ದಾವಣಗೆರೆ: ಹೊಸ ಶಿಕ್ಷಣ ನೀತಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುವ ಮೂಲಕ ಮಾಜಿ ಪ್ರಧಾನಿ ರಾಜೀವಗಾಂಧಿಯವರು 21ನೇ ಶತಮಾನಕ್ಕೆ ಭಾರತವನ್ನು ಸಜ್ಜುಗೊಳಿಸಿದ ಧೀಮಂತ ನಾಯಕ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಬಣ್ಣಿಸಿದ್ದಾರೆ.
ಸೋಮವಾರ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಪುಣ್ಯತಿಥಿ ಆಚರಣೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಕ್ಕಾಗಿ ತ್ಯಾಗ, ಬಲಿದಾನ ಮಾಡಿ ಧೃವತಾರೆಯಾಗಿ ಮಿಂಚಿದ ರಾಜೀವ್‌ಗಾಂಧಿಯವರ ದೇಶ ಸೇವೆ ಅನನ್ಯ ಎಂದರು.
ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿಯಾಗಿದ್ದ ಭಾರತ ರತ್ನ ರಾಜೀವ್‌ಗಾಂಧಿ ಯವರು ಭಾರತವನ್ನು 21ನೇ ಶತಮಾನಕ್ಕೆ ಅಣಿಗೊಳಿಸಲು ನಿರ್ಧರಿಸಿದ್ದ ಪರಿಣಾಮ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯೇ ಆಯಿತು. ಅದರ ಫಲವಾಗಿ ಇಂದು ಶ್ರೀಸಾಮಾನ್ಯರ ಕೈಯಲ್ಲೂ ಮೊಬೈಲ್, ಕಂಪ್ಯೂಟರ್ ಕಾಣುತ್ತಿದ್ದೇವೆ ಎಂದು ತಿಳಿಸಿದರು.
ರಾಜೀವ್‌ಗಾಂಧಿ ಯವರ ನಾಯಕತ್ವದಲ್ಲಿ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 411 ಲೋಕಸಭಾ ಸದಸ್ಯರನ್ನು ಗೆಲ್ಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತವು ವಿಶ್ವದಲ್ಲೇ ಅಗ್ರಗಣ್ಯ ರಾಷ್ಟ್ರ ಆಗಬೇಕೆಂಬ ಕನಸು ಕಾಣುತ್ತಿದ್ದರು. ರಾಷ್ಟ್ರ ಪ್ರಗತಿ ಕಾಣಬೇಕಾದರೆ ಯುವಕರ ಪಾತ್ರ ಮುಖ್ಯ ಎಂದು ಅರಿತಿದ್ದ ಅವರು 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡಿದರು ಎಂದು ತಿಳಿಸಿದರು.
ರಾಷ್ಟ್ರ ಮುನ್ನೆಡೆಯಬೇಕಾದರೆ ಶೈಕ್ಷಣಿಕ ಕ್ರಾಂತಿ ಆಗಬೇಕು ಎಂಬ ಹಿನ್ನೆಲೆಯಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತಂದರು. ದೇಶಾದ್ಯಂತ ನವೋದಯ ಶಾಲೆ ಪ್ರಾರಂಭಿಸಿದರು. ತಾಂತ್ರಿಕ ಶಿಕ್ಷಣಕ್ಕೆ ಒತ್ತು ಕೊಟ್ಟರು. ದೂರಸಂಪರ್ಕ, ದೂರದರ್ಶನ, ವಿದ್ಯುನ್ಮಾನ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ದೇಶದ ಇಂದಿನ ಪ್ರಗತಿಗೆ ದೊಡ್ಡ ಅಡಿಪಾಯ ಹಾಕಿದ್ದರು ಎಂದು ತಿಳಿಸಿದರು.
ಸಂವಿಧಾನದ 73 ಮತ್ತು 74ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಮೂಲಕ ಆಡಳಿತ ವಿಕೇಂದ್ರಿಕರಣ ಮತ್ತು ಸಮಾಜದ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರೆಕಿಸುವ ಸಲುವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಶ್ರೀಸಾಮಾನ್ಯರು ಸಹ ಪಡೆಯುವಂತಾಯಿತು ಎಂದು ಸ್ಮರಿಸಿದರು.
ಮೇಯರ್ ಶೋಭಾ ಪಲ್ಲಾಗಟ್ಟೆ, ಡೆಪ್ಯುಟಿ ಮೇಯರ್ ಕೆ. ಚಮನ್ ಸಾಬ್, ಸದಸ್ಯರಾದ ಎ.ಬಿ. ರಹೀಂ, ಆರ್. ಶ್ರೀನಿವಾಸ್, ಕೆ.ಜಿ. ಲಿಂಗರಾಜ್, ಎಚ್. ತಿಪ್ಪಣ್ಣ, ಮುಖಂಡರಾದ ಪಿ. ರಾಜ್‌ಕುಮಾರ್, ಅಯೂಬ್ ಪೈಲ್ವಾನ್, ಎಚ್. ಜಯಣ್ಣ, ಅಲ್ಲಾವಲ್ಲಿ ಘಾಜಿಖಾನ್, ಅಶ್ರಫ್ ಅಲಿ, ಶ್ರೀಕಾಂತ ಬಗರೆ, ಮುಜಾಹಿದ್, ಪಲ್ಲಾಗಟ್ಟೆ ಶಿವಾನಂದಪ್ಪ, ಕೋಳಿ ಇಬ್ರಾಹಿಂ, ಸೈಯದ್ ನಜೀರ್ ಇತರರು ಇದ್ದರು.