ಜೈಪುರ: ರಾಜಸ್ಥಾನದಲ್ಲಿ ಸರಕಾರ ಬದಲಾಗುತ್ತಿದ್ದಂತೆಯೇ ಶಾಲಾ ಪಠ್ಯಪುಸ್ತಕಗಳೂ ಬಲದಿಂದ ಎಡಕ್ಕೆ ಬದಲಾಗುತ್ತಿವೆ. ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಕುರಿತ ಪಠ್ಯ ಬದಲಿಸಲು ಹೊರಟ ಕಾಂಗ್ರೆಸ್ ಸರಕಾರಕ್ಕೆ ಭಾರಿ ವಿರೋಧ ವ್ಯಕ್ತ ವಾಗಿದ್ದು, ಈಗ ಜೌಹರ್ ಕುರಿತ ವಿವರಗಳನ್ನೂ ಬದಲಿಸಲು ಹೊರಟಿದೆ. ಜೌಹರ್ ಪದ ತೆಗೆದು, ಸತಿ ಪದ್ಧತಿ ಎಂಬ ಶಬ್ದ ಬಳಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ ರಜಪೂತರ ಪ್ರಕಾರ ಜೌಹರ್ ಮತ್ತು ಸತಿ ಪದ್ಧತಿ ಭಿನ್ನವಾಗಿದ್ದು, ಜೌಹರ್‌ನಲ್ಲಿ ಪತಿಯ ವಿರೋಧಿಯ ಕೈಗೆ ಸಿಕ್ಕಿಬೀಳುವುದರಿಂದ ತಪ್ಪಿಸಿಕೊಳ್ಳಲು ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂಬ ವ್ಯಾಖ್ಯಾನವಿದೆ. ಇದಕ್ಕೆ ಪದ್ಮಿನಿ ರಾಣಿಯ ಕಥೆಯನ್ನು ರಜಪೂತರು ಉದಾಹರಣೆಯಾಗಿ ನೀಡು ತ್ತಾರೆ. ಹೀಗಾಗಿ ಇದು ವಿವಾದಕ್ಕೆ ಕಾರಣ ವಾಗಿದೆ. ಇನ್ನು ಸಾವರ್ಕರ್ ಪಠ್ಯದಲ್ಲಿ ವೀರ ಎಂಬ ಪದ ತೆಗೆದುಹಾಕಲಾಗಿದ್ದು, ಗಾಂಧಿ ಹತ್ಯೆಗೆ ಸಾವರ್ಕರ್ ಯೋಜನೆ ರೂಪಿಸಿದ್ದರು. 1910ರಲ್ಲಿ ಕ್ರಾಂತಿಕಾರಿ ಚಟುವಟಿಕೆ ನಡೆಸಿ ಬಂಧಿತರಾಗಿದ್ದ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಬರೆದಿದ್ದರು ಎಂದೂ ವಿವರಿಸಲಾಗಿದೆ. ಇದೇ ವೇಳೆ, ಹಿಂದಿನ ಬಿಜೆಪಿ ಸರಕಾರವು ಪಠ್ಯದಲ್ಲಿ ಸೇರಿಸಿದ್ದ “ನೋಟು ಅಮಾನ್ಯ’ದ ವಿಚಾರವನ್ನೂ ಕಾಂಗ್ರೆಸ್ ಸರಕಾರ ಪಠ್ಯದಿಂದ ಕಿತ್ತುಹಾಕಿದೆ.