ಜೈಪುರ್:ಮಾಂಸಕ್ಕಾಗಿ ಗೋ ಮಾರಾಟ ನಿಷೇಧಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ಪರ, ವಿರೋಧದ ಚರ್ಚೆ ನಡೆಯುತ್ತಿರುವ ನಡುವೆ ರಾಜಸ್ಥಾನದ ಜೈಸಲ್ಮೇರ್ ನಿಂದ ತಮಿಳುನಾಡಿನ ಪಶುಸಂಗೋಪನಾ ಇಲಾಖಾ ಅಧಿಕಾರಿಗಳು ಪರವಾನಿಗೆ ಪಡೆದು ಟ್ರಕ್ ಗಳಲ್ಲಿ ಸಾಗಿಸುತ್ತಿದ್ದ ಗೋವುಗಳ ಮೇಲೆ ಸ್ವಯಂಘೋಷಿತ ಗೋ ರಕ್ಷಕರು ದಾಳಿ ನಡೆಸಿ, ಬೆಂಕಿ ಹಚ್ಚಿ ಗೋವುಗಳನ್ನೇ ಸಜೀವವಾಗಿ ಸುಟ್ಟ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಹೊರವಲಯದ ಬರ್ಮೆರ್ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.
ಏನಿದು ಗೋರಕ್ಷಕರ ಗೂಂಡಾಗಿರಿ:
ಕೇಂದ್ರ ಕೃಷಿ ಸಚಿವಾಲಯ ಆಯೋಜಿಸಿದ್ದ ದೇಸಿ ಗೋ ತಳಿ ರಕ್ಷಣೆ ಕುರಿತ ಕಾರ್ಯಕ್ರಮಕ್ಕಾಗಿ ತಮಿಳುನಾಡಿನ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ರಾಜಸ್ಥಾನದಿಂದ 80 ಗೋವುಗಳನ್ನು ಖರೀದಿಸಿದ್ದರು.
ಸುಮಾರು 5 ಟ್ರಕ್ ಗಳಲ್ಲಿ 80 ಗೋವುಗಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಭಾನುವಾರ ರಾತ್ರಿ ಬರ್ಮೆರ್ ಹೊರವಲಯದಲ್ಲಿ ಸುಮಾರು 50 ಮಂದಿ ಗೋ ರಕ್ಷಕರ ಗುಂಪು ಟ್ರಕ್ ಗಳನ್ನು ಅಡ್ಡಗಟ್ಟಿ, ಗೋವುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳ ವಿವರಣೆಯನ್ನು ಕೇಳಿಸಿಕೊಳ್ಳದೆ ಏಕಾಏಕಿ ಒಂದು ಟ್ರಕ್ ಗೆ ಬೆಂಕಿ ಹಚ್ಚಿದ್ದರು, ಇದರ ಪರಿಣಾಮ 10 ಗೋವುಗಳು, 3 ಕರುಗಳು ಜೀವಂತವಾಗಿ ದಹನವಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ನಾವು ಗೋ ರಕ್ಷಕರ ಗುಂಪಿಗೆ ಕೂಗಿ ಹೇಳಿದೆವು, ನೋಡಿ ಇದು ಅಧಿಕೃತ ಪರವಾನಿಗೆ ಪಡೆದು ಸಾಗಿಸುತ್ತಿರುವ ಗೋವುಗಳು. ದಾಖಲೆಗಳು ಇಲ್ಲಿವೆ ಎಂದು ಹೇಳಿದರೂ ಅವರು ಅದನ್ನು ತಿರಸ್ಕರಿಸಿದ್ದರು. ನಮ್ಮನ್ನು ತಳ್ಳಿ ಹಲ್ಲೆ ನಡೆಸಿದ್ದರು ಎಂದು ಟ್ರಕ್ ನ ಚಾಲಕ ಗೇವಾರ್ ರಾಮ್ ತಿಳಿಸಿದ್ದು, ದಾಳಿ ನಡೆಸಿದ್ದ ಗೋರಕ್ಷಕರು ಬಹುತೇಕರು ಮದ್ಯಪಾನ ಮಾಡಿರುವುದಾಗಿ ದೂರಿದ್ದಾರೆ.