ರಾಜಸ್ಥಾನ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿದ್ದು ಇದರ ಮುಂದಿನ ಭಾಗವಾಗಿ ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ಔಪಚಾರಿಕವಾಗಿ ಆಯ್ಕೆ ಮಾಡಲು ಹೊಸದಾಗಿ ಚುನಾಯಿತ ಶಾಸಕರು ಇಂದು (ಮಂಗಳವಾರ) ಜೈಪುರದಲ್ಲಿ ಸಭೆ ಸೇರಲಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಹ ವೀಕ್ಷಕರಾದ ಸರೋಜ್ ಪಾಂಡೆ ಮತ್ತು ವಿನೋದ್ ತಾವ್ಡೆ ಅವರು ಪಾಲ್ಗೊಳ್ಳಲಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿಯನ್ನಾಗಿ ಡಾ. ಮೋಹನ್ ಯಾದವ್ ಅವರನ್ನು ಸೋಮವಾರ ಬಿಜೆಪಿ ಆಯ್ಕೆ ಮಾಡಿತ್ತು ಅದರಂತೆ ಇಂದು ರಾಜಸ್ಥಾನದ ಬಿಜೆಪಿ ಅಭ್ಯರ್ಥಿಗಳ ಸಭೆ ಕರೆದಿದ್ದು ಇಂದು ಸಂಜೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿದ್ದಾರೆ.
ರಾಜ್ಯಾಧ್ಯಕ್ಷ ಸಿ.ಪಿ.ಜೋಶಿ, ಉಸ್ತುವಾರಿ ಅರುಣ್ ಸಿಂಗ್ ಸಭೆಯ ಸಿದ್ಧತೆಗಳ ಮೇಲುಸ್ತುವಾರಿ ವಹಿಸಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಶಾಸಕರ ನೋಂದಣಿ ಪ್ರಕ್ರಿಯೆ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದ್ದು, ಮಂಗಳವಾರ ಸಂಜೆ 4 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಎಲ್ಲಾ ಬಿಜೆಪಿ ಶಾಸಕರು ಸಭೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ದಲಿತ ನಾಯಕರೊಬ್ಬರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎನ್ನಲಾಗಿದ್ದು ಈ ಕುರಿತು ಪ್ರತಿಕ್ರಿಯಿಸಿದ ಅರುಣ್ ಸಿಂಗ್, ‘ಎಲ್ಲವೂ ಸಂಜೆ ಸಭೆಯಲ್ಲಿ ಬಹಿರಂಗಗೊಳ್ಳಲಿದೆ’ ಎಂದು ಹೇಳಿದ್ದಾರೆ.
ಸಿಎಂ ಸ್ಥಾನದ ಆಕಾಂಕ್ಷಿಗಳಲ್ಲಿ ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅಶ್ವಿನಿ ವೈಷ್ಣವ್ ಹೆಸರು ಪಟ್ಟಿಯಲ್ಲಿದೆ, ಅಂತಿಮವಾಗಿ ಹೈ ಕಮಾಂಡ್ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: Delhi Capitals ತಂಡಕ್ಕೆ ನಾಯಕನಾಗಿ ಕಮ್ ಬ್ಯಾಕ್ ಮಾಡಲಿದ್ದಾರೆ ರಿಷಭ್ ಪಂತ್