Advertisement
ಇದು ಅಮ್ಮನ ಮನೆ ಚಿತ್ರದಲ್ಲಿ ಬರುವ ಒಂದು ಸನ್ನಿವೇಶ. ಹಾಗಾದರೆ, ಇಂಥ ಸನ್ನಿವೇಶದ ಹಿನ್ನೆಲೆ ಏನು? ಜಾನಕಮ್ಮ ತನ್ನ ಮಗ ರಾಜೀವನನ್ನು ಬೆಳೆಸಿದ ರೀತಿಯಾದರೂ ಹೇಗೆ? ರಾಜೀವ ಮಾಡುತ್ತಿರುವ ಹೋರಾಟವಾದರೂ ಏನು? ಅದೆಲ್ಲವನ್ನು ನೋಡಬೇಕು ಅಂದ್ರೆ “ಅಮ್ಮನ ಮನೆ’ಗೆ ಹೋಗಬೇಕು. ಹೌದು, ಸುಮಾರು ಹದಿನಾಲ್ಕು ವರ್ಷಗಳ ನಂತರ ನಟ ರಾಘವೇಂದ್ರ ರಾಜಕುಮಾರ್ ಅವರ ಕಂ ಬ್ಯಾಕ್ ಚಿತ್ರ ಎಂದೇ ಹೇಳಲಾಗುತ್ತಿರುವ “ಅಮ್ಮನ ಮನೆ’ ಚಿತ್ರ ಈ ವಾರ ತೆರೆಗೆ ಬಂದಿದೆ.
Related Articles
Advertisement
“ಅಮ್ಮನ ಮನೆ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರದ್ದು ಕುಟುಂಬದ ಜವಾಬ್ದಾರಿ ಹೊತ್ತ ಮಧ್ಯ ವಯಸ್ಕ ರಾಜೀವನ ಪಾತ್ರ. ಅಂಗ ವೈಕಲ್ಯವಿದ್ದರೂ, ಸ್ವಾಭಿಮಾನಿಯಾಗಿ ಅಮ್ಮನ ಮನೆಯನ್ನು ನಡೆಸಿಕೊಂಡು ಹೋಗುವ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರದ್ದು ಅಚ್ಚುಕಟ್ಟಾದ ಅಭಿನಯ. ಅವರ ಹಾವ-ಭಾವ, ನಡೆ-ನುಡಿ ಎಲ್ಲವೂ ರಾಜೀವ ಪಾತ್ರಕ್ಕೆ ಒಪ್ಪುವಂತಿದೆ.
ರಾಜೀವನ ಪಾತ್ರದಲ್ಲೇ ಇಡೀ ಚಿತ್ರ ನಡೆಯುವುದರಿಂದ, ಬೇರೆ ಪಾತ್ರಗಳು ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ಉಳಿದಂತೆ ಚಿತ್ರದ ಬಹುತೇಕ ಕಲಾವಿದರು ತಮಗಿದ್ದ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಚಿತ್ರದ ಕೆಲವು ದೃಶ್ಯಗಳಲ್ಲಿ ಬರುವ ಸಂಭಾಷಣೆಗಳು ನೋಡುಗರ ಮನ ಮುಟ್ಟುವಂತಿವೆ. ಛಾಯಾಗ್ರಹಣ ಚಿತ್ರದ ದೃಶ್ಯಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದೆ.
ಸಂಕಲನ ಕಾರ್ಯ ಇನ್ನಷ್ಟು ಮೊನಚಾಗಿದ್ದರೆ “ಅಮ್ಮನ ಮನೆ’ ತೆರೆಮೇಲೆ ಇನ್ನಷ್ಟು ಹೊಳೆಯುತ್ತಿತ್ತು. ಹಿನ್ನೆಲೆ ಸಂಗೀತದ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನ ಕೊಡಬಹುದಿತ್ತು. ಕೆಲವೊಂದು ಅಂಶಗಳನ್ನು ಬದಿಗಿಟ್ಟು ನೋಡುವುದಾದರೆ, “ಅಮ್ಮನ ಮನೆ’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ಆ್ಯಕ್ಷನ್, ಥ್ರಿಲ್ಲರ್, ಹಾರರ್, ಮಾಮೂಲಿ ಕಮರ್ಷಿಯಲ್ ಚಿತ್ರಗಳಿಂದ ಕೊಂಚ ಬ್ರೇಕ್ ಇರಲಿ ಎನ್ನುವವರು ಒಮ್ಮೆ “ಅಮ್ಮನ ಮನೆಗೆ’ ಹೋಗಿ ಬರಬಹುದು.
ಚಿತ್ರ: ಅಮ್ಮನ ಮನೆ ಚಿತ್ರಕಥೆ – ನಿರ್ದೇಶನ: ನಿಖಿಲ್ ಮಂಜು
ನಿರ್ಮಾಣ: ಆತ್ಮಶ್ರೀ, ಆರ್.ಎಸ್ ಕುಮಾರ್
ತಾರಾಗಣ: ರಾಘವೇಂದ್ರ ರಾಜಕುಮಾರ್, ಸುಚೇಂದ್ರ ಪ್ರಸಾದ್, ತಬಲನಾಣಿ, ಪ್ರಣವ ಮೂರ್ತಿ, ಎಂ.ಡಿ ಕೌಶಿಕ್, ಮಾನಸಿ ಮತ್ತಿತರರು. * ಜಿ.ಎಸ್ ಕಾರ್ತಿಕ ಸುಧನ್