Advertisement

Rajiv Taranath: ರಾಗಗಳ ಬೆನ್ನತ್ತಿದ ಸಂಗೀತ ಶೋಧಕ ತಾರಾನಾಥ್‌

11:23 PM Jun 11, 2024 | Team Udayavani |

ಪಂಡಿತ್‌ ರಾಜೀವ್‌ ತಾರಾನಾಥ್‌ ನಮ್ಮ ರಾಷ್ಟ್ರ ಕಂಡ ಹಿರಿಯ ಸರೋದ್‌ ವಾದಕರಲ್ಲಿ ಒಬ್ಬರಾಗಿದ್ದರು. ಕರ್ನಾಟಕದಿಂದ ಆ ಎತ್ತರಕ್ಕೆ ಏರಿದ ಏಕಮಾತ್ರ ಕಲಾವಿದರು ಇವರು. ಮೂಲತಃ ಇವರು ಸಾಹಿತ್ಯ ಪ್ರೇಮಿ. ಇಂಗ್ಲಿಷ್‌ನಲ್ಲಿ ಹೆಚ್ಚು ಪ್ರಭುತ್ವ ಹೊಂದಿದ್ದರು. ಇಂಗ್ಲಿಷ್‌ನಲ್ಲಿ ಪ್ರಾಧ್ಯಾಪಕರಾಗಿ ಜನಮನ್ನಣೆಗಳಿಸಿದ್ದ ತಾರಾನಾಥ್‌, ತಮ್ಮನ್ನು ಸಂಗೀತಕ್ಕೆ ಸಮರ್ಪಿಸಿಕೊಳ್ಳುವ ಸಲುವಾಗಿ ಉದ್ಯೋಗವನ್ನು ತ್ಯಜಿಸಿ ಸಂಗೀತದ ಮೊರೆ ಹೋದರು. ಇರುವ ಉದ್ಯೋಗ ಬಿಟ್ಟು, ಸರೋದ್‌ನಂತಹ ದುರ್ಲಭ ವಾದ್ಯಕ್ಕೆ ಅವರ ಮನವೊಲಿದಿತ್ತು. ಆಗಿನ ಕಾಲಕ್ಕೆ ಅವರಿಗದು ಸವಾಲಿನ ವಿಷಯವಾಗಿತ್ತು.

Advertisement

ಮಾಲಿಗೌರ, ಕೌಂಶಿ ಕಾನಡಾ ರಾಗಗಳ ಮೇಲೆ ಹೆಚ್ಚು ಪ್ರಭುತ್ವ ಸಾಧಿಸಿದ್ದರು. ಸಾಧಾರಣ ರಾಗಗಳ ಹೊರತಾಗಿ ಅಪರೂಪದ ರಾಗಗಳನ್ನು ಪ್ರಸ್ತುತಪಡಿಸುವುದು ಅವರ ವಿಶೇಷತೆಯಾಗಿತ್ತು. ಒಮ್ಮೆ ನ್ಯೂಯಾರ್ಕ್‌ನ ಕಾರ್ಯಕ್ರಮವೊಂದರಲ್ಲಿ ಯಮನ್‌ ರಾಗ ನುಡಿಸುವುದಾಗಿ ಹೇಳಿದರು. ಯಮನ್‌ ಸಾಮಾನ್ಯ ರಾಗವಾಗಿದ್ದರೂ ಕೂಡ ಅಂದು ಅವರು ಹೊಸ ರೂಪದಲ್ಲಿ ಯಮನ್‌ ಪ್ರಸ್ತುತಪಡಿಸಿದ್ದರು. ಇದು ಅವರ ಪ್ರತಿಭಾ ಪಾಂಡಿತ್ಯವಾಗಿತ್ತು. ಇವರ ಈ ಪ್ರಯೋಗ ಅಂದು ಜನಮನ್ನಣೆಗೆ ಪಾತ್ರವಾಗಿತ್ತು.

ಪಂ.ತಾರಾನಾಥ್‌ ಅವರದ್ದು ಅತ್ಯಂತ ಪ್ರಾಮಾಣಿಕ ವ್ಯಕ್ತಿತ್ವ. ಸಂಗೀತ ಕಾರ್ಯಕ್ರಮ ವೊಂದರಲ್ಲಿ ಆಯೋಜಕರಿಗೆ ತಮ್ಮಿಂದ ಆರ್ಥಿಕ ಹೊಣೆ ಆಗಬಾರದೆಂದು ತಮ್ಮ ಖರ್ಚಿನಿಂದಲೆ ವಸತಿ ವ್ಯವಸ್ಥೆ ಮಾಡಿಕೊಂಡ ಘಟನೆಗಳೂ ಸಾಕಷ್ಟಿವೆ.

ವೈಯಕ್ತಿಕ ಜೀವನ ಹಾಗೂ ಸಂಗೀತ ಪಯಣದಲ್ಲಿ ನನಗೂ, ಪಂ.ತಾರಾನಾಥರಿಗೂ ಸಾಕಷ್ಟು ಸಾಮ್ಯತೆಗಳಿವೆ. ಅವರು ನನಗೆ ಮಾತ್ರವಲ್ಲ, ಇಡೀ ನನ್ನ ಕುಟುಂಬಕ್ಕೆ ಮಾರ್ಗದರ್ಶಕರಾಗಿದ್ದರು. ನಿರಂತರ ಒಡನಾಟದಿಂದ ನಮ್ಮ ಕುಟುಂಬದ ಮೇಲೆ ಪ್ರೀತಿ, ಕಾಳಜಿ ಹೊಂದಿದ್ದರು. ಅವರಿಗೆ ಅವರೆಕಾಳಿನ ತಿನಿಸುಗಳೆಂದರೆ ಬಹಳ ಪ್ರೀತಿ. ಕಳೆದ ಜನವರಿಯಲ್ಲಿ ಮೈಸೂರಿನಲ್ಲಿ ಅವರನ್ನು ಭೇಟಿಯಾಗಿ ಅವರಿಷ್ಟದ ತಿನಿಸುಗಳನ್ನು ನೀಡಿದ್ದೆವು. ಅವರ ಅಭಿನಂದನಾ ಗ್ರಂಥದಲ್ಲಿ ನಾನು ಬರೆದ ಲೇಖನದಲ್ಲಿ ಇದರ ಉಲ್ಲೇಖವಿದೆ. ಪಂ. ಭೀಮಸೇನ್‌ ಜೋಶಿಯವರೊಂದಿಗೂ ಅವರ ಒಡನಾಟ ಉತ್ತಮವಾಗಿತ್ತು.

ಪಂಡಿತ್‌ ರಾಜೀವ್‌ ತಾರಾನಾಥ್‌ ತಮ್ಮ ಜೀವನದ ಬಹುಕಾಲ ಅಮೆರಿಕದ ಕ್ಯಾಲಿಫೊರ್ನಿಯಾದಲ್ಲೇ ಕಳೆದಿದ್ದರು. ಕರ್ನಾಟಕಕ್ಕಿಂತ ಅಮೆರಿಕದಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ಕರ್ನಾಟಕದಲ್ಲೂ ಅವರಿಗೆ ಇನ್ನೂ ಹೆಚ್ಚು ಮನ್ನಣೆ, ಗೌರವ, ಪ್ರೀತಿ ಸಿಗಬೇಕಾಗಿತ್ತು. ಅವರ ಅಗಲಿಕೆಯಿಂದ ಮೇರು ಸಂಗೀತ ವಿದ್ವಾಂಸರೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಸಂಗೀತ ಪರಂಪರೆಯನ್ನು ಇನ್ನು ಮುಂದೆ ಅವರ ಶಿಷ್ಯರು ಮುಂದುವರಿಸಬೇಕು.

Advertisement

ನಾಗರಾಜ್‌ರಾವ್‌ ಹವಾಲ್ದಾರ್‌

ಸಂಗೀತ ವಿದ್ವಾಂಸರು, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next