ಬೆಂಗಳೂರು: ಐಪಿಎಲ್‌ನ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಹಸಿರು ಬೆಳೆಸಿ ಅಭಿಯಾನದಿಂದ ಪ್ರೇರಣೆಗೊಂಡಿರುವ ರಾಜಸ್ಥಾನ ರಾಯಲ್ಸ್ ತಂಡವು ರಾಜಸ್ಥಾನ ರಾಜ್ಯದಾದ್ಯಂತ ಸುಮಾರು ಒಂದು ಮಿಲಿಯ ಸಸಿಗಳನ್ನು ನೆಡಲು ನಿರ್ಧರಿಸಿದೆ. ಈ ಮೂಲಕ ಪ್ರಕೃತಿಗೆ ಸಣ್ಣ ಕೊಡುಗೆ ನೀಡಲು ಬಯಸಿದೆ.
ಈ ಕ್ರಮವು ರಾಜಸ್ಥಾನ ಸರಕಾರ ಮತ್ತು ಇನ್ನಿತರ ಎನ್‌ಜಿಒಗಳ ನೆರವಿನೊಂದಿಗೆ ಈ ಅಭಿಯಾನವನ್ನು ಜಾರಿಗೊಳಿಸಲಾಗುವುದು ಎಂದು ರಾಜಸ್ಥಾನ್ ರಾಯಲ್ಸ್ ತಿಳಿಸಿದೆ.
ರಾಯಲ್ ಚಾಲೆಂಜರ್ ಬೆಂಗಳೂರು ಕೈಗೊಂಡಿರುವ ಹಸಿರು ಬೆಳೆಸಿ ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ರಾಯಲ್ಸ್ ತಂಡದ ಕಾರ್ಯಕಾರಿ ಚೇರ್ಮನ್ ರಂಜಿತ್ ಬರ್ತಕುರ್, “ಆರ್‌ಸಿಬಿ ಪಟ್ಟು ಹಿಡಿದು ಮಾಡಿರುವ ಹಸಿರು ಬೆಳಸಿ ಅಭಿಯಾನದಿಂದ ಪರಿಸರದಲ್ಲಿ ಬಹಳಷ್ಟು ಬದಲಾವಣೆಯಾಗಿರುವುವುದು ಸಾಮಾನ್ಯ ಗ್ರಹಿಕೆಗೂ ಸಿಗುತ್ತದೆ. ಈ ಪರಿಸರ ನಮ್ಮದು. ಪರಿಸರ ರಕ್ಷಿಸುವ ಸಾಮಾಜಿಕ ಹೊಣೆಗಾರಿಕೆ ನಮ್ಮದು’ ಎಂದರು.
“ವಾರ್ಷಿಕ ಗೋ ಗ್ರೀನ್ ಪಂದ್ಯಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆರಿಸಿದ್ದಕ್ಕಾಗಿ ಅಮೃತ್ ಥಾಮಸ್ ಮತ್ತು ಆರ್‌ಸಿಬಿಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ರಂಜಿತ್ ತಿಳಿಸಿದರು.
ಮಾಹಿತಿಯ ಪ್ರಕಾರ ಆರ್‌ಸಿಬಿ ಮತ್ತು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸಸಿಯನ್ನು ರಾಜಸ್ಥಾನ್ ತಂಡದ ನಾಯಕ ಅಜಿಂಕ್ಯ ರಹಾನೆ ಅವರಿಗೆ ನೀಡುವ ಮೂಲಕ ರಾಜಸ್ಥಾನ್ ತಂಡದ ಹಸಿರು ಬೆಳೆಸಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಜಸ್ಥಾನ ತಂಡವು ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದ ಪರಿಸರ ಸೇರಿದಂತೆ ರಾಜ್ಯದಾದ್ಯಂತ ವಿವಿಧ ಭಾಗಗಳಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಆರಂಭಿಸಲು ರವಿವಾರದ ಕಾರ್ಯಕ್ರಮ ನಾಂದಿಯಾಗಲಿದೆ ಎನ್ನಲಾಗಿದೆ.ಕಾರ್ ಪೂಲಿಂಗ್, ಮಳೆ ನೀರಿನ ಕೊಯ್ಲು, ತ್ಯಾಜ್ಯ ನಿರ್ವಹಣೆ ಕುರಿತಂತೆ ರಾಜ್ಯದ ಜನರಿಗೆ ಅರಿವನ್ನು ನೀಡುವ ಮೂಲಕ ಗೋಗ್ರೀನ್ ಅಭ್ಯಾಸ ಬೆಳೆಸುವತ್ತ ಕಾರ್ಯ ನಿರ್ವಹಿಸಲಿರುವುದಾಗಿ ರಾಜಸ್ಥಾನ ರಾಯಲ್ಸ್ ತಂಡ ಹೇಳಿಕೊಂಡಿದೆ.