Advertisement

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

12:19 AM Apr 23, 2024 | Team Udayavani |

ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 9 ವಿಕೆಟ್ ಗಳ ಅತ್ಯಮೋಘ ಜಯ ಸಾಧಿಸಿ ಯಶಸ್ವಿ ಗೆಲುವಿನ ಅಭಿಯಾನ ಮುಂದುವರಿಸಿದೆ.

Advertisement

ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ ಅಮೋಘ ಶತಕ ಸಿಡಿಸಿ ಅಜೇಯರಾಗಿ ಉಳಿದರು.60 ಎಸೆತಗಳಲ್ಲಿ 104 ರನ್ ಗಳಿಸಿದರು. 9ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್ ಸಿಡಿಸಿದರು. ಸಾಥ್ ನೀಡಿದ ಜೋಸ್ ಬಟ್ಲರ್ 35 ರನ್ ಗಳಿಸಿ ಔಟಾದರು. ಸಂಜು ಸ್ಯಾಮ್ಸನ್ ಔಟಾಗದೆ 38 ರನ್ ಗಳಿಸಿದರು. 18.4 ಓವರ್ ಗಳಲ್ಲಿ ಒಂದು ವಿಕೆಟ್ ಮಾತ್ರ ಕಳೆದುಕೊಂಡು 183 ರನ್ ಗಳಿಸಿ ಜಯ ಸಂಭ್ರಮಿಸಿತು.

ರಾಜಸ್ಥಾನ್ ಆಡಿದ 8 ಪಂದ್ಯಗಳಲ್ಲಿ 7 ಗೆಲುವು ಪಡೆದು ಅಂಕಪಟ್ಟಿಯಲ್ಲಿ ಆಗ್ರ ಸ್ಥಾನಿಯಾಗಿದೆ. ಮುಂಬೈ ಆಡಿದ 8 ನೇ ಪಂದ್ಯದಲ್ಲಿ 5 ನೇ ಸೋಲು ಅನುಭವಿಸಿತು.

ತಿಲಕ್‌ ವರ್ಮ ಮತ್ತು ಸಂದೀಪ್‌ ಶರ್ಮ ಕ್ರಮವಾಗಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ತಿಲಕ್‌ ಅರ್ಧ ಶತಕ ಬಾರಿಸಿ ಮುಂಬೈಯನ್ನು ಆಧರಿಸಿದರೆ, ಸಂದೀಪ್‌ ಶರ್ಮ 5 ವಿಕೆಟ್‌ ಉಡಾಯಿಸಿ ಘಾತಕವಾಗಿ ಪರಿಣಮಿಸಿದರು.

Advertisement

ತಿಲಕ್‌ ಗಳಿಕೆ 65 ರನ್‌ (45 ಎಸೆತ, 5 ಬೌಂಡರಿ, 3 ಸಿಕ್ಸರ್‌). ನೇಹಲ್‌ ವಧೇಲ 49 ರನ್‌ ಕೊಡುಗೆ ಸಲ್ಲಿಸಿದರು (24 ಎಸೆತ, 3 ಫೋರ್‌, 4 ಸಿಕ್ಸರ್‌). ಸಂದೀಪ್‌ ಶರ್ಮ ಸಾಧನೆ 18ಕ್ಕೆ 5 ವಿಕೆಟ್‌.

ಟ್ರೆಂಟ್‌ ಬೌಲ್ಟ್ 5ನೇ ಎಸೆತದಲ್ಲೇ ರೋಹಿತ್‌ ಶರ್ಮ (6) ವಿಕೆಟ್‌ ಉರುಳಿಸಿ ರಾಜಸ್ಥಾನಕ್ಕೆ ಮೇಲುಗೈ ಒದಗಿಸಿದರು. ಇದರೊಂದಿಗೆ ಬೌಲ್ಟ್ ಮೊದಲ ಓವರ್‌ನಲ್ಲೇ 26 ವಿಕೆಟ್‌ ಕೆಡವಿ ಐಪಿಎಲ್‌ ದಾಖಲೆ ಬರೆದರು. ಭುವನೇಶ್ವರ್‌ ಕುಮಾರ್‌ ದ್ವಿತೀಯ ಸ್ಥಾನಕ್ಕೆ ಇಳಿದರು.

ಸಂದೀಪ್‌ ಶರ್ಮ ಕೂಡ ಮೊದಲ ಓವರ್‌ನಲ್ಲೇ ಯಶಸ್ಸು ಸಾಧಿಸಿದರು. ಖಾತೆ ತೆರೆಯದ ಇಶಾನ್‌ ಕಿಶನ್‌ ಪೆವಿಲಿಯನ್‌ ಸೇರಿಕೊಂಡರು. ಇವರ ಕ್ಯಾಚ್‌ ಕೂಡ ಸ್ಯಾಮ್ಸನ್‌ ಪಾಲಾಯಿತು.

ಬೌಲ್ಟ್ಗೆ ಬೌಂಡರಿ ರುಚಿ ತೋರಿಸಿದ ಸೂರ್ಯಕುಮಾರ್‌ ಆಟ ಸಂದೀಪ್‌ ಶರ್ಮ ಮುಂದೆ ನಡೆಯಲಿಲ್ಲ. ತಮ್ಮ 2ನೇ ಓವರ್‌ನ ಮೊದಲ ಎಸೆತದಲ್ಲೇ ಅವರು ಈ ಬಿಗ್‌ ಹಿಟ್ಟಿಂಗ್‌ ಬ್ಯಾಟರ್‌ನ ವಿಕೆಟ್‌ ಉಡಾಯಿಸಿದರು.

ಸೂರ್ಯ ಗಳಿಕೆ 10 ರನ್‌ ಮಾತ್ರ. 20ಕ್ಕೆ 3 ವಿಕೆಟ್‌ ಕಳೆದುಕೊಂಡ ಮುಂಬೈ ತೀವ್ರ ಸಂಕಟಕ್ಕೆ ಸಿಲುಕಿತು. ಸ್ಕೋರ್‌ 50ರ ಗಡಿ ದಾಟಿದೊಡನೆ ನಬಿ (23) ಚಹಲ್‌ಗೆ ರಿಟರ್ನ್ ಕ್ಯಾಚ್‌ ನೀಡಿದರು.

ಈ ಸಂದಿಗ್ಧ ಸ್ಥಿತಿಯಲ್ಲಿ ಜತೆಗೂಡಿದ ತಿಲಕ್‌ ವರ್ಮ-ನೇಹಲ್‌ ವಧೇರ 99 ರನ್‌ ಜತೆಯಾಟದ ಮೂಲಕ ತಂಡವನ್ನು ಹೋರಾಟಕ್ಕೆ ಅಣಿಗೊಳಿಸಿದರು.

ಹಾರ್ದಿಕ್‌ ಪಾಂಡ್ಯ 100 ಪಂದ್ಯ

ಈ ಪಂದ್ಯದೊಂದಿಗೆ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ಪರ 100 ಐಪಿಎಲ್‌ ಪಂದ್ಯಗಳನ್ನಾಡಿದ ಹಿರಿಮೆಗೆ ಪಾತ್ರರಾದರು. ಅವರು ಎಂದೋ ಈ ಸಾಧನೆ ಮಾಡಬೇಕಿತ್ತು. ಆದರೆ 2 ವರ್ಷಗಳ ಕಾಲ ಗುಜರಾತ್‌ ಟೈಟಾನ್ಸ್‌ ತಂಡವನ್ನು ಪ್ರತಿನಿಧಿಸಿದ ಕಾರಣ ವಿಳಂಬಗೊಂಡಿತು.

ಪಾಂಡ್ಯ 100 ಪಂದ್ಯಗಳಲ್ಲಿ ಮುಂಬೈಯನ್ನು ಪ್ರತಿನಿಧಿಸಿದ 7ನೇ ಆಟಗಾರ. ಉಳಿದವರೆಂದರೆ ರೋಹಿತ್‌ ಶರ್ಮ (215), ಕೈರನ್‌ ಪೊಲಾರ್ಡ್‌ (211), ಹರ್ಭಜನ್‌ ಸಿಂಗ್‌ (158), ಲಸಿತ ಮಾಲಿಂಗ (139), ಅಂಬಾಟಿ ರಾಯುಡು (136) ಮತ್ತು ಜಸ್‌ಪ್ರೀತ್‌ ಬುಮ್ರಾ (131).

ಮುಂಬೈ ಪರ ಆಡಿದ ಈವರೆಗಿನ 99 ಪಂದ್ಯ ಗಳಲ್ಲಿ ಹಾರ್ದಿಕ್‌ ಪಾಂಡ್ಯ 37.86ರ ಸರಾಸರಿಯಲ್ಲಿ
1,617 ರನ್‌ ಪೇರಿಸಿದ್ದಾರೆ. ಸ್ಟ್ರೈಕ್‌ರೇಟ್‌ 133.49. ಉರುಳಿಸಿದ ವಿಕೆಟ್‌ಗಳ ಸಂಖ್ಯೆ 36. ಪ್ರಸಕ್ತ ಋತುವಿನಲ್ಲಿ ಮುಂಬೈ ಪರ 7 ಪಂದ್ಯಗಳನ್ನಾಡಿದ್ದು, 141 ರನ್‌ ಮತ್ತು 4 ವಿಕೆಟ್‌ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next