Advertisement

ಬೆಂಗಳೂರಿಗೆ ಇಂದು ಬಲಿಷ್ಠ ರಾಜಸ್ಥಾನ್‌ ಎದುರಾಳಿ

11:22 PM Apr 25, 2022 | Team Udayavani |

ಪುಣೆ: ಸನ್‌ರೈಸರ್ ಹೈದರಾಬಾದ್‌ ಎದುರಿನ ಕಳೆದ ಪಂದ್ಯದಲ್ಲಿ ತೀವ್ರ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿ ಅಭಿಮಾನಗಳ ವೈರಾಗ್ಯಕ್ಕೆ ಕಾರಣ ವಾದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಕ್ಕೆ ಮಂಗಳವಾರ ಅವಳಿ ಬಿಸಿ ತಟ್ಟುವ ಸಾಧ್ಯತೆ ಇದೆ. ಒಂದು, ರಾಜಸ್ಥಾನ್‌ ರಾಯಲ್ಸ್‌ ತಂಡದ್ದು; ಇನ್ನೊಂದು ಪ್ರಚಂಡ ಫಾರ್ಮ್ ನಲ್ಲಿರುವ ಜಾಸ್‌ ಬಟ್ಲರ್‌ ಅವರದು!

Advertisement

ಹರಕೆಯೇನೋ ಎಂಬಂತೆ, ವರ್ಷಕ್ಕೊಂದು ಪಂದ್ಯದಲ್ಲಿ ತೀರಾ ಕೆಳಮಟ್ಟದ ಬ್ಯಾಟಿಂಗ್‌ ರ್ತೋಡಿಸಿ ಹೀನಾಯವಾಗಿ ಸೋಲುವುದು ಆರ್‌ಸಿಬಿಯ ಸಂಪ್ರದಾಯವೇ ಆಗಿದೆ. ಈ ಸಂಕಟ ಕಳೆದ ಪಂದ್ಯದಲ್ಲಿ ಎದುರಾಗಿದೆ. ಇನ್ನು ಮಾಮೂಲು ಲಯಕ್ಕೆ ಮರಳಲಿದೆ ಎಂಬುದು ಅಭಿಮಾನಿಗಳ ನಂಬಿಕೆ.

ಆದರೆ ಎದುರಿರುವುದು ಹಾರ್ಡ್‌ ಹಿಟ್ಟಿಂಗ್‌ ಬ್ಯಾಟರ್‌ಗಳನ್ನೊಳಗೊಂಡ ರಾಜಸ್ಥಾನ್‌ ರಾಯಲ್ಸ್‌ ಎಂಬುದು ಆರ್‌ಸಿಬಿ ಪಾಲಿಗೊಂದು ಎಚ್ಚರಿಕೆಯ ಗಂಟೆ. ಸಮಾಧಾನವೆಂದರೆ, ಕಳೆದ ಐದೂ ಪಂದ್ಯಗಳಲ್ಲಿ ರಾಜಸ್ಥಾನ್‌ ತಂಡವನ್ನು ಮಣಿಸಿದ ಹೆಗ್ಗಳಿಕೆ ಬೆಂಗಳೂರು ತಂಡದ್ದು. ಇದಕ್ಕೆ ಈ ಋತುವಿನ ಮೊದಲ ಸುತ್ತಿನ ಪಂದ್ಯವೂ ಸೇರಿದೆ. ಆರ್‌ಸಿಬಿ ಇದೇ ಲಯವನ್ನು ಕಾಯ್ದುಕೊಂಡೀತೇ ಅಥವಾ ರಾಜಸ್ಥಾನ್‌ ಸೋಲಿನ ಸರಪಳಿಯನ್ನು ತುಂಡರೀಸೀತೇ ಎಂಬುದು ಮಂಗಳವಾರ ರಾತ್ರಿಯ ಕುತೂಹಲ.

ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಚಿಂತೆ
ಆರ್‌ಸಿಬಿಯ ದೊಡ್ಡ ಸಮಸ್ಯೆಯೆಂದರೆ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನದ್ದು. ನಾಯಕ ಫಾ ಡು ಪ್ಲೆಸಿಸ್‌ ಅವರಿಗೆ ಸೂಕ್ತ ಜೋಡಿಯೊಂದು ಇಲ್ಲದಿರುವುದು ಚಿಂತೆಗೆ ಕಾರಣವಾಗಿದೆ. ಎಡಗೈ ಬ್ಯಾಟರ್‌ ಅನುಜ್‌ ರಾವತ್‌ ಪ್ರತಿಭಾನ್ವಿತ ಆಟಗಾರನಾದರೂ ಸವಾಲು ನಿಭಾಯಿಸುವಲ್ಲಿ ವಿಫ‌ಲರಾಗುತ್ತಿದ್ದಾರೆ. ಒಂದು ಪಂದ್ಯದಲ್ಲೇನೋ ಹೊಡಿಬಡಿ ಆಟದ ಮೂಲಕ ಸಿಡಿದು ನಿಂತರೂ ಅನಂತರ ಇದೇ ಜೋಶ್‌ ತೋರಲು ಅವರಿಂದ ಸಾಧ್ಯವಾಗಿಲ್ಲ.

ವಿರಾಟ್‌ ಕೊಹ್ಲಿ ಅವರ ರನ್‌ ಬರಗಾಲವನ್ನು ಕ್ರಿಕೆಟ್‌ ಪಂಡಿತರಿಂದಲೂ ಅರ್ಥೈಸಿಕೊಳ್ಳಲಾಗುತ್ತಿಲ್ಲ. ಅವರ “ಗೋಲ್ಡನ್‌ ಡಕ್‌’ ಸಂಕಟ ಎಲ್ಲರಲ್ಲೂ ನೋವುಂಟುಮಾಡಿದೆ. ಕೊಹ್ಲಿ ಏಕಾಏಕಿ ಫಾರ್ಮ್ ಕಂಡುಕೊಂಡಾರೆಯೇ? ಪ್ರಶ್ನೆ ಸಹಜ.

Advertisement

ಉಳಿದಂತೆ ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌, ಶಬಾಜ್‌ ಅಹ್ಮದ್‌ ಆರ್‌ಸಿಬಿಯ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟರ್‌ಗಳಾಗಿದ್ದಾರೆ. ಇವರೆಲ್ಲರಲ್ಲೂ ಎದುರಾಳಿ ದಾಳಿಯನ್ನು ಪುಡಿಗೈಯುವ ಸಾಮರ್ಥ್ಯವಿದೆ. ಡು ಪ್ಲೆಸಿಸ್‌ ಆರಂಭದಲ್ಲಿ ಬಿರುಸಿನ ಆಟಕ್ಕಿಳಿದರೆ, ಮಧ್ಯಮ ಕ್ರಮಾಂಕದಲ್ಲಿ ಈ ನಾಲ್ವರು ಹೊಡಿಬಡಿ ಆಟಕ್ಕಿಳಿದರೆ ರಾಜಸ್ಥಾನ್‌ ಬೌಲರ್‌ಗಳ ಮೇಲೆ ಸವಾರಿ ಮಾಡುವುದು ಅಸಾಧ್ಯವೇನಲ್ಲ.

ರಾಜಸ್ಥಾನ್‌ ಬೌಲಿಂಗ್‌ ಘಾತಕ
ಆದರೂ ರಾಜಸ್ಥಾನ್‌ ಬೌಲಿಂಗ್‌ ಮೇಲೆ ಒಮ್ಮೆ ಸೂಕ್ಷ್ಮವಾಗಿ ಕಣ್ಣಾಡಿಸಿ ನೋಡಬೇಕಾದ ಅಗತ್ಯವಿದೆ. ಟ್ರೆಂಟ್‌ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಚಹಲ್‌-ಅಶ್ವಿ‌ನ್‌ ಇಲ್ಲಿನ ಘಾತಕ ಬೌಲರ್ ಆಗಿದ್ದಾರೆ. ಆದರೆ ಮೊನ್ನೆ 222 ರನ್‌ ಚೇಸ್‌ ಮಾಡುವ ವೇಳೆ ಡೆಲ್ಲಿ 8ಕ್ಕೆ 207ರ ತನಕ ಮುನ್ನುಗ್ಗಿ ಬಂದುದು ಆರ್‌ಸಿಬಿಗೆ ಮಾನಸಿಕ ಸ್ಥೈರ್ಯ ತುಂಬೀತು ಎಂಬುದೊಂದು ನಂಬಿಕೆ.

ಆದರೆ ಆಟ ಇರುವುದೇ ರಾಜಸ್ಥಾನ್‌ ಬ್ಯಾಟಿಂಗ್‌ ವೇಳೆ. ಇಂಗ್ಲೆಂಡಿನ ಬಿಗ್‌ ಹಿಟ್ಟರ್‌ ಜಾಸ್‌ ಬಟ್ಲರ್‌ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಶತಕದ ಮೇಲೆ ಶತಕ ಬಾರಿಸುತ್ತಿದ್ದಾರೆ. ಜತೆಗೆ ದೇವದತ್ತ ಪಡಿಕ್ಕಲ್‌, ನಾಯಕ ಸಂಜು ಸ್ಯಾಮ್ಸನ್‌, ಶ್ರಿಮನ್‌ ಹೆಟ್‌ಮೈರ್‌ ಅವರಂಥ ಡ್ಯಾಶಿಂಗ್‌ ಬ್ಯಾಟರ್ ಇದ್ದಾರೆ. ಆರ್‌ಸಿಬಿಯ ಅಗ್ರ ಕ್ರಮಾಂಕ ಎಷ್ಟು ದುರ್ಬಲವೋ, ರಾಜಸ್ಥಾನ್‌ ಟಾಪ್‌ ಆರ್ಡರ್‌ ಅಷ್ಟೇ ಬಲಿಷ್ಠ. ಜೋಶ್‌ ಜ್ಯಾಝಲ್‌ವುಡ್‌, ಹರ್ಷಲ್‌ ಪಟೇಲ್‌, ವನಿಂದು ಹಸರಂಗ, ಮೊಹಮ್ಮದ್‌ ಸಿರಾಜ್‌ ಅವರಿಂದ ಎದುರಾಳಿಗೆ ಕಡಿವಾಣ ಹಾಕಲು ಸಾಧ್ಯವಾದರೆ ಆರ್‌ಸಿಬಿಯ ಮೇಲುಗೈ ಬಗ್ಗೆ ಅನುಮಾನವಿಲ್ಲ. ಕನಿಷ್ಠಪಕ್ಷ ಬಟ್ಲರ್‌ ಅವರನ್ನು ಬೇಗನೇ ಪೆವಿಲಿಯನ್ನಿಗೆ ಕಳುಹಿಸಿದರೂ ಅರ್ಧ ಪಂದ್ಯ ಗೆದ್ದಂತೆ!

ಮೊದಲ ಸುತ್ತಿನ ಪಂದ್ಯ
ಎ. 5ರಂದು “ವಾಂಖೇಡೆ ಸ್ಟೇಡಿಯಂ’ನಲ್ಲಿ ಏರ್ಪಟ್ಟ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ 4 ವಿಕೆಟ್‌ಗಳಿಂದ ರಾಜಸ್ಥಾನ್‌ಗೆ ಸೋಲುಣಿಸಿತ್ತು. ಬಟ್ಲರ್‌ (70), ಹೆಟ್‌ಮೈರ್‌ (ಅಜೇಯ 42) ಮತ್ತು ಪಡಿಕ್ಕಲ್‌ (37) ಅವರ ಬ್ಯಾಟಿಂಗ್‌ ಸಾಹಸದ ಹೊರತಾಗಿಯೂ ರಾಜಸ್ಥಾನ್‌ ಗಳಿಸಿದ್ದು 3 ವಿಕೆಟಿಗೆ ಕೇವಲ 169 ರನ್‌. ಆರ್‌ಸಿಬಿ 55 ರನ್ನುಗಳ ಆರಂಭದ ಬಳಿಕ ದಿಢೀರ್‌ ಕುಸಿತ ಕಂಡಿತು. ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ (ಅಜೇಯ 44) ಮತ್ತು ಶಬಾಜ್‌ ಅಹ್ಮದ್‌ (ಅಜೇಯ 45) ಸೇರಿಕೊಂಡು 19.1 ಓವರ್‌ಗಳಲ್ಲಿ ತಂಡವನ್ನು ದಡ ಸೇರಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next