ಅಬುಧಾಬಿ: ಋತುರಾಜ್ ಗಾಯಕ್ವಾಡ್ ಅವರ ಅಮೋಘ ಶತಕಕ್ಕೆ ರಾಜಸ್ಥಾನ್ ರಾಯಲ್ಸ್ ಬರೆ ಎಳೆದಿದೆ. ಶನಿವಾರ ರಾತ್ರಿಯ ದೊಡ್ಡ ಮೊತ್ತದ ಮೇಲಾಟದಲ್ಲಿ ಸ್ಯಾಮ್ಸನ್ ಬಳಗ ಚೆನ್ನೈಯನ್ನು 7 ವಿಕೆಟ್‌ಗಳಿಂದ ಮಣಿಸಿ 5ನೇ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 4 ವಿಕೆಟಿಗೆ 189 ರನ್ ಪೇರಿಸಿದರೆ, ರಾಜಸ್ಥಾನ್ 17.3 ಓವರ್‌ಗಳಲ್ಲಿ 3 ವಿಕೆಟಿಗೆ 190 ರನ್ ಬಾರಿಸಿತು. ದೊಡ್ಡ ಮೊತ್ತದ ಚೇಸಿಂಗ್ ವೇಳೆ ಶಿವಂ ದುಬೆ ಅಜೇಯ 64 ರನ್ (42 ಎಸೆತ, 4 ಬೌಂಡರಿ, 4 ಸಿಕ್ಸರ್) ಬಾರಿಸಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನವಿತ್ತರು. ಜೈಸ್ವಾಲ್ 50, ಎವಿನ್ ಲೆವಿಸ್ 27, ಸ್ಯಾಮ್ಸನ್ 28 ರನ್ ಕೊಡುಗೆ ಸಲ್ಲಿಸಿದರು. ಮೊದಲ ವಿಕೆಟಿಗೆ 5.2 ಓವರ್‌ಗಳಿಂದ 77 ರನ್ ಪೇರಿಸಿದ ರಾಜಸ್ಥಾನ್ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ.
ಚೆನ್ನೈ ಪರ ಆರಂಭಕಾರ ಋತುರಾಜ್ ಗಾಯಕ್ವಾಡ್‌ಅಜೇಯ 101 ರನ್ ಬಾರಿಸಿ ಮೆರೆದರು. ಮುಸ್ತಫಿಜುರ್ ಅವರ ಇನ್ನಿಂಗ್ಸಿನ ಅಂತಿಮ ಎಸೆತವನ್ನು ಮಿಡ್ ವಿಕೆಟ್ ಮೂಲಕ ಸಿಕ್ಸರ್‌ಗೆ ಬಡಿದಟ್ಟಿದ ಗಾಯಕ್ವಾಡ್ ತಮ್ಮ ಮೊದಲ ಐಪಿಎಲ್ ಸೆಂಚುರಿಯನ್ನು ಪೂರ್ತಿಗೊಳಿಸಿದರು. ಇದು ಕೇವಲ 60 ಎಸೆತಗಳಲ್ಲಿ ಬಂತು. ಸಿಡಿಸಿದ್ದು 5 ಸಿಕ್ಸರ್ ಹಾಗೂ 9 ಫೋರ್.
ಇದನ್ನೂ ಓದಿ:ಪಿಂಕ್‌ಬಾಲ್ ಟೆಸ್ಟ್: ಕಾಂಗರೂಗಳ ಕಾಡಿದ ಜೂಲನ್, ಪೂಜಾ
ಇದು ಐಪಿಎಲ್‌ನಲ್ಲಿ ಚೆನ್ನೈ ಪರ ದಾಖಲಾದ 9ನೇ ಸೆಂಚುರಿ. ಅವರು ಚೆನ್ನೈ ಪರ ಶತಕ ಬಾರಿಸಿದ ಕಿರಿಯ ಆಟಗಾರನೂ ಹೌದು (24 ವರ್ಷ, 244 ದಿನ). ಇವರೊಂದಿಗೆ ರವೀಂದ್ರ ಜಡೇಜ 15 ಎಸೆತಗಳಿಂದ 32 ರನ್ ಹೊಡೆದು ಅಜೇಯರಾಗಿ ಉಳಿದರು (4 ಬೌಂಡರಿ, 1 ಸಿಕ್ಸರ್). ಗಾಯಕ್ವಾಡ್-ಜಡೇಜ ಕೇವಲ 22 ಎಸೆತಗಳಿಂದ 55 ರನ್ ಜತೆಯಾಟ ನಿಭಾಯಿಸಿದರು. ಕೊನೆಯ 5 ಓವರ್‌ಗಳಲ್ಲಿ 73 ರನ್ ಹರಿದು ಬಂತು.
ಸಂಕ್ಷಿಪ್ತ ಸ್ಕೋರ್: ಚೆನ್ನೈ-4 ವಿಕೆಟಿಗೆ 189 (ಗಾಯಕ್ವಾಡ್ ಅಜೇಯ 101, ಜಡೇಜ ಅಜೇಯ 32, ಡು ಪ್ಲೆಸಿಸ್ 25, ತೇವಟಿಯಾ 39ಕ್ಕೆ 3). ರಾಜಸ್ಥಾನ್-17.3 ಓವರ್‌ಗಳಲ್ಲಿ 3 ವಿಕೆಟಿಗೆ 190 (ದುಬೆ ಔಟಾಗದೆ 64, ಜೈಸ್ವಾಲ್ 50, ಸ್ಯಾಮ್ಸನ್ 28, ಲೆವಿಸ್ 27, ಠಾಕೂರ್ 30ಕ್ಕೆ 2).