Advertisement
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಾಮಾಜಿಕ ಹೋರಾಟಗಾರ ನಾನು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಅಸ್ಮಿತೆ ಎಂಬ ಮೂಲ ಆಶಯವನ್ನು ಜನಮನದಲ್ಲಿ ಬಿತ್ತುವ ಕೆಲಸ ಮಾಡುತ್ತೇನೆ ಎಂದರು.
Related Articles
Advertisement
ಕನ್ನಡ ನಾಡು ಕೂಡ ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿ ಗಲಾಟೆ, ಅಂತರ ರಾಜ್ಯ ನೆಲ-ಜಲ ವಿವಾದಗಳು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಸಮಸ್ಯೆ, ಗಡಿ ಭಾಗದ ಕನ್ನಡ ಶಾಲೆಗಳ ದುಸ್ಥಿತಿ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ನಾಡಿನ ತುಂಬ ಎದ್ದು ಕಾಣುತ್ತಿವೆ. ಇಂಥ ಸಮಸ್ಯೆಗಳ ಪರಿಹಾರಕ್ಕೆ ಆಳುವ ಸರ್ಕಾರಗಳನ್ನು ಬಡಿದೆಬ್ಬಿಸುವ ಯಾವೊಂದು ಪ್ರಾಮಾಣಿಕ ಚಟುವಟಿಕೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರದಲ್ಲಿ ಇದ್ದವರಿಂದ ಆಗಿಲ್ಲ. ನಾನು ಗೆಲ್ಲುವುದರಿಂದ ಕನ್ನಡ ನೆಲದಲ್ಲಿ ಕನ್ನಡಿಗರೆ ಆಗುತ್ತಿರುವ ಅನ್ಯಾಯ ತಡೆಯುವ ನಿರಂತರ ಹೋರಾಟ ನಡೆಯಲಿವೆ ಎಂದು ಭರವಸೆ ನೀಡಿದರು.
ಇದಲ್ಲದೇ ಕಸಾಪ ಕಛೇರಿ ಹಾಗೂ ಆಡಳಿತ ನಡೆಸಿದವರು ಪಾರದರ್ಶಕ ಆಡಳಿತಕ್ಕೆ ತೆರೆ ಎಳೆದಿದ್ದಾರೆ. ಭ್ರಷ್ಟಾಚಾರದ ಚಿಗುರು ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಇವೆಲ್ಲದರ ಪರಿಣಾಮದಿಂದ ಯುವ ಜನಾಂಗ ಮತ್ತು ಇಚ್ಛಾಶಕ್ತಿಯುಳ್ಳ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿರುವ ಯುವ ಪ್ರತಿಭೆಗಳು ಸಾಹಿತ್ಯ ಪರಿಷತ್ತಿನ ಯಾವೊಂದು ವಲಯದಲ್ಲೂ ಗುರುತಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ನವ್ಯ, ಕಾವ್ಯ, ಬಂಡಾಯದ ಪರಂಪರೆ ಹೊಂದಿರುವ ಕನ್ನಡ ನಾಡಿನ ಸಾಹಿತ್ಯ ಲೋಕ ನೂರೆಂಟು ವಿಘ್ನಗಳನ್ನು ಎದುರಿಸುತ್ತಿದೆ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇರೂರಿರುವ ಭ್ರಷ್ಟಾಚಾರದ ಬೇರುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲಿಕ್ಕಾಗಿ, ನಾಡಿನ ಯುವ ಸಮುದಾಯವನ್ನು ಸಂಘಟಿಸಿ ಒಂದು ಸಶಕ್ತ ಕನ್ನಡ ಪಡೆ ಸಾಹಿತ್ಯ ಪರಿಷತ್ತನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿ ಆಗಲೆಂಬ ಹಿತದೃಷ್ಟಿಯಿಂದ ಸಾಮಾಜಿಕ ಹೋರಾಟಗಾರನಾದ ನಾನು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದರು.
ಕಸಾಪ ಡಿಜಿಟಲೀಕರಣಗೊಳಿಸಿ ನಾಡಿನ ಮೂಲೆ ಮೂಲೆಯ ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಯೋಜನೆ, ಗಡಿನಾಡ ಕನ್ನಡಿಗರ ರಕ್ಷಣೆಗೆ ಕಾನೂನು ನೆರವು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಮೀಸಲಾತಿ ಜಾರಿಗೆ ಬೃಹತ್ ಹೋರಾಟ ರೂಪಿಸುವ ಯೋಚನೆಗಳೊಂದಿಗೆ ಬಹುಮುಖ್ಯವಾಗಿ ಬ್ರಷ್ಟಾಚಾರ ಮುಕ್ತ ಸಾಹಿತ್ಯ ಪರಿಷತ್ತು ನಮ್ಮ ಗುರಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಸಮಾಜಮುಖಿಯಾಗಿ, ಜಾತ್ಯಾತೀತವಾಗಿ, ಬ್ರಷ್ಟಾಚಾರ ಮುಕ್ತವಾಗಿ ಕೊಂಡೊಯ್ಯುವ ಕನಸು ಹೊತ್ತಿರುವ ಎಲ್ಲ ವರ್ಗದ ಮನಸ್ಸುಗಳು ನಮ್ಮೊಂದಿಗೆ ಕೈಜೋಡಿಸಲು ಮನವಿ ಮಾಡುತ್ತೇನೆ ಎಂದರು.