ಹೊಸದಿಲ್ಲಿ : ರಾಜದಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿ ವೇಟಿಂಗ್ ಲಿಸ್ಟ್ ನಲ್ಲಿರುವವರು ಇನ್ನು ಮುಂದೆ ಸ್ವಲ್ಪವೇ ಹೆಚ್ಚು ಹಣ ತೆತ್ತು ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯಲಿದ್ದಾರೆ.
ಭಾರತೀಯ ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಅಶ್ವನಿ ಲೊಹಾನಿ ಅವರನ್ನು ಉಲ್ಲೇಖೀಸಿ ಮಾಧ್ಯಮ ವರದಿಗಳು ಈ ವಿಷಯವನ್ನು ತಿಳಿಸಿವೆ.
ಲೊಹಾನಿ ಈ ಹಿಂದೆ ಏರಿಂಡಿಯಾ ಮುಖ್ಯಸ್ಥರಾಗಿದ್ದಾಗಲೇ ಇಂತಹ ಒಂದು ಯೋಜನೆಯನ್ನು ಪ್ರಸ್ತಾವಿಸಿದ್ದರು. ಆಗಲೇ ಏರಿಂಡಿಯಾ ಮತ್ತು ಐಆರ್‌ಸಿಟಿಸಿ ಈ ಬಗ್ಗೆ ಒಪ್ಪಂದವೊಂದನ್ನು ಮಾಡಿಕೊಳ್ಳಲು ಕೂಡ ಮುಂದಾಗಿದ್ದವು.
ಈಗ ರೈಲ್ವೇ ಮಂಡಳಿ ಮುಖ್ಯಸ್ಥರಾಗಿರುವ ಲೊಹಾನಿ ಅವರು ತಾವೇ ಈ ಹಿಂದೆ ರೂಪಿಸಿದ್ದ ಈ ಪ್ರಸ್ತಾವವನ್ನು ಈಗ ‘ಏರಿಂಡಿಯಾ ಒಪ್ಪುವುದಾದರೆ ತಾನು ಅದನ್ನು ಅಂತಿಮಗೊಳಿಸಲು ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.
ಲೊಹಾನಿ ಅವರ ಈ ಪ್ರಸ್ತಾವ ಜಾರಿಗೆ ಬಂತೆಂದರೆ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿ ವೇಟಿಂಗ್ ಲಿಸ್ಟ್‌ನಲ್ಲಿರುವ ದೇಶಾದ್ಯಂತದ ಪ್ರಯಾಣಿಕರು ಸ್ವಲ್ಪವೇ ಹೆಚ್ಚು ಹಣ ಪಾವತಿಸಿ ಏರಿಂಡಿಯಾ ಯಾನವನ್ನು ಕೈಗೊಳ್ಳುವ ಆಯ್ಕೆಯ ಅವಕಾಶವನ್ನು ಪಡೆಯುತ್ತಾರೆ. ಆದರೆ ಪ್ರಯಾಣಿಕರು ಹೋಗಬಯಸುವ ಮಾರ್ಗದಲ್ಲಿ ಏರಿಂಡಿಯಾ ವಿಮಾನ ಸೇವೆ ಇರುವುದು ಅಗತ್ಯವಿರುತ್ತದೆ.
ಇಂತಹ ಪ್ರಯಾಣಿಕರಿಗೆ ವಿಮಾನ ಯಾನದ ಟಿಕೆಟನ್ನು ಐಆರ್‌ಸಿಟಿಸಿ ಕೊಡಮಾಡುತ್ತದೆ. ಈ ಯೋಜನೆಯು ದೃಢಪಡದ ಎಸಿ1 ಮತ್ತು ಎಸಿ-2 ರಾಜಧಾನಿ ಎಕ್ಸ್ ಪ್ರಸ್ ಟಿಕೆಟಿಗೆ ಮಾತ್ರವೇ ಅನ್ವಯಿಸುತ್ತದೆ.