ನವದೆಹಲಿ : ಗಾಲ್ವಾನ್ ಘರ್ಷಣೆಯಲ್ಲಿ ಮಡಿದ ಯೋಧನ ಕುಟುಂಬ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ತನಗೆ ಕರೆ ಬಂದಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಬಿಹಾರ ವಿಧಾನಸಭೆಗೆ ತಿಳಿಸಿದರು.
ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸರಕಾರದ ಉತ್ತರದ ಸಂದರ್ಭದಲ್ಲಿ ಕುಮಾರ್ ಈ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಕ್ಷಣಾ ಸಚಿವರಿಗೆ ತಿಳಿಸಿರುವುದಾಗಿ ಕುಮಾರ್ ಹೇಳಿದರು.
ಗಾಲ್ವಾನ್ ಘರ್ಷಣೆಯಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದ ಬಿಹಾರ ರೆಜಿಮೆಂಟ್‌ನ ಯೋಧ ಜೈ ಕಿಶೋರ್ ಸಿಂಗ್ ಅವರ ಪುತ್ರ ರಾಜಕಪೂರ್ ಸಿಂಗ್ ಬಂಧನವನ್ನು ವಿರೋಧಿಸಿ ಬಿಜೆಪಿ ಶಾಸಕರು ಬೆಳಗ್ಗೆ ಸದನದ ಕಲಾಪದಿಂದ ಹೊರ ನಡೆದರು.
ವೈಶಾಲಿ ಜಿಲ್ಲೆಯ ಜಂಡಹಾ ಪೊಲೀಸ್ ಠಾಣೆ ವ್ಯಾಪ್ತಿಯ ಚಕ್ಫತಾ ಗ್ರಾಮದ ನಿವಾಸಿ ಸಿಂಗ್, ಮೃತ ತಂದೆ (ಯೋಧ) ಸ್ಮಾರಕವನ್ನು ಕಾನೂನುಬಾಹಿರವಾಗಿ ನಿರ್ಮಾಣ ಮಾಡಲಾಗಿದೆ ಎಂದು ವಿರೋಧಿಸಿದ ಅವರ ನೆರೆ ಮನೆಯ ಹರಿನಾಥ್ ರಾಮ್ ಅವರು ಶನಿವಾರ ದೂರು ನೀಡಿದ ಬಳಿಕ ಅವರನ್ನು ಬಂಧಿಸಲಾಗಿತ್ತು.
ಜೈಲಿನಲ್ಲಿರುವ ಸಿಂಗ್ ಅವರ ವಿರುದ್ಧ ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಪೊಲೀಸ್ ಸಿಬಂದಿ ಎಳೆದೊಯ್ದಿದ್ದಾರೆ ಎಂದು ವರದಿಯಾಗಿದೆ.