ಬಾರ್ಮೆರ್: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮೊಹಮ್ಮದ್ ನಗರದ ಹೆಸರನ್ನು ಮಾಧವನ್ ನಗರ ಎಂದು ಬದಲಾಯಿಸಿದ ಬೆನ್ನಲ್ಲೇ ರಾಜಸ್ಥಾನದ ಬಾರ್ಮೆರ್ ಜಿಲ್ಲೆಯ ಮಿಯಾನ್ ಕಾ ಬಡ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲಾಗಿದೆ. ರೈಲು ನಿಲ್ದಾಣದ ಮರುನಾಮಕರಣ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರು ಮತ್ತು ರಾಜ್ಯದ ಸಚಿವರುಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ:ತಮಿಳಿನಲ್ಲಿ ಸ್ಯಾಂಡಲ್‌ವುಡ್ ಸಾಮರ್ಥ್ಯ: ಕೆಜಿಎಫ್- 2 ಆವೃತ್ತಿ ಮತ್ತೊಂದು ದಾಖಲೆ
ಅಧಿಕಾರಿಗಳ ಪ್ರಕಾರ, 2018ರಲ್ಲಿ ಸಮದಾರಿ ಪಂಚಾಯತ್ ಸಮಿತಿ ಮಿಯಾನ್ ಕಾ ಬಡಾ ಗ್ರಾಮದ ಹೆಸರನ್ನು ಮಹೇಶ್ ನಗರ್ ಎಂದು ಬದಲಾಯಿಸಿತ್ತು. ಬಳಿಕ ಆಡಳಿತಾರೂಢ ಬಿಜೆಪಿ ಸರ್ಕಾರ ರಾಜ್ಯದ ಕಂದಾಯ ದಾಖಲೆಗಳಲ್ಲಿಯೂ ಹೆಸರನ್ನು ಬದಲಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಸ್ವಾತಂತ್ರ್ಯದ ನಂತರವೂ ಈ ಗ್ರಾಮ ಮತ್ತು ರೈಲ್ವೆ ನಿಲ್ದಾಣವನ್ನು ಮಿಯಾನ್ ಕಾ ಬಡಾ ಎಂದೇ ಕರೆಯಲಾಗುತ್ತಿತ್ತು. ನಮ್ಮ ಗ್ರಾಮದ ಹೆಸರು ಮಿಯಾನ್ ಕಾ ಬಡಾ ಎಂದಾಗಿದ್ದರೂ ಕೂಡಾ ಇಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ವಾಸಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮದ ಹೆಸರನ್ನು ಬದಲಾಯಿಸಬೇಕೆಂದು ಬಹಳ ಕಾಲದಿಂದ ಗ್ರಾಮಸ್ಥರು ಬೇಡಿಕೆಯನ್ನಿಟ್ಟಿದ್ದರು.
ನಂತರ ಪಂಚಾಯತ್ ನಲ್ಲಿ ಮಹೇಶ್ ನಗರ್ ಎಂದು ಮರುನಾಮಕರಣ ಮಾಡಿ ನಿರ್ಣಯ ತೆಗೆದುಕೊಂಡಿದ್ದು, 2018ರಲ್ಲಿ ಮಿಯಾನ್ ಕಾ ಬಡಾ ಎಂಬ ಗ್ರಾಮದ ಹೆಸರನ್ನು ಮಹೇಶ್ ನಗರ ಎಂದು ರಾಜ್ಯ ಸರ್ಕಾರವೂ ಕೂಡಾ ಮರುನಾಮಕರಣ ಮಾಡಿ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಬದಲಾವಣೆ ಮಾಡಿತ್ತು. ಆದರೆ ರೈಲ್ವೆ ನಿಲ್ದಾಣದ ಹೆಸರನ್ನು ಮಾತ್ರ ಬದಲಾವಣೆ ಮಾಡಿರಲಿಲ್ಲವಾಗಿತ್ತು ಎಂದು ಬರ್ಮೆರ್ ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ಕುಸುಮಾ ಲತಾ ಚೌಹಾಣ್ ತಿಳಿಸಿದ್ದಾರೆ.
ಇದೀಗ ಮಿಯಾನ್ ಕಾ ಬಡಾ ರೈಲ್ವೆ ನಿಲ್ದಾಣದ ಹೆಸರನ್ನು ಮಹೇಶ್ ನಗರ್ ಹಾಲ್ಟ್ (ನಿಲುಗಡೆ) ಎಂದು ಬದಲಾಯಿಸಲಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.