Advertisement

ರೆಸಾರ್ಟ್‌ಗೆ ರಾಜಸ್ಥಾನ ರಾಜಕೀಯ: ಗೆಹ್ಲೋಟ್‌ ಪರ ಶಾಸಕರು ಐಷಾರಾಮಿ ಹೊಟೇಲ್‌ಗೆ

02:32 AM Jul 14, 2020 | Hari Prasad |

ಜೈಪುರ: ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಡುವಣ ತಿಕ್ಕಾಟ ಸೋಮವಾರ ಸಂಜೆಯ ಹೊತ್ತಿಗೆ ನಾನಾ ಸ್ವರೂಪ ಪಡೆದುಕೊಂಡಿದೆ.

Advertisement

ದಿನಾಂತ್ಯದ ಹೊತ್ತಿಗೆ ಸಿಎಂ ಅಶೋಕ್‌ ಗೆಹ್ಲೋಟ್‌ ಕುಟುಂಬಕ್ಕೆ ಹಗರಣದ ಛಾಯೆಯೂ ಆವರಿಸಿದೆ.

ಇವೆಲ್ಲದರ ನಡುವೆ ಸರಕಾರವನ್ನು ಉಳಿಸುವ ಅನಿವಾರ್ಯಕ್ಕೆ ಒಳಗಾಗಿರುವ ಅಶೋಕ್‌ ಗೆಹ್ಲೋಟ್‌ ತನ್ನ
ಬೆಂಬಲಿಗ ಶಾಸಕರನ್ನು ಐಷಾರಾಮಿ ಹೊಟೇಲಿಗೆ ಕಳುಹಿಸಿದ್ದಾರೆ.

ಮತ್ತೊಂದೆಡೆ ಜೈಪುರಕ್ಕೆ ಸಂಧಾನಕಾರರಾಗಿ ಆಗಮಿಸಿರುವ ರಣದೀಪ್‌ ಸುರ್ಜೇವಾಲ, ಅಜಯ್‌ ಮಾಕೆನ್‌, ಗೆಹ್ಲೋಟ್‌-ಪೈಲಟ್‌ ನಡುವಣ ಭಿನ್ನಮತಕ್ಕೆ ತೇಪೆ ಹಾಕುವ ಪ್ರಯತ್ನದಲ್ಲಿದ್ದಾರೆ.

ಇನ್ನೊಂದೆಡೆ ದೇಶದ ನಾನಾ ಕಡೆಗಳಲ್ಲಿ ಸೋಮವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅದರಲ್ಲಿ ರಾಜಸ್ಥಾನದ ಇಬ್ಬರು ಶಾಸಕರು ಮತ್ತು ಸಿಎಂ ಗೆಹ್ಲೋಟ್‌ ಅವರ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಇದು ಗೆಹ್ಲೋಟ್‌ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.


ಶಾಸಕಾಂಗ ಸಭೆ, ಹೊಟೇಲ್‌ ವಾಸ್ತವ್ಯ
ಸೋಮವಾರ ಮಧ್ಯಾಹ್ನ ಸಿಎಂ ಗೆಹ್ಲೋಟ್‌ ನಿವಾಸದಲ್ಲಿ ನಡೆದ ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗಿದ್ದ ಎಲ್ಲ ಶಾಸಕರು ಗೆಹ್ಲೋಟ್‌ ಅವರಿಗೆ ಬೆಂಬಲ ನೀಡುವ ನಿರ್ಣಯ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಅಶೋಕ್‌ ಗೆಹ್ಲೋಟ್‌ಗೆ 109 ಶಾಸಕರು ಬೆಂಬಲ ಸೂಚಿಸಿರುವುದಾಗಿ ಕಾಂಗ್ರೆಸ್‌ ತಿಳಿಸಿದೆ.

Advertisement

ಸಚಿನ್‌ ಪೈಲಟ್‌ ಆಪ್ತವಲಯದಲ್ಲಿದ್ದ ಜೆ.ಆರ್‌. ಖಟಾನಾ, ಹರೀಶ್‌ ಮೀನಾ, ರಮೇಶ್‌ ಮೀನಾ, ವಿಶ್ವೇಂದ್ರ ಸಿಂಗ್‌, ವೇದಪ್ರಕಾಶ್‌, ಮುಕೇಶ್‌ ಭಕಾರ್‌, ರಾಮನಿವಾಸ್‌ ಗವಾರಿಯಾ ಗೈರಾಗಿದ್ದರಾದರೂ ಶಾಸಕಾಂಗ ಸಭೆಯ ಅನಂತರ ಕಾಂಗ್ರೆಸ್‌ ನಾಯಕ ಸುರ್ಜೇವಾಲ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿದ್ದರು. ಶಾಸಕಾಂಗ ಸಭೆಯ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ಗೆಹ್ಲೋಟ್‌ ಬೆಂಬಲಕ್ಕೆ ನಿಂತಿರುವ ಎಲ್ಲ ಶಾಸಕರನ್ನು ಜೈಪುರದ ಹೊಟೇಲ್‌ ಫೇರ್‌ಮೌಂಟ್‌ಗೆ ರವಾನಿಸಿದೆ. ಆದರೆ ಶಾಸಕಾಂಗ ಸಭೆಯಲ್ಲಿ 109 ಶಾಸಕರು ಹಾಜರಿರಲಿಲ್ಲ ಎಂದು ಸಚಿನ್‌ ಪೈಲಟ್‌ ಬಣ ತಿಳಿಸಿದೆ.

4 ಸಚಿವ ಸ್ಥಾನಗಳಿಗೆ ಬೇಡಿಕೆ
ಬೆಂಬಲಿಗ ಶಾಸಕರೊಂದಿಗೆ ದಿಲ್ಲಿಯಲ್ಲಿ ಬೀಡುಬಿಟ್ಟಿರುವ ಸಚಿನ್‌ ಪೈಲಟ್‌, ತನ್ನ ಆಪ್ತ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಅಶೋಕ್‌ ಗೆಹ್ಲೋಟ್‌ ಅವರಲ್ಲಿ ಬೇಡಿಕೆ ಮುಂದಿರಿಸಿದ್ದಾರೆ. ಇದಲ್ಲದೆ ಗೃಹ ಮತ್ತು ಹಣಕಾಸು ಖಾತೆಗಳನ್ನು ತನ್ನವರಿಗೇ ನೀಡಬೇಕೆಂಬ ಮತ್ತೆರಡು ಬೇಡಿಕೆಗಳನ್ನು ಮಂಡಿಸಿದ್ದಾರೆ. ಅಲ್ಲದೆ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನದಲ್ಲಿ ತನ್ನನ್ನೇ ಮುಂದುವರಿಸುವಂತೆ ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next