ಚೆನ್ನೈ: ತಮಿಳು ಸೂಪರ್‌ಸ್ಟಾರ್, ನಟ ರಜನಿಕಾಂತ್ ರಾಜಕೀಯ ಸೇರುತ್ತಾರಾ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ರಾಜಕೀಯ ಪ್ರವೇಶದ ಕುರಿತು ರಜನಿ ಉತ್ಸುಕರಾಗಿದ್ದಾರೆ ಎನ್ನುವುದು ಅವರ ಇಂದಿನ ಹೇಳಿಕೆಯಿಂದ ಸ್ಪಷ್ಟವಾಗಿದ್ದು ಅವರ ಮುಂದಿನ ನಿರ್ಧಾರ ಏನು ಎನ್ನುವ ಕುರಿತು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚತೊಡಗಿದೆ.
ಸತತ 5 ನೇ ದಿನವಾದ ಶುಕ್ರವಾರವೂ ಕೂಡಂಬಾಕಂನಲ್ಲಿ “ಮೀಟ್ ಆ್ಯಂಡ್ ಗ್ರೀಟ್’ ಕಾರ್ಯಕ್ರಮ ದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಜನಿ
‘ನಾನು ನಿಮ್ಮಂತೆಯೇ ಜವಾಬ್ದಾರಿಗಳನ್ನು ಮತ್ತು ಕೆಲಸವನ್ನು ಹೊಂದಿದ್ದೇನೆ. ನಾವು ಅದನ್ನು ಮಾಡೋಣ … ಆದರೆ ಅಂತಿಮ ಯುದ್ಧ ಬಂದಾಗ ಎಲ್ಲರೂ ಒಟ್ಟಾಗಿ ಹೋರಾಡುವ’ ಎಂದಿದ್ದಾರೆ.
‘ಪ್ರಸ್ತುತ ರಾಜಕೀಯ ಪರಿಸ್ಥಿತಿ ಹೇಗಿದೆಯೆಂದರೆ,ವ್ಯವಸ್ಥೆ ಜನರ ಬಗ್ಗೆ ಯೋಚಿಸುವುದಿಲ್ಲ ಮಾತ್ರವಲ್ಲದೆ ಜನರಿಗಾಗಿ ಏನನ್ನೂ ಮಾಡುವುದಿಲ್ಲ. ಅದು ಅಗತ್ಯವಾಗಿ ಬದಲಾಗಬೇಕಾಗಿದೆ’ ಎಂದರು.
ನಾನು ತಮಿಳಿಗ;ಸ್ವಾಮಿಗೆ ತಿರುಗೇಟು
ರಜನಿಕಾಂತ್‌ಗೆ ರಾಜಕೀಯ ಜ್ಞಾನವಿಲ್ಲ ಮಾತ್ರವಲ್ಲ ಅವರು ತಮಿಳಿಗನೇ ಅಲ್ಲ ಎಂದ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಅವರಿಗೆ ತಿರುಗೇಟು ನೀಡಿದ 66 ರ ಹರೆಯದ ರಜನಿಕಾಂತ್
‘ನನ್ನನ್ನು ಅಭಿಮಾನಿಗಳು ತಮಿಳಿಗನನ್ನಾಗಿ ಮಾಡಿದ್ದಾರೆ. 22 ವರ್ಷಗಳ ಕಾಲ ಕನ್ನಡಿಗನಾಗಿದ್ದೆ, ಆ ಬಳಿಕ 44 ವರ್ಷಗಳ ಕಾಲ ನಾನು ತಮಿಳಿಗನಾಗಿದ್ದೇನೆ’ ಎಂದು ತಿರುಗೇಟು ನೀಡಿದರು.