Advertisement

ಗೋವು ಕಳ್ಳನೆಂದು ಅನುಮಾನಿಸಿ ಹತ್ಯೆ

06:00 AM Jul 22, 2018 | Team Udayavani |

ಜೈಪುರ: ಗೋವುಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆಂದು ಅನುಮಾನಿಸಿದ ಉದ್ರಿಕ್ತ ವ್ಯಕ್ತಿಗಳ ಗುಂಪೊಂದು ರಾಜಸ್ಥಾನದ ಅಲ್ವಾರ್‌ನಲ್ಲಿ ಅಕ್ಬರ್‌ ಖಾನ್‌ (28) ಎಂಬಾತನನ್ನು ಥಳಿಸಿ ಹತ್ಯೆಗೈದಿದೆ. ದೇಶದಲ್ಲೆಡೆ ಹರಡಿರುವ ಥಳಿತ ಹತ್ಯೆಗಳ ತಡೆಗೆ ಶೀಘ್ರ ಕಾನೂನು ರೂಪಿಸಬೇಕು ಹಾಗೂ ಇಂಥ ಘಟನೆಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸುಪ್ರೀಂ ಕೋರ್ಟ್‌ ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯ ಬೆನ್ನಲ್ಲೇ ಇಂಥ ಘಟನೆ ಮರುಕಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಅಕ್ಬರ್‌ ಖಾನ್‌ ಹಾಗೂ ಮತ್ತೂಬ್ಬ ಅಲ್ವಾರ್‌ ಜಿಲ್ಲೆಯ ರಾಮಗಢ ಪೊಲೀಸ್‌ ಠಾಣಾ ವ್ಯಾಪ್ತಿಯ ಲಾಲಾವಂಡಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ, ಎರಡು ಎತ್ತುಗಳೊಂದಿಗೆ ಸಾಗುತ್ತಿದ್ದರು. ಇದನ್ನು ಅನುಮಾನಿಸಿದ ಉದ್ರಿಕ್ತ ಜನರ ಗುಂಪೊಂದು ಅವರ ಮೇಲೆ ದಾಳಿ ನಡೆಸಿತು. ಈ ವೇಳೆ, ಖಾನ್‌ ಜತೆಗಿದ್ದ ವ್ಯಕ್ತಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ. ಆದರೆ, ಖಾನ್‌ ಮಾತ್ರ ಜನರ ಗುಂಪಿಗೆ ಸಿಕ್ಕಿಹಾಕಿಕೊಂಡ ಎಂದು  ಪೊಲೀಸರು ತಿಳಿಸಿದ್ದಾರೆ. ವಿಚಾರ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ತೀವ್ರ ಗಾಯಗೊಂಡಿದ್ದ ಖಾನ್‌ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದ ಎಂದು ಶರ್ಮಾ ಹೇಳಿದ್ದಾರೆ. 

ಗೋಸಾಗಾಟದ ಆರೋಪದಲ್ಲಿ ಥಳಿಸಿ ಕೊಂದಿರುವ ಘಟನೆ ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.  
 ವಸುಂಧರಾ ರಾಜೇ, ರಾಜಸ್ಥಾನ ಸಿಎಂ

ಈ ಪ್ರಕರಣ, ಚುನಾವಣೆ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ಹೆಸರಿಗೆ ಮಸಿ ಬಳಿಯಲು ಮಾಡಿರುವ ವ್ಯವಸ್ಥಿತ ಷಡ್ಯಂತ್ರ. 
ರಾಮ್‌ ಮೇಘವಾಲ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next