“ರಾಜು ಜೇಮ್ಸ್ ಬಾಂಡ್’ ಚಿತ್ರದ “ಬೇಕಿತ್ತಾ ಬೇಕಿತ್ತಾ, ಈ ಲವು ಬೇಕಿತ್ತಾ..’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಕೇಳುಗರಿಂದ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.
ಈ ಹಾಡು ಕೇಳಿದ ನಿರ್ದೇಶಕ “ಮಠ’ ಗುರುಪ್ರಸಾದ್ ತಮ್ಮ ಮೊದಲ ಮದುವೆ, ಡೈವೋರ್ಸ್, ಎರಡನೇ ಮದುವೆ ಮತ್ತು ಮಗು ಬಗ್ಗೆ ಮಾತನಾಡಿದ್ದಾರೆ. ಇದು ಹಾಡಿನ ಪರಿಣಾಮ ಎಂಬ ಖುಷಿ ಚಿತ್ರತಂಡದ್ದು. ಇನ್ನು, ಅಂತೋನಿ ದಾಸ್ ಹಾಡಿರುವ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.
ದೀಪಕ್ ಮಧುವನಹಳ್ಳಿ ಈ ಸಿನಿಮಾದ ನಿರ್ದೇಶಕರು. ಚಿತ್ರದ ಬಗ್ಗೆ ಮಾತನಾಡುವ ದೀಪಕ್, “ರಾಜು ಜೇಮ್ಸ್ ಬಾಂಡ್ ನನ್ನ ನಿರ್ದೇಶನದ ಮೂರನೇ ಚಿತ್ರ. ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ಚಿತ್ರೀಕರಣ ಮುಕ್ತಾಯವಾಗಿದೆ.
ಆಗಸ್ಟ್ ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲಂಡನ್ ನಲ್ಲಿ 21 ದಿನಗಳ ಚಿತ್ರೀಕರಣವಾಗಿದೆ’ ಎಂದರು.
ಗುರುನಂದನ್ ಈ ಚಿತ್ರದ ನಾಯಕ. ಗುರುನಂದನ್ ಅವರಿಗೆ ನಾಯಕಿಯಾಗಿ ಮೃದಲ ನಟಿಸಿದ್ದಾರೆ. ರವಿಶಂಕರ್ ಸಾಧುಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಜೈ ಜಗದೀಶ್, ತಬಲ ನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ