Advertisement

ಮೊದಲ ರಣಜಿ ಟ್ರೋಫಿ ಸನಿಹ ಮಧ್ಯ ಪ್ರದೇಶ: ರಜತ್‌ ಪಾಟೀದಾರ್‌ 122

11:41 PM Jun 25, 2022 | Team Udayavani |

ಬೆಂಗಳೂರು: ಮಧ್ಯ ಪ್ರದೇಶ ದೇಶಿ ಕ್ರಿಕೆಟ್‌ ದೊರೆಯ ಪಟ್ಟವನ್ನು ಅಲಂಕರಿಸಲು ಸರ್ವರೀತಿಯಲ್ಲೂ ಸಿದ್ಧಗೊಂಡಿದೆ. ಈಗಾಗಲೇ ರಣಜಿ ಟ್ರೋಫಿಯತ್ತ ಒಂದು ಕೈ ಚಾಚಿದ್ದು, ರವಿವಾರ ನೂತನ ಇತಿಹಾಸ ನಿರ್ಮಿಸುವುದು ಬಹುತೇಕ ಖಾತ್ರಿಯಾಗಿದೆ.

Advertisement

ರಣಜಿ ಚಾಂಪಿಯನ್‌ ಎನಿಸಿಕೊಳ್ಳಲು ಮೊದಲ “ಅರ್ಹತಾ ಪರೀಕ್ಷೆ’ಯಾದ ಇನ್ನಿಂಗ್ಸ್‌ ಲೀಡ್‌ ಗಳಿಕೆಯಲ್ಲಿ ಮಧ್ಯ ಪ್ರದೇಶ ತೇರ್ಗಡೆಯಾಗಿದೆ. ಪಂದ್ಯದ 4ನೇ ದಿನವಾದ ಶನಿವಾರ ಮೊದಲ ಇನ್ನಿಂಗ್ಸ್‌ನಲ್ಲಿ 536 ರನ್‌ ಪೇರಿಸಿತು. ಲಭಿಸಿದ ಮುನ್ನಡೆ 162 ರನ್‌. ರಜತ್‌ ಪಾಟೀದಾರ್‌ 122 ರನ್‌ ಬಾರಿಸಿ ತಂಡದ ಮೊತ್ತವನ್ನು ಐನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 374 ರನ್‌ ಗಳಿಸಿತ್ತು.

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಮುಂಬಯಿ 2 ವಿಕೆಟ್‌ ನಷ್ಟಕ್ಕೆ 113 ರನ್‌ ಗಳಿಸಿದೆ. ಇನ್ನೂ 49 ರನ್‌ ಹಿನ್ನಡೆಯಲ್ಲಿದೆ. ರವಿವಾರ ಪಂದ್ಯದ ಕೊನೆಯ ದಿನವಾದ್ದರಿಂದ ಸ್ಪಷ್ಟ ಗೆಲುವು ಅಸಾಧ್ಯ. ಹೀಗಾಗಿ 42ನೇ ರಣಜಿ ಟ್ರೋಫಿ ಮುಂಬಯಿ ಪಾಲಿಗೆ ಮರೀಚಿಕೆಯೇ ಆಗಿ ಉಳಿಯುವುದರಲ್ಲಿ, ಮಧ್ಯ ಪ್ರದೇಶ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತುವುದರಲ್ಲಿ ಅನುಮಾನವಿಲ್ಲ.

4ನೇ ದಿನದಾಟಕ್ಕೆ ಮಳೆಯಿಂದಲೂ ಅಡಚಣೆ ಆಗಿತ್ತು. ಹೀಗಾಗಿ ಅಂತಿಮ ದಿನ 95 ಓವರ್‌ಗಳ ಆಟ ಆಡಲಾಗುವುದು. ಇಲ್ಲಿ ಪವಾಡ ನಡೆಯುವುದು ಅನುಮಾನ. ಮಧ್ಯ ಪ್ರದೇಶ ಬರೋಬ್ಬರಿ 14 ಗಂಟೆ, 2 ನಿಮಿಷಗಳ ಕಾಲ ಬ್ಯಾಟಿಂಗ್‌ ನಡೆಸಿತು. ಎದುರಿಸಿದ್ದು 177.2 ಓವರ್‌.

ಪಾಟೀದಾರ್‌ ಪರಾಕ್ರಮ
ಮಧ್ಯ ಪ್ರದೇಶ 3 ವಿಕೆಟಿಗೆ 368 ರನ್‌ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಆಗ ರಜತ್‌ ಪಾಟೀದಾರ್‌ 67ರಲ್ಲಿದ್ದರು. ಸೊಗಸಾದ ಬ್ಯಾಟಿಂಗ್‌ ಮುಂದುವರಿಸಿ 122ರ ತನಕ ಬೆಳೆದರು. 219 ಎಸೆತಗಳ ಈ ಆಟದಲ್ಲಿ 20 ಬೌಂಡರಿ ಸೇರಿತ್ತು. ಈ ರಣಜಿ ಸೀಸನ್‌ನಲ್ಲಿ ಅವರ ರನ್‌ ಗಳಿಕೆ 628ಕ್ಕೆ ಏರಿದೆ. ಸಫ‌ìರಾಜ್‌ ಖಾನ್‌ (937 ರನ್‌) ಬಳಿಕ ಇವರದೇ ಅತ್ಯಧಿಕ ಮೊತ್ತವಾಗಿದೆ.

Advertisement

ಬೌಲಿಂಗ್‌ನಲ್ಲಿ ಮಿಂಚಿದ ಸಾರಾಂಶ್‌ ಜೈನ್‌ ಬ್ಯಾಟಿಂಗ್‌ನಲ್ಲೂ ತಮ್ಮ ಪರಾಕ್ರಮ ಪ್ರದರ್ಶಿಸಿ 57 ರನ್‌ ಬಾರಿಸಿದರು (97 ಎಸೆತ, 7 ಬೌಂಡರಿ). ಇನ್ನಿಂಗ್ಸ್‌ ಮುನ್ನಡೆಯಲ್ಲಿ ಜೈನ್‌ ಪಾತ್ರವೂ ಮಹತ್ವದ್ದಾಗಿತ್ತು.

ಮುಂಬಯಿ ಪರ ಶಮ್ಸ್‌ ಮುಲಾನಿ 5 ವಿಕೆಟ್‌ ಉರುಳಿಸಿದರಾದರೂ ಇದಕ್ಕಾಗಿ 173 ರನ್‌ ಬಿಟ್ಟುಕೊಟ್ಟರು. ತುಷಾರ್‌ ದೇಶಪಾಂಡೆ ಕೂಡ “ಬೌಲಿಂಗ್‌ ಶತಕ’ ದಾಖಲಿಸಿದರು (116ಕ್ಕೆ 3 ವಿಕೆಟ್‌).

ದ್ವಿತೀಯ ಸರದಿಯಲ್ಲಿ ನಾಯಕ ಪೃಥ್ವಿ ಶಾ (44) ಮತ್ತು ಅವರ ಜತೆಗಾರ ಹಾರ್ದಿಕ ತಮೋರೆ (25) ಅವರನ್ನು ಮುಂಬಯಿ ಈಗಾಗಲೇ ಕಳೆದುಕೊಂಡಿದೆ. ಇಬ್ಬರೂ ಬಿರುಸಿನ ಆಟಕ್ಕೆ ಮುಂದಾಗಿದ್ದರು. 10.3 ಓವರ್‌ಗಳಲ್ಲಿ 63 ರನ್‌ ಪೇರಿಸಿದ್ದರು.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-374 ಮತ್ತು 2 ವಿಕೆಟಿಗೆ 113 (ಶಾ 44, ತಮೋರೆ 25, ಜಾಫ‌ರ್‌ ಬ್ಯಾಟಿಂಗ್‌ 30). ಮಧ್ಯ ಪ್ರದೇಶ-536 (ಯಶ್‌ ದುಬೆ 133, ಪಾಟೀದಾರ್‌ 122, ಶುಭಂ ಶರ್ಮ 116, ಸಾರಾಂಶ್‌ ಜೈನ್‌ 57, ಮುಲಾನಿ 173ಕ್ಕೆ 5, ದೇಶಪಾಂಡೆ 116ಕ್ಕೆ 3, ಅವಸ್ಥಿ 93ಕ್ಕೆ 2).

 

Advertisement

Udayavani is now on Telegram. Click here to join our channel and stay updated with the latest news.

Next