Advertisement

“ಡಾ.ರಾಜ್‌ಕುಮಾರ್‌ ಕುಟುಂಬದಿಂದ ಸಿವಿಲ್‌ ಸರ್ವೀಸಸ್‌ ಅಕಾಡೆಮಿ’

03:45 AM Feb 19, 2017 | Team Udayavani |

ಬೆಂಗಳೂರು: ಐಎಎಸ್‌, ಐಪಿಎಸ್‌ ಸೇರಿದಂತೆ ವಿವಿಧ ನಾಗರೀಕ ಸೇವಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಅಗತ್ಯ ತರಬೇತಿ ನೀಡಲು “ಡಾ.ರಾಜ್‌ಕುಮಾರ್‌ ಸಿವಿಲ್‌ ಸರ್ವೀಸಸ್‌ ಅಕಾಡೆಮಿ’ ಪ್ರಾರಂಭಿಸಲಾಗುತ್ತಿದೆ ಎಂದು ವರನಟ ಡಾ.ರಾಜ್‌ಕುಮಾರ್‌ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ತಿಳಿಸಿದ್ದಾರೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂಬುದು ನಮ್ಮ ತಂದೆ ಡಾ.ರಾಜ್‌ಕುಮಾರ್‌ ಅವರು ಆಶಯವಾಗಿತ್ತು. ಅವರ ಆಶಯದಂತೆ ನಮ್ಮ ಕುಟುಂಬ ನಾಗರಿಕ ಸೇವಾ ಹುದ್ದೆಗಳ ಆಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಅಕಾಡೆಮಿ ಸ್ಥಾಪಿಸಲು ಇಚ್ಚಿಸಿದೆ ಎಂದು ಹೇಳಿದರು.

ಚಂದ್ರಲೇಔಟ್‌ನ 60 ಅಡಿ ರಸ್ತೆಯಲ್ಲಿ ಅಕಾಡೆಮಿ ಆರಂಭಗೊಳ್ಳುತ್ತಿದ್ದು, ಮಾರ್ಚ್‌5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್‌ ಚಂದ್ರ ಕುಂಟಿಯಾ ಮತ್ತಿತರ ಗಣ್ಯರು ಭಾಗವಹಿಸುವರು.

ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ದಿನವಾದ ಏ.24ರಿಂದ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಆರಂಭವಾಗಲಿದೆ ಎಂದು ಹೇಳಿದರು.

ದುಬಾರಿ ವೆಚ್ಚದಿಂದಾಗಿ ನಾಗರಿಕ ಸೇವಾ ಪರೀಕ್ಷೆಗಳಿಂದ ದೂರ ಉಳಿಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ತರಬೇತಿ ನೀಡುವ ಉದ್ದೇಶದಿಂದ ಅಕಾಡೆಮಿ ಸ್ಥಾಪಿಸಲಾಗುತ್ತಿದೆ.

Advertisement

ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಸರ್ಕಾರದ ಬಹಳಷ್ಟು ಅಧಿಕಾರಿಗಳು ಮುಂದೆ ಬಂದಿದ್ದಾರೆ. ಜತೆಗೆ ದೆಹಲಿ ಸೇರಿದಂತೆ ದೇಶದ ಉನ್ನತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಅಧಿಕಾರಿಗಳು ಇಲ್ಲಿಗೆ ಬಂದು ತರಬೇತಿ ನೀಡಲು ಒಪ್ಪಿದ್ದಾರೆ. ಅಕಾಡೆಮಿಯ ಯಶಸ್ಸು ಆಧಾರಿಸಿ ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೆ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಕಾಡೆಮಿ ಅಧ್ಯಕ್ಷ ಗಿರೀಶ್‌ ಮಾತನಾಡಿ, ನಾಗರೀಕ ಸೇವಾ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಹೊರರಾಜ್ಯಗಳಿಗೆ ಹೋಗಬೇಕಾಗಿದೆ. ಅಲ್ಲದೆ, ದುಬಾರಿ ತರಬೇತಿ ವೆಚ್ಚದಿಂದ ಸಾಕಷ್ಟು ಕನ್ನಡಿಗ ವಿದ್ಯಾರ್ಥಿಗಳು ಐಎಎಸ್‌, ಐಪಿಎಸ್‌ ಪರೀಕ್ಷೆಗಳಿಂದ ದೂರ ಉಳಿದು, ದೇಶದ ಉನ್ನತ ನಾಗರಿಕ ಹುದ್ದೆಗಳಿಗೆ ಸೇರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೊರ ರಾಜ್ಯಗಳಲ್ಲಿ ತಬೇತಿಗೆ ತಗಲುವ ವೆಚ್ಚಕ್ಕಿಂತ ಅರ್ಧದಷ್ಟು ಕಡಿಮೆ ಶುಲ್ಕ ಪಡೆಯಲು ಅಕಾಡೆಮಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಾರ್ಚ್‌ 3ನೇ ವಾರದಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಹೆಚ್ಚು ಅಂಕ ಪಡೆದ ಬಹಳಷ್ಟು ವಿದ್ಯಾರ್ಥಿಗಳಿಗೆ ರಿಯಾಯಿತಿ ಅಥವಾ ಉಚಿತ ತರಬೇತಿ ನೀಡಲಾಗುವುದು. ಈಗಾಗಲೇ ಸುಮಾರು 6ರಿಂದ 7 ಮಂದಿ ಖಾಯಂ ವಿಷಯ ತಜ್ಞರಿದ್ದು, ಇನ್ನಷ್ಟು ಅಧಿಕಾರಿಗಳು, ಅಧ್ಯಾಪಕರು ಸೇರ್ಪಡೆಗೊಳ್ಳಲಿದ್ದಾರೆ ಎಂದರು. ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರ ಗುರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next