Advertisement

ಪರೀಕ್ಷೆ ಮುಗಿದ 15 ನಿಮಿಷದಲ್ಲಿ ಫ‌ಲಿತಾಂಶ

06:00 AM Jul 13, 2018 | Team Udayavani |

ಬೆಂಗಳೂರು: ಪರೀಕ್ಷೆ ಮುಗಿದ 15 ನಿಮಿಷದಲ್ಲೇ ಫ‌ಲಿತಾಂಶ ಪ್ರಕಟಿಸುವ ಮೂಲಕ ರಾಜೀವ್‌ಗಾಂಧಿ ಆರೋಗ್ಯ
ವಿಜ್ಞಾನಗಳ ವಿವಿ ಹೊಸ ಇತಿಹಾಸ ಸೃಷ್ಟಿಸಿದೆ.

Advertisement

ರಾಜೀವ್‌ಗಾಂಧಿ ವಿವಿಯ ಫ‌ಲಿತಾಂಶ ನಿಗದಿತ ಸಮಯದಲ್ಲಿ ಬಂದಿರುವುದು ಅತ್ಯಂತ ಕಡಿಮೆ. ಫ‌ಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹತ್ತಾರು ಬಾರಿ ಪ್ರತಿಭಟನೆಯನ್ನೂ ನಡೆಸಿದ್ದರು. ಅಂಕಪಟ್ಟಿ ವಿತರಣೆ ಇನ್ನಷ್ಟು ವಿಳಂಬವಾಗುತಿತ್ತು. ಆದರೆ, ಇದೀಗ ಡಿಜಿಟಲ್‌ ಮೌಲ್ಯಮಾಪನ ಪದ್ದತಿ ಅಳವಡಿಸಿ ಕೊಂಡಿರುವ ಪರಿಣಾಮ ಪರೀಕ್ಷೆ ಮುಗಿದ 15 ನಿಮಿಷದಲ್ಲೇ ಫ‌ಲಿತಾಂಶ ಪ್ರಕಟಿಸಿದೆ ಮತ್ತು ಅಂಕದ ವಿವರಗಳನ್ನೂ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ಇತ್ತೀಚೆಗೆ 150 ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಫ‌ಲಿತಾಂಶವನ್ನು ಎರಡೂವರೆ ಗಂಟೆಯಲ್ಲಿ ಪ್ರಕಟಿಸಿ ಸಾಧನೆ ಮಾಡಿತ್ತು. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪರೀಕ್ಷೆ ಮುಗಿದ 15 ನಿಮಿಷದಲ್ಲೇ ಫ‌ಲಿತಾಂಶ ನೀಡುವ ಮೂಲಕ ಆರೋಗ್ಯಕರ ಸ್ಪರ್ಧೆಯಲ್ಲಿ ಬೆಂವಿವಿಯನ್ನು ಹಿಂದಿಕ್ಕಿದೆ.

ಎಂಡಿಎಸ್‌ ಮತ್ತು ದಂತವೈದ್ಯಕೀಯ ಡಿಪ್ಲೊಮಾ ಕೋರ್ಸ್‌ಗಳ ಥಿಯರಿ ಪರೀಕ್ಷೆ ಜೂನ್‌ನಲ್ಲಿ ಏರ್ಪಡಿಸಲಾಗಿತ್ತು. ಎಂಡಿಎಸ್‌ನಲ್ಲಿ 9 ವಿಭಾಗ ಹಾಗೂ ದಂತವೈದ್ಯಕೀಯ ಡಿಪ್ಲೊಮಾದ 5 ವಿಭಾಗ ಸೇರಿ ಒಟ್ಟು 850 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಥಿಯರಿ ಪರೀಕ್ಷೆಗಳ ಮೌಲ್ಯಮಾಪನ ವನ್ನು ಪರೀಕ್ಷೆ ನಡೆದ ಕೆಲವೇ ದಿನದಲ್ಲಿ ಪೂರೈಸಿದ್ದರು. 

ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲ ಕಾಲೇಜಿನಿಂದ ವೆಬ್‌ಸೈಟ್‌ನಲ್ಲಿ ಅದನ್ನು ಅಪ್‌ಲೋಡ್‌
ಮಾಡಿದ್ದಾರೆ. ರಾಜೀವ್‌ ಗಾಂಧಿ ವಿವಿ ಕೇಂದ್ರ ಕಚೇರಿಯಲ್ಲಿ ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ಕ್ರೋಢೀಕರಿಸಿ 15 ನಿಮಿಷದಲ್ಲಿ ಫ‌ಲಿತಾಂಶ ನೀಡಿದ್ದಾರೆ. ಇದು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಜುಲೈ 12ರ ಸಂಜೆ 5 ಗಂಟೆಗೆ ಕಾಲೇಜುಗಳಿಂದ ಪ್ರಾಯೋಗಿಕ ಪರೀಕ್ಷೆಯ ಫ‌ಲಿತಾಂಶ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿತ್ತು. ಅದಕ್ಕೆ ಥಿಯರಿ ಪರೀಕ್ಷೆಯ ಅಂಕಗಳನ್ನು ಸೇರಿಸಿ 5.15ಕ್ಕೆ ವಿದ್ಯಾರ್ಥಿಗಳಿಗೆ ಫ‌ಲಿತಾಂಶ  ನೀಡಲಾಗಿದೆ ಎಂದು ವಿವಿಯ ಪರೀಕ್ಷಾಂಗ ವಿಭಾಗ ತಿಳಿಸಿದೆ.

ಫ‌ಲಿತಾಂಶದ ಅಂಕಪಟ್ಟಿ ಸೇರಿ ಎಲ್ಲ ಮಾಹಿತಿಗಳನ್ನು ವಿವಿಯ ವೆಬ್‌ಸೈಟ್‌ www.rguhs.ac.in ನಲ್ಲಿ
ಹಾಕಿದ್ದೇವೆ. ಮೌಲ್ಯಮಾಪಕರು ಮತ್ತು ಕಾಲೇಜು ಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರಿಂದ ಪರೀಕ್ಷೆ
ಮುಗಿದ ಕೆಲವೇ ನಿಮಿಷದಲ್ಲಿ ಫ‌ಲಿತಾಂಶ ನೀಡಲು ಸಾಧ್ಯವಾಗಿದೆ. ಡಿಜಿಟಲ್‌ ಮೌಲ್ಯಮಾಪನವೂ ಹೆಚ್ಚಿನ ಸಹಕಾರಿಯಾಗಿದೆ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಎಂ.ರಮೇಶ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next