ಹೊಸದಿಲ್ಲಿ: ಮಹತ್ತರ ಬೆಳವಣಿಗೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಇದರ ಫಲವಾಗಿ ರಷ್ಯಾದಿಂದ ಭಾರತಕ್ಕೆ ಬರಬೇಕಿರುವ ಎಸ್-400 ಕ್ಷಿಪಣಿ ನಿಗ್ರಹ ವ್ಯವಸ್ಥೆ ಬೇಗನೆ ಹಸ್ತಾಂತರ ಗೊಳ್ಳುವ ನಿರೀಕ್ಷೆ ಇದೆ. 2ನೇ ಮಹಾ ಯುದ್ಧದಲ್ಲಿ ರಷ್ಯಾ ಗೆಲುವಿನ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಂಗ್ ತೆರಳಿದ್ದಾರೆ.
ಈ ವೇಳೆ ಅಲ್ಲಿ ಹಲವಾರು ಸೇನಾಧಿಕಾರಿಗಳು, ಸರಕಾರದ ಪ್ರತಿನಿಧಿಗಳ ಜತೆಗೆ ಹಲವಾರು ಸುತ್ತಿನ ಸಭೆ ನಡೆಸಲಿದ್ದಾರೆ.
ಕೋವಿಡ್ ಕಾಟದಿಂದ ವಿಳಂಬ ವಾಗಿರುವ ಅಂದಾಜು 41,000 ಕೋಟಿ ರೂ. ಮೌಲ್ಯದ “ಎಸ್-400′ ಕ್ಷಿಪಣಿ ನಿಗ್ರಹ ವ್ಯವಸ್ಥೆ 2021ರ ಡಿಸೆಂಬರ್‌ನಲ್ಲಿ ಹಸ್ತಾಂತರಗೊಳ್ಳುವ ಸಾಧ್ಯತೆಯಿದೆ. ಆದರೆ ಪ್ರಸಕ್ತ ತುರ್ತು ಸಂದರ್ಭದಲ್ಲಿ ಅದರ ಆವಶ್ಯಕತೆ ಇದೆ.
ಸಿಂಗ್ ಭೇಟಿಯಲ್ಲಿ ಇನ್ನೆರಡು ಅಜೆಂಡಾಗಳೂ ಇವೆ. ರಷ್ಯಾ ನಿರ್ಮಿತ ಸುಖೋಯ್ ಮತ್ತು ಮಿಗ್ ವಿಮಾನಗಳ ಬಿಡಿಭಾಗಗಳು ಬೇಗನೆ ಭಾರತಕ್ಕೆ ಲಭ್ಯವಾಗುವಂತೆ ಮಾಡುವುದು ಒಂದಾದರೆ, ಭಾರತಕ್ಕೆ ರಷ್ಯಾದಿಂದ ತಂತ್ರಜ್ಞಾನ ಹಸ್ತಾಂತರ ಪ್ರಕ್ರಿಯೆಗಳ ಮೇಲೆ ಚೀನ ಸಹಿತ ಯಾವುದೇ ಅನ್ಯ ರಾಷ್ಟ್ರಗಳ ಪ್ರಭಾವ ಬೀಳದಂತೆ ರಷ್ಯಾ ಸರಕಾರದಿಂದ ವಾಗ್ಧಾನ ಪಡೆಯುವುದು.
ತ್ರಿಪಕ್ಷೀಯ ವರ್ಚುವಲ್ ಸಭೆ
ಭಾರತ -ಚೀನ ನಡುವಣ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವುದಕ್ಕಾಗಿ ರಷ್ಯಾವು ತ್ರಿಪಕ್ಷೀಯ ಸಭೆ ನಡೆಸಲಿದೆ. ಜೂ.23ರಂದು ನಡೆಯುವ ಈ ವರ್ಚುವಲ್ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗವಹಿಸಲಿದ್ದು, ರಷ್ಯಾ ಮತ್ತು ಚೀನದ ವಿದೇಶ ಸಚಿವರೂ ಪಾಲ್ಗೊಳ್ಳಲಿದ್ದಾರೆ. ರಾಜನಾಥ್ ಸಿಂಗ್ ರಷ್ಯಾ ಭೇಟಿಯ ನಡುವೆಯೇ ಈ ಸಭೆ ನಡೆಯಲಿದೆ.