ನವದೆಹಲಿ: ಗರ್ಭಿಣಿಯೊಬ್ಬಳ ಸಾವಿನ ಆರೋಪದ ಹಿನ್ನೆಲೆಯಲ್ಲಿ ಕಿರುಕುಳ ನೀಡಿರುವುದಕ್ಕೆ ಮನನೊಂದು ರಾಜಸ್ಥಾನದ ದೌಸಾದಲ್ಲಿನ ವೈದ್ಯೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಜಿತೇಂದ್ರ ಗೋಥ್ವಾಲ್ ಎಂಬಾತನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕಾಸರಗೋಡು: ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿ ಕೊಂದ ಯುವಕನ ಬಂಧನ!
ಗರ್ಭಿಣಿ ಸಾವಿಗೆ ಡಾ.ಅರ್ಚನಾ ಶರ್ಮಾ ಕಾರಣ ಎಂದು ಆರೋಪಿಸಿ ಭಾರೀ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಗೆ ಗೋಥ್ವಾಲ್ ಕುಮ್ಮಕ್ಕು ನೀಡಿರುವುದಾಗಿ ವರದಿ ವಿವರಿಸಿದೆ. ಮಂಗಳವಾರ ರಾಜಸ್ಥಾನದ ದೌಸಾದಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಯಾದ ನಂತರ ಮಹಿಳೆ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ನಡೆದಿತ್ತು.
ಮಹಿಳೆಯ ಕುಟುಂಬ ಸದಸ್ಯರು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಡಾ. ಅರ್ಚನಾ ಶರ್ಮಾ ಹಾಗೂ ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.
ಡಾ.ಅರ್ಚನಾ ಅವರ ಸೂಸೈಡ್ ನೋಟ್ ನಲ್ಲಿ, “ವೈದ್ಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ನಾನು ನನ್ನ ಮಕ್ಕಳು, ಪತಿಯನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಸಾವಿನ ನಂತರವೂ ಕಿರುಕುಳ ಕೊಡಬೇಡಿ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾರನ್ನೂ ಕೊಲ್ಲಲಿಲ್ಲ. ಸಂದರ್ಭವನ್ನು ಅರ್ಥ ಮಾಡಿಕೊಳ್ಳಿ. ನನ್ನ ಸಾವಿನ ಮೂಲಕವಾದರು ಮುಗ್ದತೆಯನ್ನು ಸಾಬೀತುಪಡಿಸಲಿ. ದಯವಿಟ್ಟು ಅಮಾಯಕ ವೈದ್ಯರಿಗೆ ಕಿರುಕುಳ ನೀಡಬೇಡಿ” ಎಂದು ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.