ಬೆಂಗಳೂರು: ಈ ಬಾರಿ ನವೆಂಬರ್ ಒಂದನೇ ತಾರೀಕು ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನವೆಂಬರ್ ಒಂದರಂದು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತೇವೆ ಎಂದರು.
ಇಂದು ನಾಡಿನೆಲ್ಲೆಡೆ ಕನ್ನಡ ಬಾವುಟ ರಾರಾಜಿಸುತ್ತಿದೆ. ಕನ್ನಡತನ ಮೆರೆಯುತ್ತಿದೆ. ಕೋಟಿ ಕಂಠ ಗಾಯನ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಅನೇಕ ಕಡೆ ಇಂದು 6 ಹಾಡುಗಳನ್ನು ಹಾಡಲಾಗಿದೆ. ಕೋಟಿ ಕಂಠ ಗಾಯನ ಎರಡನೇ ವರ್ಷ ಕೂಡ ಅರ್ಥಪೂರ್ಣವಾಗಿರಲಿದೆ. ಕನ್ನಡ ರಾಜ್ಯೋತ್ಸವದ ಹೊತ್ತಲ್ಲಿ ಕನ್ನಡ ಕಟ್ಟುವ ಕೆಲಸ ಮಾಡೋಣ ಎಂದರು.
ಅತಿ ಚಿಕ್ಕ ವಯಸ್ಸಿನಲ್ಲಿ ಈ ಪ್ರಶಸ್ತಿ ಪಡೆಯುತ್ತಿರುವ ರತ್ನ ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮಕ್ಕೆ ರಜನಿಕಾಂತ್, ಜ್ಯೂ.ಎನ್‌ಟಿಆರ್ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಕೂಡ ಭಾಗಿಯಾಗುತ್ತಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರರು, ರಾಜ್‌ಕುಮಾರ್ ಕುಟುಂಬದವರು ಭಾಗಿಯಾಗುತ್ತಾರೆ ಎಂದರು.
ಇಂದು ಪುನೀತ್ ರಾಜ್‌ಕುಮಾರ್ ಅವರ ಗಂಧದಗುಡಿ ಸಿನಿಮಾ ತೆರೆಗೆ ಬಂದಿದೆ. ಕರ್ನಾಟಕದ ಅರಣ್ಯ ಸಂಪತ್ತು, ಪ್ರಾಣಿ, ಪಕ್ಷಿ ಸಂಪತ್ತಿನ ಬಗ್ಗೆ ತೋರಿಸಿರುವ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು.