Advertisement

ರಾಜಸ್ಥಾನ್‌ ರಾಯಲ್ಸ್‌ ಎದುರಾಳಿ; ಕೆಕೆಆರ್‌ಗೆ ಡು ಆರ್‌ ಡೈ ಮ್ಯಾಚ್‌

09:56 PM May 01, 2022 | Team Udayavani |

ಮುಂಬಯಿ: ಕೋಲ್ಕತಾ ನೈಟ್‌ರೈಡರ್ ತೀವ್ರ ಸಂಕಟದಲ್ಲಿದೆ. ಸತತ 5 ಸೋಲುಗಳಿಂದ ದಿಕ್ಕೆಟ್ಟಿದೆ. ಇನ್ನೊಂದು ಸೋಲು ಎದುರಾದರೂ ನಿರ್ಗಮನ ಬಾಗಿಲಿಗೆ ಬಂದು ನಿಲ್ಲುವ ಸ್ಥಿತಿಗೆ ತಲುಪಲಿದೆ.

Advertisement

ಈ ಸಂಕಟದಿಂದ ಪಾರಾಗಬೇಕಾದರೆ ಶ್ರೇಯಸ್‌ ಅಯ್ಯರ್‌ ಬಳಗ ಸೋಮವಾರದ ಮುಖಾಮುಖಿಯಲ್ಲಿ ರಾಜಸ್ಥಾನ್‌ ತಂಡವನ್ನು ಮಣಿಸಲೇಬೇಕಿದೆ.

ರಾಜಸ್ಥಾನ್‌ ಡ್ಯಾಶಿಂಗ್‌ ಬ್ಯಾಟರ್‌ಗಳನ್ನೇ ಹೊಂದಿರುವ ತಂಡ. ಅದರಲ್ಲೂ ಓಪನರ್‌ ಜಾಸ್‌ ಬಟ್ಲರ್‌ ಅವರಂತೂ ಬೊಂಬಾಟ್‌ ಫಾರ್ಮ್ನಲ್ಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ 103 ರನ್‌ ಬಾರಿಸಿದ ಭೀತಿಯಿಂದ ಇನ್ನೂ ಕೆಕೆಆರ್‌ ಪಾರಾದಂತಿಲ್ಲ. ಅಷ್ಟೇ ಅಲ್ಲ, ಮುಂಬೈ ಎದುರಿನ ಶನಿವಾರದ ಪಂದ್ಯದಲ್ಲಿ ಬಟ್ಲರ್‌ ಅವರದು ಏಕಾಂಗಿ ಹೋರಾಟವಾಗಿತ್ತು (67). ಆದರೆ ಮುಂಬೈಗೆ ಮೊದಲ ಗೆಲುವನ್ನು ಬಿಟ್ಟುಕೊಟ್ಟ ಸಂಕಟ ರಾಜಸ್ಥಾನ್‌ ತಂಡದ್ದಾಗಿದೆ. ದ್ವಿತೀಯ ಸ್ಥಾನದಲ್ಲಿದ್ದರೂ ಸ್ಯಾಮ್ಸನ್‌ ಪಡೆಗೆ ಇದೊಂದು ಹಿನ್ನಡೆಯೇ ಆಗಿದೆ. ಕೆಕೆಆರ್‌ ಇದರ ಲಾಭವೆತ್ತಬೇಕಿದೆ.

ಫಾರ್ಮ್ ನಲ್ಲಿಲ್ಲದ ಕೋಲ್ಕತಾ
ಸಮಸ್ಯೆಯೆಂದರೆ, ಐಪಿಎಲ್‌ ಅರ್ಧ ಮುಗಿದರೂ ಕೆಕೆಆರ್‌ನ ಸ್ಟಾರ್‌ ಆಟಗಾರರೆಲ್ಲ ಇನ್ನೂ ಫಾರ್ಮ್ ಕಂಡುಕೊಳ್ಳದಿರುವುದು. ಬ್ಯಾಟಿಂಗ್‌ನಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ (290 ರನ್‌), ನಿತೀಶ್‌ ರಾಣಾ; ಬೌಲಿಂಗ್‌ನಲ್ಲಿ ಉಮೇಶ್‌ ಯಾದವ್‌ ಹೊರತುಪಡಿಸಿ ಉಳಿದವರೆಲ್ಲರದೂ ಶೋಚನೀಯ ವೈಫ‌ಲ್ಯ. ವೆಂಕಟೇಶ್‌ ಅಯ್ಯರ್‌, ವರುಣ್‌ ಚಕ್ರವರ್ತಿ, ಸುನೀಲ್‌ ನಾರಾಯಣ್‌, ಫಿಂಚ್‌, ಕಮಿನ್ಸ್‌, ರಸೆಲ್‌, ಬಿಲ್ಲಿಂಗ್ಸ್‌… ಎಲ್ಲರೂ ಟಿ20 ಸ್ಪೆಷಲಿಸ್ಟ್‌ಗಳೇ. ಆದರೆ ಯಾರೂ ತಂಡದ ನೆರವಿಗೆ ನಿಲ್ಲುತ್ತಿಲ್ಲ.

ರಾಜಸ್ಥಾನ್‌ ಸಾಲು ಸಾಲು ಸ್ಟಾರ್‌ ಕ್ರಿಕೆಟಿಗರನ್ನು ಹೊಂದಿರುವ ತಂಡ. ಬ್ಯಾಟಿಂಗ್‌, ಬೌಲಿಂಗ್‌ ಸಾಟಿಯಿಲ್ಲದ್ದು. ಆದರೆ ಮುಂಬೈ ವಿರುದ್ಧ ಅನುಭವಿಸಿದ ಸೋಲಿನ ಆಘಾತದಿಂದ ತುರ್ತಾಗಿ ಚೇತರಿಸಿಕೊಳ್ಳಬೇಕಿದೆ.

Advertisement

ಬಿಗ್‌ ಗೇಮ್‌ ಗೆದ್ದ ರಾಜಸ್ಥಾನ್‌
ತಂಡಗಳ ನಡುವೆ ಎ. 18ರಂದು “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ದೊಡ್ಡ ಮೊತ್ತದ ಮೇಲಾಟ ನಡೆದಿತ್ತು. ಇದು ಈ ಋತುವಿನ “ಬಿಗ್‌ ಗೇಮ್‌’ಗಳಲ್ಲಿ ಒಂದಾಗಿತ್ತು. ಈ ಹೋರಾಟದಲ್ಲಿ ರಾಜಸ್ಥಾನ್‌ 7 ರನ್ನುಗಳ ರೋಚಕ ಗೆಲುವು ಸಾಧಿಸಿತ್ತು.

ಜಾಸ್‌ ಬಟ್ಲರ್‌ ಅವರ ಅಮೋಘ 103 ರನ್‌ ಸಾಹಸದಿಂದ ರಾಜಸ್ಥಾನ್‌ 5 ವಿಕೆಟಿಗೆ 217 ರನ್‌ ರಾಶಿ ಹಾಕಿತು. ಕೆಕೆಆರ್‌ ಕೂಡ ದಿಟ್ಟ ರೀತಿಯಲ್ಲೇ ಜವಾಬು ನೀಡಿತು. ಆರನ್‌ ಫಿಂಚ್‌ (58), ನಾಯಕ ಶ್ರೇಯಸ್‌ ಅಯ್ಯರ್‌ (85) ಮುನ್ನುಗ್ಗಿ ಬಾರಿಸಲಾರಂಭಿಸಿದರು. ಆದರೆ ಕೆಳ ಹಂತದ ಆಟಗಾರರು ಕೈಕೊಟ್ಟರು. ಅಂತಿಮವಾಗಿ ಕೆಕೆಆರ್‌ 19.4 ಓವರ್‌ಗಳಲ್ಲಿ 210ಕ್ಕೆ ಆಲೌಟ್‌ ಆಯಿತು.

ಯಜುವೇಂದ್ರ ಚಹಲ್‌ ಎಸೆದ 17ನೇ ಓವರ್‌ ಈ ಪಂದ್ಯಕ್ಕೆ ದೊಡ್ಡ ತಿರುವು ಕೊಟ್ಟಿತು. ಇದರಲ್ಲಿ ಅವರು ಹ್ಯಾಟ್ರಿಕ್‌ ಸೇರಿದಂತೆ 4 ವಿಕೆಟ್‌ ಉಡಾಯಿಸಿದರು. ಈ ಆಘಾತದಿಂದ ಕೋಲ್ಕತಾ ಇನ್ನೂ ಚೇತರಿಸಿಕೊಂಡಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next