ನವದೆಹಲಿ:ರಾಜಸ್ಥಾನದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದೆ. ತೆಲಂಗಾಣದ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಅರುಣಾಚಲದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸಿದ್ದು, ಈ ಹಿನ್ನೆಲೆಯಲ್ಲಿ ನೂತನ ಕೃಷಿ ಸುಧಾರಣಾ ಕಾಯ್ದೆಗೆ ಬೆಂಬಲ ಇದೆ ಎಂದು ಸೂಚಿಸಿದಂತಾಗಿದೆ ಎಂಬುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಬುಧವಾರ(ಡಿಸೆಂಬರ್ 09, 2020) ತಿಳಿಸಿದ್ದಾರೆ.
ಕೋವಿಡ್ ಸೋಂಕು, ಜಾಗತಿಕ ಆರ್ಥಿಕ ಸಂಕಷ್ಟ ಒಂದೆಡೆಯಾದರೆ, ವಿರೋಧಪಕ್ಷಗಳು ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸುವುದೇ ಮುಖ್ಯ ಅಜೆಂಡಾ ಮಾಡಿಕೊಂಡಿದ್ದಾರೆ. ಆದರೆ ದೇಶದ ಮೂಲೆ, ಮೂಲೆಯಲ್ಲೂ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತ ಜಾವ್ಡೇಕರ್ ಹೇಳಿದರು.
ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ಬಿಜೆಪಿ 21 ಜಿಲ್ಲಾ ಪರಿಷತ್ ಗಳಲ್ಲಿ 14ರಲ್ಲಿ ಗೆಲುವು ಸಾಧಿಸಿದೆ. ಚುನಾವಣಾ ಫಲಿತಾಂಶ ಬಿಜಪಿಯನ್ನು ಜನರು ಬೆಂಬಲಿಸಿದ್ದನ್ನು ಬಹಿರಂಗಪಡಿಸಿದೆ. ಗ್ರಾಮೀಣ ಪ್ರದೇಶದ ಜನರು ಕೂಡಾ ಬಿಜೆಪಿಗೆ ಭರ್ಜರಿ ಬಹುಮತ ನೀಡಿ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಟಿ20 ರ‍್ಯಾಂಕಿಂಗ್ ಪ್ರಕಟ: ಟಾಪ್ ಟೆನ್ ನಲ್ಲಿ ಸ್ಥಾನಪಡೆದ ಕೊಹ್ಲಿ, ರಾಹುಲ್
ಗೆಲುವಿನ ಮತದ ಪ್ರಮಾಣ ಕೂಡಾ ಹೆಚ್ಚಳವಾಗಿದೆ. ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಟೋಂಕಾ ಪ್ರದೇಶದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನಾಲ್ಕು ಸಚಿವರು ಇರುವ ಪ್ರದೇಶಗಳಲ್ಲಿಯೂ ಜಿಲ್ಲಾ ಪರಿಷತ್ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ. ಅಂದರೆ ದೇಶಾದ್ಯಂತ ಜನರು ಬಿಜೆಪಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಸೂಚನೆಯಾಗಿದೆ ಎಂದು ಜಾವ್ಡೇಕರ್ ಹೇಳಿದರು.