ಚೆನ್ನೈ:ವಿಚಾರವಾದಿ ಪೆರಿಯಾರ್ ಇವಿ ರಾಮಸ್ವಾಮಿ ಅವರ ಕುರಿತು ನೀಡಿರುವ ಹೇಳಿಕೆಗೆ ನಾನು ಕ್ಷಮೆಯಾಚಿಸುವುದಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಮಂಗಳವಾರ ತಿಳಿಸಿದ್ದಾರೆ.
ಪೆರಿಯಾರ್ ಬಗ್ಗೆ ರಜನಿಕಾಂತ್ ನೀಡಿರುವ ಹೇಳಿಕೆ ವಿರುದ್ಧ ರಾಜಕೀಯ ಪಕ್ಷವೊಂದು ದೂರು ದಾಖಲಿಸಿದೆ. ನಟ ರಜನಿಕಾಂತ್ ಪೆರಿಯಾರ್ ಅವರನ್ನು ಅವಮಾನಿಸಿರುವುದಾಗಿ ಆರೋಪಿಸಿದ್ದು, ನಾನು ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ಹೇಳಿದ್ದೇ ವಿನಃ ಬೇರೆ ಏನೂ ಹೇಳಿಲ್ಲ ಎಂಬುದಾಗಿ ರಜನಿ ಸ್ಪಷ್ಟನೆ ನೀಡಿದ್ದಾರೆ.
ಏನಿದು ರಜನಿ-ಪೆರಿಯಾರ್ ವಿವಾದ?
ಜನವರಿ 14ರಂದು ತಮಿಳು ಮ್ಯಾಗಜೀನ್ ತುಘಲಕ್ ನ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ರಜನಿಕಾಂತ್, 1971ರಲ್ಲಿ ಪೆರಿಯಾರ್ ಅವರು ಸೇಲಂನಲ್ಲಿ ಮೌಢ್ಯತೆ ವಿರುದ್ಧ ಬೃಹತ್ ರಾಲಿಯನ್ನು ಆಯೋಜಿಸಿದ್ದರು. ಈ ವೇಳೆ ರಾಮಚಂದ್ರ ಹಾಗೂ ಸೀತೆಯ ನಗ್ನ ಚಿತ್ರವನ್ನು ಗಂಧದ ಹಾರ ಹಾಕಿ ಮೆರವಣಿಗೆ ಮಾಡಿಸಿದ್ದರು. ಆದರೆ ಈ ಸುದ್ದಿಯನ್ನು ಯಾವ ಮಾಧ್ಯಮವೂ ಪ್ರಕಟಿಸಿಲ್ಲವಾಗಿತ್ತು.
ಆದರೆ ತುಘಲಕ್ ಸ್ಥಾಪಕ ಸಂಪಾದಕ ಚೋ ರಾಮಸ್ವಾಮಿ ಅವರು ಮಾತ್ರ ಈ ವರದಿಯನ್ನು ಪ್ರಕಟಿಸಿ, ಟೀಕಿಸಿದ್ದರು. ಆ ಸಂದರ್ಭದಲ್ಲಿ ಆಡಳಿತಾರೂಢ ಮುಖ್ಯಮಂತ್ರಿ ಕೆ.ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರಕ್ಕೆ ಭಾರೀ ಇರಿಸು ಮುರಿಸು ಉಂಟಾಗುವಂತೆ ಮಾಡಿದ್ದರು ಎಂದು ಹಿರಿಯ ನಟ ರಜನಿಕಾಂತ್ ನೆನಪಿಸಿಕೊಂಡಿದ್ದರು.