Advertisement

ರಾಜಸ್ಥಾನ್‌ ರಾಯಲ್ಸ್‌ಗೆ ಪರಾಗ್‌ ಸ್ಪರ್ಶ!

07:45 AM Apr 28, 2022 | Team Udayavani |

ಪುಣೆ: ರಾಜಸ್ಥಾನ್‌ ಈ ಕೂಟದಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ತಂಡ. ಬಟ್ಲರ್‌, ಸ್ಯಾಮ್ಸನ್‌, ಮಿಚೆಲ್‌, ಪಡಿಕ್ಕಲ್‌, ಜೈಸ್ವಾಲ್‌… ಹೀಗೆ ಸಾಗುತ್ತದೆ ಬ್ಯಾಟಿಂಗ್‌ ಲೈನ್‌ಅಪ್‌.

Advertisement

ಇವರಲ್ಲಿ ಜಾಸ್‌ ಬಟ್ಲರ್‌ ಅವರಂತೂ ಶತಕದ ಮೇಲೆ ಶತಕ ಬಾರಿಸುತ್ತ ಬಂದಿದ್ದಾರೆ. ಬಟ್ಲರ್‌ ಅವರನ್ನು ಬೇಗ ಔಟ್‌ ಮಾಡಿದರೆ ಅರ್ಧ ಪಂದ್ಯ ಗೆದ್ದಂತೆ ಎಂಬುದು ಎಲ್ಲ ಎದುರಾಳಿಗಳ ಲೆಕ್ಕಾಚಾರ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ಕೂಡ ಇದೇ ಯೋಜನೆಯಲ್ಲಿತ್ತು. ಇದರಲ್ಲಿ ಯಸ್ವಿಯೂ ಆಯಿತು. ಬಟ್ಲರ್‌ ಎಂಟಕ್ಕೆ ಢಮಾರ್‌! ಪಡಿಕ್ಕಲ್‌ 7 ರನ್ನಿಗೆ ಔಟ್‌. ಸ್ಯಾಮ್ಸನ್‌ 27, ಮಿಚೆಲ್‌ 16, ಹೆಟ್‌ಮೈರ್‌ ಬರೀ 3 ರನ್‌… ಡೆತ್‌ ಓವರ್‌ ಆರಂಭಗೊಳ್ಳುವ ಹೊತ್ತಿಗೆ ರಾಜಸ್ಥಾನ್‌ 102 ರನ್ನಿಗೆ 6 ವಿಕೆಟ್‌ ಉರುಳಿಸಿಕೊಂಡು ತೀವ್ರ ಸಂಕಟದಲ್ಲಿತ್ತು. ಆರ್‌ಸಿಬಿಗೆ ಆಗಲೇ ಮೇಲುಗೈ ಸಾಧಿಸಿದ ಖುಷಿ!

ಆದರೆ ಈ ಹಂತದಲ್ಲಿ ರಿಯಾನ್‌ ಪರಾಗ್‌ ರಾಜಸ್ಥಾನ್‌ ರಾಯಲ್ಸ್‌ ಪಾಲಿನ ಆಪತಾºಂಧವರಾಗಿ ಅವತರಿಸಿದರು. ಎಲ್ಲರೂ ಕೈಕೊಟ್ಟು ಹೋದ ಸಂದರ್ಭದಲ್ಲಿ ಏಕಾಂಗಿಯಾಗಿ ಹೋರಾಡಿ ಅಜೇಯ 56 ರನ್‌ (31 ಎಸೆತ, 3 ಫೋರ್‌, 4 ಸಿಕ್ಸರ್‌) ಸಿಡಿಸಿ ಮೊತ್ತವನ್ನು 144ರ ತನಕ ಏರಿಸುವಲ್ಲಿ ಯಶಸ್ವಿಯಾದರು. ಇದು ಐಪಿಎಲ್‌ನಲ್ಲಿ ಪರಾಗ್‌ ದಾಖಲಿಸಿದ ಕೇವಲ 2ನೇ ಅರ್ಧ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ.

144 ರನ್‌ ದೊಡ್ಡ ಮೊತ್ತವೇನೂ ಆಗಿರಲಿಲ್ಲ. ಆದರೂ ಇದನ್ನು ಉಳಿಸಿಕೊಳ್ಳುವ ಮೂಲಕ ರಾಜಸ್ಥಾನ್‌ 6ನೇ ಜಯದೊಂದಿಗೆ ಅಗ್ರಸ್ಥಾನಕ್ಕೆ ನೆಗೆಯಿತು. ಆರ್‌ಸಿಬಿ ಮತ್ತೂಮ್ಮೆ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ ಅಗ್ರ ನಾಲ್ಕರಿಂದ ಹೊರಬಿತ್ತು.

ಫೀಲ್ಡಿಂಗ್‌ನಲ್ಲೂ ಮಿಂಚು
ಆರ್‌ಸಿಬಿ ಬ್ಯಾಟಿಂಗ್‌ ವೇಳೆಯೂ ರಿಯಾನ್‌ ಪರಾಗ್‌ ಮಿಂಚಿದರು. ಅಮೋಘ ಕ್ಷೇತ್ರರಕ್ಷಣೆ ನಡೆಸಿದ ಅವರು 4 ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಒಂದೇ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಜತೆಗೆ 4 ಕ್ಯಾಚ್‌ ಪಡೆದ 3ನೇ ಹಾಗೂ ಭಾರತದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು.

Advertisement

2011ರಲ್ಲಿ ಕೆಕೆಆರ್‌ನ ಜಾಕ್‌ ಕ್ಯಾಲಿಸ್‌ ಡೆಕ್ಕನ್‌ ಚಾರ್ಜರ್ ವಿರುದ್ಧ ಇಂಥದೇ ಸಾಧನೆಗೈದಿದ್ದರು. 2012ರಲ್ಲಿ ಪಂಜಾಬ್‌ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್‌ ಚೆನ್ನೈ ವಿರುದ್ಧ ಈ ಸಾಧನೆಯನ್ನು ಪುನರಾವರ್ತಿಸಿದರು. ಆದರೆ ಗಿಲ್‌ಕ್ರಿಸ್ಟ್‌ ಕೀಪಿಂಗ್‌ ಮೂಲಕ ಈ ಕ್ಯಾಚ್‌ಗಳನ್ನು ಪಡೆದಿದ್ದರು. ಇವರಿಬ್ಬರ ಸಾಲಿಗೆ ಈಗ ರಿಯಾನ್‌ ಪರಾಗ್‌ ಸೇರ್ಪಡೆಗೊಂಡಿದ್ದಾರೆ.

140 ರನ್‌ ಉತ್ತಮ ಮೊತ್ತ
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ರಿಯಾನ್‌ ಪರಾಗ್‌, “ರಾಜಸ್ಥಾನ್‌ ರಾಯಲ್ಸ್‌ ಕಳೆದ 3 ವರ್ಷಗಳಿಂದಲೂ ನನ್ನ ಮೇಲೆ ನಂಬಿಕೆ ಇರಿಸಿದೆ. ಸವಾಲು ಸ್ವೀಕರಿಸುವುದು, ಒತ್ತಡ ನಿಭಾಯಿಸುವುದೆಂದರೆ ನನಗೆ ಇಷ್ಟ. ಈ ಟ್ರ್ಯಾಕ್‌ನಲ್ಲಿ 140 ರನ್‌ ಗಳಿಸಿದರೂ ಅದೊಂದು ಉತ್ತಮ ಸ್ಕೋರ್‌ ಆಗಲಿದೆ ಎಂದು ಟೈಮ್‌ಔಟ್‌ ವೇಳೆ ಕೋಚ್‌ ಕುಮಾರ ಸಂಗಕ್ಕರ ಹೇಳಿದರು. ಡೆತ್‌ ಓವರ್‌ನಲ್ಲಿ ಈ ಗುರಿಯನ್ನ ತಲುಪುವ ನಿಟ್ಟಿನಲ್ಲಿ ಶ್ರಮ ವಹಿಸಿದೆ. ಇದರಲ್ಲಿ ಯಶಸ್ಸು ಕಂಡಿತು. ಜತೆಗೆ ಪಂದ್ಯವನ್ನೂ ಗೆದ್ದೆವು’ ಎಂದರು.

ಇದನ್ನು ಬೆನ್ನಟ್ಟಿದ ಆರ್‌ಸಿಬಿ 19.3 ಓವರ್‌ಗಳಲ್ಲಿ 115ಕ್ಕೆ ಆಲೌಟ್‌ ಆಯಿತು. ಕೊಹ್ಲಿ, ಶಬಾಜ್‌, ಪ್ರಭುದೇಸಾಯಿ ಹಾಗೂ ಹರ್ಷಲ್‌ ನೀಡಿದ ಕ್ಯಾಚ್‌ಗಳನ್ನೆಲ್ಲ ಪರಾಗ್‌ ಯಶಸ್ವಿಯಾಗಿ ತಮ್ಮ ಬೊಗಸೆಗೆ ಸೇರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next