ರಾಜಸ್ಥಾನ: ರಾಜಸ್ಥಾನ ಕ್ಯಾಬಿನೆಟ್ ಸಚಿವರಿಗೆ ಕೊಲೆ ಬೆದರಿಕೆಯೊಂದು ಬಂದಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜಸ್ಥಾನದ ಕ್ಯಾಬಿನೆಟ್ ಸಚಿವ ಬಾಬುಲಾಲ್ ಖರಾಡಿ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮೂರು ದಿನಗಳ ಹಿಂದೆ ಅವರ ಇನ್‌ಸ್ಟಾಗ್ರಾಮ್ ಖಾತೆಯ ಕಾಮೆಂಟ್‌ಗಳ ವಿಭಾಗದಲ್ಲಿ ಅವರಿಗೆ ಬೆದರಿಕೆ ಬಂದಿತ್ತು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಾಬುಲಾಲ್ ಅವರ ಇನ್‌ಸ್ಟಾಗ್ರಾಮ್ ಖಾತೆಯ ಕಾಮೆಂಟ್ ಗಳಲ್ಲಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದು ಅದರಲ್ಲಿ ದುಷ್ಕರ್ಮಿಯೊಬ್ಬ ಹೀಗೆ ಬರೆದುಕೊಂಡಿದ್ದಾನೆ, ‘ರಾಜಕೀಯ ಮುಂದುವರಿಯುತ್ತದೆ… ಆದರೆ ಮೊದಲು ನಿಮ್ಮ ನಿಮ್ಮ ಜೀವನ ಕೊನೆಗೊಳ್ಳುತ್ತದೆ. ಲೋಕಸಭಾ ಚುನಾವಣೆಗೂ ಮೊದಲು ನಿಮ್ಮ ಜೀವನದ ಫಲಿತಾಂಶ ಹೊರಬೀಳಲಿದೆ ಚುನಾವಣಾ ಫಲಿತಾಂಶ ಮತ್ತೆ ಬರಲಿದೆ ಎಂದು ಬರೆದುಕೊಂಡಿದ್ದಾನೆ. ಅಷ್ಟು ಮಾತ್ರವಲ್ಲದೆ ನೀವು ಆದಿವಾಸಿಗಳನ್ನು ಬಲವಂತವಾಗಿ ಹಿಂದೂ ಧರ್ಮಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದೀರಿ, ಇದು ಸರಿಯಲ್ಲ ಎಂದು ಕಿಡಿಗೇಡಿ ಕಾಮೆಂಟ್ ನಲ್ಲಿ ಬರೆದಿದ್ದಾನೆ.
ಅಪರಿಚಿತ ವ್ಯಕ್ತಿ ಬೆದರಿಕೆಯ ಕಾಮೆಂಟ್ ಹಾಕಿರುವುದು ಬಾಬುಲಾಲ್ ಅವರ ಮಗನ ಗಮನಕ್ಕೆ ಬಂದಿದ್ದು ಕೂಡಲೇ ಈ ವಿಚಾರ ತಂದೆಗೆ ತಿಳಿಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಸಚಿವರಿಗೆ ಬೆದರಿಕೆಯ ಕಾಮೆಂಟ್ ಪೋಸ್ಟ್ ಮಾಡಲು ಬಳಸಿದ ಐಪಿ ವಿಳಾಸವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದು ಕೂಡಲೇ ವ್ಯಕ್ತಿಯನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು