ಚೆನ್ನೈ:ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ನಳಿನಿ ಶ್ರೀಹರನ್ ಮಗಳ ಮದುವೆ ಹಿನ್ನೆಲೆಯಲ್ಲಿ ಒಂದು ತಿಂಗಳ ರಜೆ ಮೇಲೆ ವೆಲ್ಲೂರು ಜೈಲಿನಿಂದ ಗುರುವಾರ ಹೊರಬಂದಿದ್ದಾರೆ.
ಕಳೆದ 28 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ನಳಿನಿ ತನ್ನ ಮಗಳು ಮೆಗಾರಳ ಮದುವೆ ಕಾರ್ಯಕ್ರಮದ ಸಿದ್ಧತೆ ನಡೆಸಲು ತನಗೆ ಒಂದು ತಿಂಗಳ ಕಾಲ ಪೆರೋಲ್ ಮೇಲೆ ಮನೆಗೆ ಹೋಗಲು ಅವಕಾಶ ನೀಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಪೆರೋಲ್ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ನಳಿಗೆ ಷರತ್ತನ್ನು ವಿಧಿಸಿ ಒಂದು ತಿಂಗಳ ಪೆರೋಲ್ ಮೇಲೆ ಬಿಡುಗಡೆ ಮಾಡಿ ಆದೇಶ ನೀಡಿದೆ. ನಳಿನಿ ಯಾವುದೇ ಕಾರಣಕ್ಕೂ ವೆಲ್ಲೂರನ್ನು ಬಿಟ್ಟು ಹೊರಹೋಗುವಂತಿಲ್ಲ, ಯಾವುದೇ ರಾಜಕಾರಣಿಯನ್ನು ಭೇಟಿಯಾಗುವುದಾಗಲಿ, ಮಾಧ್ಯಮಗಳ ಜೊತೆ ಮಾತನಾಡುವುದನ್ನು ನಿರ್ಬಂಧಿಸಿ ಪೆರೋಲ್ ನೀಡಿದೆ.
ಯುಕೆಯಲ್ಲಿ ಮೆಡಿಸಿನ್ ಶಿಕ್ಷಣ ಪಡೆದಿರುವ ನಳಿನಿ ಪುತ್ರಿ ವಿವಾಹದ ಸಿದ್ದತೆಗಾಗಿ ತನಗೆ ಆರು ತಿಂಗಳ ಪೆರೋಲ್ ಬೇಕೆಂದು ನಳಿನಿ ಸ್ವತಃ ಹೈಕೋರ್ಟ್ ನಲ್ಲಿ, ತಾಯಿಯಾಗಿ ಮಗಳ ಮದುವೆ ನೆರವೇರಿಸುವ ಹೊಣೆಗಾರಿಕೆ ನನ್ನದಾಗಿದೆ. ನನ್ನ ತಂದೆ ಸಾವನ್ನಪ್ಪುವ ಮುನ್ನವೂ ಕೂಡಾ ನನಗೆ ನನ್ನ ಜವಾಬ್ದಾರಿ ನಿರ್ವಹಿಸಲು ಆಗಿಲ್ಲ. ಈಗ ನಾನು ಮಗಳ ಮದುವೆ ಹಾಗೂ ನನ್ನ ಸಂಬಂಧಿಕರನ್ನು ಭೇಟಿಯಾಗಲು ಅವಕಾಶ ಮಾಡಿಕೊಡಬೇಕು ಎಂದು ವಾದ ಮಂಡಿಸಿರುವುದಾಗಿ ವರದಿ ವಿವರಿಸಿದೆ.
ಕಳೆದ ವರ್ಷ ತಂದೆ ಸಾವನ್ನಪ್ಪಿದ್ದ ಸಂದರ್ಭದಲ್ಲಿ ಹೈಕೋರ್ಟ ನಳಿನಿಗೆ ಒಂದು ದಿನದ ಪೆರೋಲ್ ಮೇಲೆ ಬಿಡುಗಡೆ ಮಾಡಿತ್ತು. ಹೈಕೋರ್ಟ್ ನ ದ್ವಿಸದಸ್ಯ ಪೀಠದ ನ್ಯಾಯಾಧೀಶರಲ್ಲಿ ಒಬ್ಬರಾದ ಜಸ್ಟೀಸ್ ಎಂಎಂ ಸುಂದರೇಶ್, ಸರ್ಕಾರದ ಕಾನೂನಿನ ಪ್ರಕಾರ ಕೇವಲ ಒಂದು ತಿಂಗಳು ಮಾತ್ರ ರಜೆಯ ಅವಕಾಶ ಇದೆ ಎಂಬುದಾಗಿ ನಳಿನಿಗೆ ವಿವರಣೆ ನೀಡಿದ್ದರು.
ಇದೇ ಮೊದಲ ಬಾರಿಗೆ 28 ವರ್ಷಗಳ ಬಳಿಕ ನಳಿನಿ ಒಂದು ತಿಂಗಳ ಕಾಲ ಪೆರೋಲ್ ಮೇಲೆ ಹೊರಬಂದಿರುವುದಾಗಿ ವರದಿ ವಿವರಿಸಿದೆ. ನಳಿನಿ ಪತಿ ಮುರುಗನ್ ಕೂಡಾ ವೆಲ್ಲೂರ್ ಜೈಲಿನಲ್ಲಿಯೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವುದಾಗಿ ವರದಿ ತಿಳಿಸಿದೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿಗೆ ಗಲ್ಲುಶಿಕ್ಷೆಯನ್ನು ಕೋರ್ಟ್ ವಿಧಿಸಿತ್ತು. ಆದರೆ ಸೋನಿಯಾ ಗಾಂಧಿ ಮಧ್ಯಪ್ರವೇಶದಿಂದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆ ಇಳಿಸಿ ಕೋರ್ಟ್ ತೀರ್ಪು ನೀಡಿತ್ತು. ತದನಂತರ ನಳಿನಿ ಜೈಲಿನಲ್ಲಿಯೇ ಮಗಳಿಗೆ ಜನ್ಮ ನೀಡಿದ್ದಳು.