ಕಲಬುರಗಿ: ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NEKRTC) ಯ ಅಧ್ಯಕ್ಷರಾಗಿ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಸೋಮವಾರ (ಸೆ. 7ರಂದು) ಕಾರ್ಯಭಾರ ವಹಿಸಿಕೊಳ್ಳಲಿದ್ದಾರೆ.
ಉಪಮುಖ್ಯಮಂತ್ರಿ ಗಳು ಹಾಗೂ ಸಾರಿಗೆ ಸಚಿವರಾಗಿರುವ ಲಕ್ಷ್ಮಣ ಸವದಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಂಸದರ, ನಿಗಮ ಮಂಡಳಿ ಅಧ್ಯಕ್ಷರ ಹಾಗೂ ಶಾಸಕರ ಸಮ್ಮುಖದಲ್ಲಿ ತೇಲ್ಕೂರ ಎನ್ಇಕೆಆರ್ ಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕಳೆದ ಜುಲೈ 27ರಂದು ರಾಜ್ಯ ಸರ್ಕಾರ 24 ಶಾಸಕರನ್ನು ವಿವಿಧ ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಯಾದಗಿರಿ ಜಿಲ್ಲೆಯಿಂದ ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರನ್ನಾಗಿ, ರಾಯಚೂರು ಜಿಲ್ಲೆಯಿಂದ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ, ಅದೇ ರೀತಿ ರಾಯಚೂರು ನಗರ ಕ್ಷೇತ್ರದ ಶಾಸಕ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಅಧ್ಯಕ್ಷರನ್ನಾಗಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ನೇಮಕ ಮಾಡಲಾಗಿದ್ದರಿಂದ ಇವರೆಲ್ಲರೂ ಈಗಾಗಲೇ ಕಾರ್ಯಭಾರ ವಹಿಸಿಕೊಂಡಿದ್ದರು.
ಆದರೆ ಎನ್ಇಕೆಆರ್ ಟಿಸಿ ಅಧ್ಯಕ್ಷರಾಗಿ ರಾಜಕುಮಾರ ಪಾಟೀಲ್ ತೇಲ್ಕೂರ ಅಧಿಕಾರ ಸ್ವೀಕರಿಸಿರಲಿಲ್ಲ. ಕೋವಿಡ್ ಸೊಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಜತೆಗೆ ತೇಲ್ಕೂರ ಅವರನ್ನು ಕೆಕೆಆರ್ ಡಿಬಿ ಮಂಡಳಿ ಅಧ್ಯಕ್ಷರಾಗಿ ಮಾಡುವಂತೆ ಕಲ್ಯಾಣ ಕರ್ನಾಟಕದ ಶಾಸಕರು, ಸಂಸದರು ಹಾಗೂ ಮಠಾಧೀಶರು ಮುಖ್ಯಮಂತ್ರಿ ಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಆದರೆ ಮಂಡಳಿ ಅಧ್ಯಕ್ಷರನ್ನಾಗಿ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ನೇಮಕ ಮಾಡಿ ಜತೆಗೆ ಮಂಡಳಿ ಅಧ್ಯಕ್ಷರಾಗಿ ರೇವೂರ ಅಧಿಕಾರ ಸ್ವೀಕರಿಸಿದ್ದರಿಂದ ತೇಲ್ಕೂರ ಅವರು ಎನ್ಇಕೆಆರ್ ಟಿಸಿ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡಿರಲಿಲ್ಲ. ಈಗಾಗಲೇ ವಿವಿಧ ನಿಗಮ ಮಂಡಳಿಗಳಿಗೆ ನೇಮಕವಾಗಿರುವ ಶಾಸಕರೆಲ್ಲರೂ ಅಧಿಕಾರ ಸ್ವೀಕರಿದ್ದರಿಂದ ಜತೆಗೆ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ನೇಮಕ ಮಾಡಲಾಗಿರುವ ಮಂಡಳಿಯ ಕಾರ್ಯಭಾರ ವಹಿಸಿಕೊಳ್ಳುವಂತೆ ಸೂಚಿಸಿದ್ದರಿಂದ ಈಗ ತೇಲ್ಕೂರ ಎನ್ಇಕೆಆರ್ ಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ನಿರ್ಧರಿಸಿದ್ದಾರೆ.
ಎನ್ಇಕೆಆರ್ ಟಿಸಿ ಅಧ್ಯಕ್ಷರನ್ನಾಗಿ ಪಕ್ಷದ ಕಾರ್ಯಕರ್ತರನ್ನೇ ನೇಮಕ ಮಾಡಲಾಗಿರುತ್ತದೆ. ಈ ಸಲ ತೇಲ್ಕೂರ ಅವರನ್ನು ನೇಮಕ ಮಾಡಲಾಗಿದೆ.