“ಮದರಂಗಿ’ ಕೃಷ್ಣ, “ದುನಿಯಾ’ ವಿಜಯ್ ಹೀಗೆ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹಲವು ನಾಯಕ ನಟರು ನಿಧಾನವಾಗಿ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ಈಗ ಈ ಸಾಲಿಗೆ , ಮತ್ತೂಂದು ಹೆಸರು ಸೇರ್ಪಡೆಯಾಗುತ್ತಿದೆ. ಅವರೇ ಸೂರಜ್ ಗೌಡ. “ಮದುವೆಯ ಮಮತೆಯ ಕರೆಯೋಲೆ’ ಮೂಲಕ ಚಿತ್ರರಂಗ ಪ್ರವೇಶಿಸಿದ ಸೂರಜ್ ಗೌಡ, ಈಗ ನಟನೆ ಜೊತೆಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಅಂದಹಾಗೆ ಸೂರಜ್ ಗೌಡ, ತಾವೇ ಬಯಸಿ ನಿರ್ದೇಶಕನ ಸ್ಥಾನ ಅಲಂಕರಿಸಿದ್ದಲ್ಲ. ಬದಲಾಗಿ ತಾನೇ ಹುಡುಕಿಕೊಂಡು ಬಂದ ಅನಿವಾರ್ಯ ಸನ್ನಿವೇಶವೊಂದು ಅವರನ್ನು ನಿರ್ದೇಶಕನನ್ನಾಗಿ ಮಾಡಿದೆ. ಸೂರಜ್ ಗೌಡ ತಾನೇ ಬರೆದು ನಾಯಕನಾಗಿ ಅಭಿನಯಿಸಬೇಕಿದ್ದ “ನಿನ್ನ ಸನಿಹಕೆ’ ಚಿತ್ರಕ್ಕೆ ಆರಂಭದಲ್ಲಿ ಸುಮನ್ ಜಾದೂಗರ್ ನಿರ್ದೇಶನ ಮಾಡಬೇಕಿತ್ತು. ಆದರೆ ಚಿತ್ರ ಶುರುವಾಗುವ ಹೊತ್ತಿಗೆ ಸುಮನ್ ಜಾದೂಗರ್ ಅಪಘಾತಕ್ಕಿಡಾಗಿ ಕೆಲ ತಿಂಗಳು ವಿಶ್ರಾಂತಿ ಪಡೆಯಬೇಕಾಗಿದ್ದರಿಂದ, ನಿರ್ದೇಶನದ ಜವಾಬ್ದಾರಿ ಸೂರಜ್ ಗೌಡ ಹೆಗಲಿಗೇರಿತು. ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ನಿನ್ನ ಸನಿಹಕೆ’ ಚಿತ್ರ ಸಾಗಿಬಂದ ಈ ಎಲ್ಲ ವೃತ್ತಾಂತಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತು.
ನಾಯಕನಾಗಿ ಮತ್ತು ನಿರ್ದೇಶಕನಾಗಿ ಚಿತ್ರದ ಬಗ್ಗೆ ಮಾತನಾಡಿದ ಸೂರಜ್ ಗೌಡ, “ನಾನು ಇಲ್ಲಿಯವರೆಗೆ ಐದು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಈ ವೇಳೆ ನಟನೆ ಜೊತೆ ಜೊತೆಗೆ ನಿರ್ದೇಶನ ಸೇರಿದಂತೆ ಸಿನಿಮಾದ ಬೇರೆ ಬೇರೆ ಕೆಲಸಗಳನ್ನೂ ಕಲಿತುಕೊಳ್ಳುತ್ತಿದ್ದೆ. ನಾನೇ ಬರೆದ ಈ ಕಥೆಗೆ ನಾನೇ ನಿರ್ದೇಶಕನಾಗುತ್ತೇನೆ ಅಂದುಕೊಂಡಿರಲಿಲ್ಲ. ಅನಿರೀಕ್ಷಿತವಾಗಿ ಬಂದ ಅವಕಾಶ ಮತ್ತು ಸನ್ನಿವೇಶ ಈ ಸಿನಿಮಾದಲ್ಲಿ ನನ್ನನ್ನು ನಟನೆ ಜೊತೆಗೆ ನಿರ್ದೇಶಕನನ್ನಾಗಿಯೂ ಮಾಡಿತು. ನಟನೆ ಮತ್ತು ನಿರ್ದೇಶನ ಎರಡರಲ್ಲೂ ನನ್ನ ಕೈಲಾದ ಮಟ್ಟಿಗೆ ಬೆಸ್ಟ್ ಎನಿಸುವಂಥ ಪರ್ಫಾರ್ಮೆನ್ಸ್ ಕೊಡುವ ಪ್ರಯತ್ನ ಮಾಡಿದ್ದೇನೆ ‘ ಎಂದು ಭರವಸೆಯ ಮಾತುಗಳನ್ನಾಡಿದರು ಸೂರಜ್.
ಇನ್ನು “ನಿನ್ನ ಸನಿಹಕೆ’ ಚಿತ್ರದ ಮೂಲಕ ನಟ ರಾಮ್‌ಕುಮಾರ್ ಪುತ್ರಿ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಮಾತಿಗಿಳಿದ ಧನ್ಯಾ ರಾಮ್‌ಕುಮಾರ್, “ಇಂಥದ್ದೊಂದು ಒಳ್ಳೆಯ ಟೀಮ್ ಸಿಕ್ಕಿದ್ದರಿಂದ, ನನ್ನ ಮೊದಲ ಸಿನಿಮಾದಲ್ಲಿಯೇ ಸಾಕಷ್ಟು ಕಲಿತುಕೊಳ್ಳಲು ಸಾಧ್ಯವಾಯ್ತು. ಈ ಸಿನಿಮಾ ಮತ್ತು ನನ್ನ ಪಾತ್ರ ಸಾಕಷ್ಟು ಕಲಿಸಿದೆ. ನಮ್ಮ ನಡುವೆಯೇ ನಡೆಯುವ ಕಥೆಯೊಂದು, ಎಲ್ಲರಿಗೂ ಇಷ್ಟವಾಗುವಂತೆ ತೆರೆ ಮೇಲೆ ಬರುತ್ತಿದೆ. ಎಲ್ಲರಿಗೂ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎಂದರು ಧನ್ಯಾ.
“ವೈಟ್ ಆಂಡ್ ಗ್ರೇ ಪಿಕ್ಚರ್’ ಬ್ಯಾನರ್ ಮೂಲಕ ಅಕ್ಷಯ ರಾಜಶೇಖರ್, ರಂಗನಾಥ ಕೂಡ್ಲಿ ಈ ಚಿತ್ರಕ್ಕೆ ನಿರ್ಮಾಪಕರು. ಚಿತ್ರಕ್ಕೆ ಅಭಿಲಾಶ್ ಕಳತ್ತಿ ಛಾಯಾಗ್ರಹಣವಿದೆ. ಸುರೇಶ ಆರ್ಮುಗಂ ಸಂಕಲನವಿದೆ. ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ ಕುಮಾರ್ ಜೆ ಸಂಭಾಷಣೆ, ವಾಸುಕಿ ವೈಭವ್ ಸಾಹಿತ್ಯವಿದೆ.
“ನಿನ್ನ ಸನಿಹಕೆ’ ಚಿತ್ರದ ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದ್ದು, ಚಿತ್ರದಲ್ಲಿ 2 ಭರ್ಜರಿ ಫೈಟ್ಸ್, 4 ಮೆಲೋಡಿ ಸಾಂಗ್ ಇದೆ. ಬೆಂಗಳೂರು, ಕೊಡಗು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.