಂಗೀರ ರತ್ನ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದಲ್ಲದೇ ಪಂ.ಮನಸೂರರ ಸಂಗೀತ ಪರಂಪರೆ ಮುಂದುವರೆಸಿಕೊಂಡು ಸಾಗಿರುವ ನೀಲಾ ಅವರು, ಜೈಪುರ ಅತ್ರೋಲಿ ಘರಾಣೆಯ ಹಿರಿಯ ಸಂಗೀತರಾಗಿದ್ದಾರೆ. ಹೀಗಾಗಿ ಬಾಂಬೆ, ಪುಣೆ, ಬೆಂಗಳೂರು, ಮೈಸೂರು, ಮಂಗಳೂರು, ಕಲಬುರ್ಗಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಇದಲ್ಲದೇ ನೀಲಾರ ಈ ಸಂಗೀತ ಸೇವೆ ಪರಿಗಣಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2010-11ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿದ್ದು, ಇದರ ಜತೆಗೆ ಡಾ.ಗಂಗೂಬಾಯಿ ಹಾನಗಲ್ ಮ್ಯೂಜಿಕ್ ಫೌಂಡೇಶನನಿಂದ ಸ್ತ್ರೀ ಕುಲ ಕಣ್ಮಣಿ ಪ್ರಶಸ್ತಿ ಮತ್ತು ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಕ್ಕನಬಳಗವು 2017 ರಲ್ಲಿ ಮಹಾದೇವಿ ಅಕ್ಕ ಪ್ರಶಸ್ತಿ ನೀಡಿ ಗೌರವಿಸಿದೆ.

Advertisement

ಗ್ರಾ.ಪಂ.ಸದಸ್ಯನಿಗೆ ರಾಜ್ಯೋತ್ಸವ : ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯತಿಗೆ 2ನೇ ಸಲ ಸದಸ್ಯನಾಗಿರುವ ಅಶೋಕ ಗದಿಗೆಪ್ಪ ಏಣಗಿ(41)ಅವರಿಗೆ ರಾಜ್ಯೋತ್ಸವ ಒಲಿದು ಬಂದಿದೆ. ವೀರಮದಕರಿ ಕೇಸರಿ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಆಗಿರುವ ಅಶೋಕ ಅವರು ಕಳೆದ 20 ವರ್ಷದ ಅವಧಿಯಲ್ಲಿ ಕುಸ್ತಿಪಟುವಾಗಿ ಮಾಡಿರುವ ಸಾಧನೆಗಾಗಿಯೇ ಈ ಪ್ರಶಸ್ತಿ ಲಭಿಸಿದೆ. ಬಿ.ಎ.ಪದವೀಧರ ಆಗಿರುವ ಅಶೋಕ 2004-05ನೇ ಸಾಲಿನಲ್ಲಿ ಹರಿಯಾಣ ರಾಜ್ಯದ ಋತಕ್‌ನಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯುನಿರ್ವಸಿಟಿಯಲ್ಲಿ66 ಕೆಜಿ ಕುಸ್ತಿ ವಿಭಾಗದಲ್ಲಿ ತೃತೀಯ ಸ್ಥಾನ, 2006-07ನೇ ಸಾಲಿನಲ್ಲಿ ಜರುಗಿದ ಮೈಸೂರು ದಸರಾ ಮಹೋತ್ಸವದಲ್ಲಿ ಆಲ್ ಇಂಡಿಯಾ ಇನ್ಯೂಟೆಷನ್74ಕೆಜಿ ಕುಸ್ತಿ ವಿಭಾಗದಲ್ಲಿ ದ್ವಿತೀಯ ಸ್ಥಾನ, 2008- 09ನೇ ಸಾಲಿನ ಕಿತ್ತೂರು ಉತ್ಸವದಲ್ಲಿ ರಾಜ್ಯಮಟ್ಟದ 74 ಕೆಜಿ ಪುರುಷರ ವಿಭಾಗದಲ್ಲಿ ಪ್ರಥಮ ಸೇರಿದಂತೆ ಈ ರೀತಿ ರಾಜ್ಯಮಟ್ಟ, ರಾಷ್ಟ್ರಮಟ್ಟದ ಕುಸ್ತಿಯಲ್ಲಿ ವಿವಿಧ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುವುದು ವಿಶೇಷತೆ. ಇದಲ್ಲದೇ 2003- ೦4ನೇ ಸಾಲಿನಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯ ಜಿಮಖಾನ್ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸತತವಾಗಿ 4 ಬಾರಿ ಕರ್ನಾಟಕ ವಿಶ್ವವಿದ್ಯಾಲಯ ಬ್ಲೂ ಆಗಿದ್ದಕ್ಕಾಗಿ ಅಭಿನಂದನಾ ಪ್ರಮಾಣ ಪತ್ರ ಕೂಡ ಲಭಿಸಿದೆ.

ನನಗೆ ಸಂಗೀತ ಸ್ವರ ಒಲಿದಿದ್ದು ನಮ್ಮಪ್ಪ ಪದ್ಮಭೂಷಣ ಪಂ.ಮಲ್ಲಿಕಾರ್ಜುನ್ ಮನ್ಸೂರ್ ಅವರ ಆಶೀರ್ವಾದದಿಂದ. ಹೀಘಾಗಿ ನನಗೆ ಏನೇ ಪ್ರಶಸ್ತಿಗಳು ಬಂದರೂ ಅದು ಅವರ ಆಶೀರ್ವಾದ ಎಂದೇ ಭಾವಿಸುತ್ತೇನೆ. ಹಿಂದೂಸ್ತಾನಿ ಸಂಗೀತದಲ್ಲೇ ಸಾಧನೆ ಮಾಡು ಎಂದು ಅಪ್ಪ ಹೇಳುತ್ತಲೇ ಇರುತ್ತಿದ್ದರು. ನಾನು ಹಾಡುತ್ತಿದ್ದರೆ, ಕಣ್ಣುಮುಚ್ಚಿ ಕುಳಿತು ಆಸ್ವಾಽಸಿ ಕಣ್ಣಿರು ಸುರಿಸುತ್ತಿದ್ದರು. ನನ್ನ ಸಂಗೀತ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
-ನೀಲಾ ಕೊಡ್ಲಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

ಕಳೆದ 20 ವರ್ಷಗಳಿಂದ ಕುಸ್ತಿಪಟುವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡಿದ್ದಲ್ಲದೇ ಪದಕ ಪಡೆದುಕೊಂಡೇ ಬಂದಿದ್ದು, ಈ ಸಾಧನೆ ಗಮನಿಸಿ ರಾಜ್ಯೋತ್ಸವ ನೀಡಿದ್ದು ನಿಜಕ್ಕೂ ಖುಷಿ ಕೊಟ್ಟಿದೆ.
-ಅಶೋಕ ಏಣಗಿ, ರಾಜ್ಯೋತ್ಸವ ಪುರಸ್ಕೃತ

Advertisement

Udayavani is now on Telegram. Click here to join our channel and stay updated with the latest news.

Next