Advertisement

ಕೈಮಗ್ಗ ನೇಕಾರಿಕೆಗೆ ಮನಸೋತ ಅಧಿಕಾರಿ : ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ಮೌರ್ಯ ಭೇಟಿ

03:08 PM Jan 23, 2022 | Team Udayavani |

ಮಹಾಲಿಂಗಪುರ : ನೇಕಾರ ಕರಕುಶಲತೆ ಮತ್ತು ಕೈಮಗ್ಗ ಬಟ್ಟೆಗಳಿಗೆ ಮನಸೋತ ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ಅವರು ಶನಿವಾರ ಪಟ್ಟಣದ ಹಿರಿಯ ಕೈಮಗ್ಗ ನೇಕಾರರಾದ ಶಿವಶಂಕರ ಮೂಡಲಗಿ, ಮಲ್ಲಪ್ಪ ನಡಕಟ್ನಿ ಅವರ ಮನೆಗಳಿಗೆ ಭೇಟಿ ನೀಡಿದರು.

Advertisement

ಕೈಮಗ್ಗ ನೇಕಾರಿಕೆಯ ನೂಲು(ಖಂಡಕಿ) ಸುತ್ತುವುದು, ಸಂದರಕಿ ಹಾಕುವುದು, ಹಾಸು ಹೊಯ್ಯುವುದು, ವಾಡರ್‌ ಹಾಕುವುದು, ಟಾವೆಲ್‌ ನೇಯ್ಗೆ ಮಾಡುವುದನ್ನು ವೀಕ್ಷಿಸಿ ಮಾಹಿತಿ ಪಡೆದರು. ಸ್ವತಃ ತಾವೇ ಖಂಡಕಿ ಸುತ್ತಿ ಖುಷಿಪಟ್ಟರು. ಮಹಾಲಿಂಗಪ್ಪ ಸೋರಗಾಂವಿ ಅವರ ಮನೆಗೆ ಭೇಟಿ ನೀಡಿ, ಕುಣಿ ಕೈಮಗ್ಗ ವೀಕ್ಷಿಸಿ ಮಾಹಿತಿ ಪಡೆದರು.

ಸುಮಾರು 40ಕ್ಕೂ ಅಧಿಕ ಕೈಮಗ್ಗ ನೇಕಾರರಿಗೆ ಉದ್ಯೋಗ ನೀಡಿ, ಕೈಮಗ್ಗ ಉಳಿವಿಗೆ ಶ್ರಮಿಸುತ್ತಿರುವ ಪಟ್ಟಣದ ಶಿವಶಂಕರ ಮೂಡಲಗಿ ಹಾಗೂ ತಮ್ಮ 75ನೇ ವಯಸ್ಸಿನಲ್ಲಿಯೂ
ನೇಕಾರಿಕೆಯಲ್ಲಿ ತೊಡಗಿರುವ ಮಲ್ಲಪ್ಪ ನಡಕಟ್ನಿ ಅವರನ್ನು ಸನ್ಮಾನಿಸಿದರು.

ನೇಕಾರರನ್ನು ಸನ್ಮಾನಿಸಿ ಮಾತನಾಡಿದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ, ನೇಕಾರಿಕೆ ಅದೊಂದು ಅದ್ಭುತ ಕಲೆಯಾಗಿದೆ. ನೂಲಿನ ಎಳೆ ಎಳೆಗಳನ್ನು ಜೋಡಿಸಿ ಬಟ್ಟೆಗಳನ್ನು ತಯಾರಿಸುವ ಕೈಮಗ್ಗ ನೇಕಾರರ ಸಂಯಮ, ಶ್ರದ್ಧೆ, ಕಾಯಕ ನಿಷ್ಠೆ ಅಗಾಧವಾಗಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ದಾನೇಶ್ವರಿ ಕೈಮಗ್ಗ ಬಟ್ಟೆ ಉತ್ಪಾದನಾ ಘಟಕದ ಮಾಲೀಕ ಶಿವಶಂಕರ ಮೂಡಲಗಿ, ಕೈಮಗ್ಗ ನೇಕಾರಿಕೆ ಬಗ್ಗೆ ಪ್ರೀತಿ, ಅಭಿಮಾನ ಹೊಂದಿರುವ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ
ರಾಜೇಶಕುಮಾರ ಮೌರ್ಯ ಅವರ ಸರಳತೆ, ಪ್ರೊತ್ಸಾಹವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಹಿರಿಯ ಕೈಮಗ್ಗ ನೇಕಾರ ಮಲ್ಲಪ್ಪ ಮ. ನಡಕಟ್ನಿ ಮಾತನಾಡಿ, ನಮ್ಮನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡು ಸನ್ಮಾನಿಸಿ-ಅಲ್ಲಿಯೇ ಒಂದು ವಾರದವರೆಗೆ ಕೈಮಗ್ಗ ಸ್ಥಾಪಿಸಿ, ನೇಕಾರಿಕೆ ಹಾಗೂ ಕೈಮಗ್ಗ ಬಟ್ಟೆಗಳನ್ನು ಪರಿಚಯಿಸಿದ್ದರು. ಈಗ ನಮ್ಮ ಮನೆಗೆ ಬಂದು ಸನ್ಮಾನಿಸಿ, ಪ್ರೊತ್ಸಾಹಿಸಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

Advertisement

ಮಹಾಲಿಂಗೇಶ್ವರ ಮಠಕ್ಕೆ ಭೇಟಿ: ನೇಕಾರರ ಮನೆಗಳಿಗೆ ಭೇಟಿ ನೀಡಿ ನಂತರ ಪಟ್ಟಣದ ಐತಿಹಾಸಿಕ ಮಹಾಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಮಹಾಲಿಂಗೇಶ್ವರ
ಮಠದ ಪೀಠಾಧಿ ಪತಿ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹಿರಿಯ ಕೈಮಗ್ಗ ನೇಕಾರ ಮಲ್ಲಪ್ಪ ನಡಕಟ್ನಿ ಅವರನ್ನು ಸನ್ಮಾನಿಸಿ-ಗೌರವಿಸಿದರು. ಗೋವಿಂದ ಕೆಳಕರ, ಸಂಜು ಹಳ್ಳಿ, ಮಹಾಂತೇಶ ಮೂಡಲಗಿ, ಸೋಮಶೇಖರ ಮೂಡಲಗಿ, ಈಶ್ವರ ಮಠದ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next