Advertisement

ಸಾಹಿತ್ಯ ಕ್ಷೇತ್ರಕ್ಕೆ ರಾಜೂರ ಕೊಡುಗೆ ಸ್ಮರಣೀಯ

03:54 PM Jun 05, 2017 | |

ಧಾರವಾಡ: ಪ್ರತಿಭೆ ಮತ್ತು ಪಾಂಡಿತ್ಯಗಳ ಸಂಗಮವಾಗಿರುವ ಡಾ|ವೀರಣ್ಣ ರಾಜೂರ ಅವರು ಕನ್ನಡ ಸಾರಸ್ವತ ಪ್ರಪಂಚಕ್ಕೆ ಸಲ್ಲಿಸಿದ ವಿಶಿಷ್ಟ ಕಾಣಿಕೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಸ್ಮರಣೀಯ ಎಂದು ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ್‌ ಹೇಳಿದರು.

Advertisement

ಇಲ್ಲಿನ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಗದಗದ ಡಾ|ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ, ಡಾ|ವೀರಣ್ಣ ರಾಜೂರ ಅಭಿನಂದನ ಸಮಿತಿ ಹಮ್ಮಿಕೊಂಡಿದ್ದ ಡಾ|ವೀರಣ್ಣ ರಾಜೂರ ಅಭಿನಂದನಾ ಸಮಾರಂಭ ಹಾಗೂ ಪುಸ್ತಕ ಪ್ರದರ್ಶನ ಅಭಿನಂದನ ಗ್ರಂಥ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

ವಚನ ಸಾಹಿತ್ಯವನ್ನು ಅಪಾರ ಪ್ರಮಾಣದಲ್ಲಿ ಬೆಳಕಿಗೆ ತಂದ ಡಾ| ಆರ್‌.ಸಿ. ಹಿರೇಮಠ ಅವರು ಡಾ|ಎಂ.ಎಂ. ಕಲಬುರ್ಗಿ ಅವರನ್ನು ತಮ್ಮ ಉತ್ತರಾ ಧಿಕಾರಿ ಎಂದು ಕರೆದಿದ್ದರು. ಡಾ| ಕಲಬುರ್ಗಿ ಅವರು ತಮ್ಮ ಉತ್ತರಾಧಿ ಕಾರಿ ಡಾ|ವೀರಣ್ಣ ರಾಜೂರ ಎಂದು ಅತ್ಯಂತ ಅಭಿಮಾನದಿಂದ ಹೇಳಿದ್ದರು. 

ಡಾ|ಕಲಬುರ್ಗಿ ಅವರ ಸಂಶೋಧನೆ, ವಚನ ಸಾಹಿತ್ಯ ಸಂಪಾದನೆ ಕ್ಷೇತ್ರವನ್ನು ಇನ್ನಷ್ಟು ಸಮೃದ್ಧಗೊಳಿಸಿದ ಕೀರ್ತಿ ಡಾ|ರಾಜೂರ ಅವರದ್ದು ಎಂದರು. ಕನ್ನಡ ಪ್ರಾಧ್ಯಾಪಕ ಮತ್ತು ಸಂಶೋಧಕ ವಿದ್ವಾಂಸ ಎನ್ನುವ ಸಾಂಸ್ಕೃತಿಕ ಧ್ವನಿ ತರಂಗಕ್ಕೆ ಸಂವೇದನಾಶೀಲರಾಗಿದ್ದ ಡಾ|ವೀರಣ್ಣ ರಾಜೂರ ಅವರು ಇಂದಿಗೂ ವಚನ ಸಾಹಿತ್ಯ ಕುರಿತು ಸಂಶೋಧನೆ-ಸಂಗ್ರಹ-ಸಂಪಾದನಾ ಆಯಾಮಗಳಲ್ಲಿ ದಣಿವರಿಯದೆ ದುಡಿಯುತ್ತಿರುವುದು ಅಭಿಮಾನದ ಸಂಗತಿ.

ಕನ್ನಡ ಸಾಹಿತ್ಯಕ್ಕೆ ಒಂದು ಘನತೆ ಗೌರವವನ್ನು ತಂದು ಕೊಡುವ ಕಾರ್ಯವನ್ನು ಮಾಡುವುದರ ಜೊತೆಗೆ ಶಿಷ್ಯರಿಂದಲೂ ಮುಂದುವರಿಸಿದವರು. ಪಿಎಚ್‌ಡಿ ಮಾರ್ಗದರ್ಶಕರಾಗಿ ಕನ್ನಡ ಸಾಹಿತ್ಯದ ಅನೇಕ ಉಪೇಕ್ಷಿತ ಕ್ಷೇತ್ರಗಳನ್ನು ಬೆಳಕಿಗೆ ತಂದಿದ್ದಾರೆ ಎಂದರು. ಡಾ|ವೀರಣ್ಣ ರಾಜೂರ ಅವರದು ಮೂಲತಃ ಸೃಜನಶೀಲ ಮನಸ್ಸು. 

Advertisement

ಪ್ರಾರಂಭದಲ್ಲಿ ಅವರು ಕವನ-ನಾಟಕ ರಚನೆಯಲ್ಲಿ ತೊಡಗಿದ್ದರು. ಆದರೆ ಡಾ|ಆರ್‌.ಸಿ. ಹಿರೇಮಠ, ಡಾ|ಎಂ. ಎಂ. ಕಲಬುರ್ಗಿ ಅವರಂಥ ವಿದ್ವಜ್ಜನರ ಒಡನಾಟ ಕಾರಣವಾಗಿ ವಚನ ಸಾಹಿತ್ಯ ಸಂಶೋಧನೆಯತ್ತ ಮನಸ್ಸು ಮಾಡಿದರು. ಸಾವಿರಾರು ವಚನಗಳನ್ನು ಮೊದಲ ಬಾರಿಗೆ ಶೋಧಿಸಿದ ಶ್ರೇಯಸ್ಸು ಪಡೆದಿರುವ ಅವರು ನೂರು ಶೋಧ ಎಂಬ ಬೃಹತ್‌ ಸಂಪುಟಗಳನ್ನು ಪ್ರಕಟಿಸಿದ್ದಾರೆ.

ಅದರಲ್ಲಿ ಬಿಡಿ ಬಿಡಿಯಾಗಿ ಅವರು ಹಸ್ತಪ್ರತಿಗಳಿಂದ ಮೊದಲ ಬಾರಿಗೆ ಶೋಧಿ ಸಿ ಪ್ರಕಟಿಸಿದ ಕಿರು ಸಾಹಿತ್ಯ ಕೃತಿಗಳಿವೆ. ಅವುಗಳಲ್ಲಿ ಮುಖ್ಯವಾಗಿ ವಚನ, ಸ್ವರವಚನಗಳಲ್ಲದೆ, ಶತಕ, ಅಷ್ಟಕ, ದಂಡಕ, ತಾರಾವಳಿ ಮೊದಲಾದ ಉಪೇಕ್ಷೆಗೆ ಒಳಗಾದ ಸಾಹಿತ್ಯ ಪ್ರಕಾರವಿದೆ. ಇಂಥ ಅಪರೂಪದ ಸಾಹಿತ್ಯವನ್ನು ಡಾ| ರಾಜೂರ ಅವರು ಮೊದಲ ಬಾರಿಗೆ ಕನ್ನಡಿಗರಿಗೆ ನೀಡಿದ್ದಾರೆ ಎಂದರು. 

ಡಾ|ವೀರಣ್ಣ ರಾಜೂರ ಅವರು ನಿರಾಡಂಬರ ಸರಳ ವ್ಯಕ್ತಿತ್ವದವರು. ಎಲೆಯ ಮರೆಯ ಕಾಯಿಯಂತೆ ಬದುಕಿದವರು. ಧಾರವಾಡ ಕರ್ನಾಟಕ ವಿವಿ ಡಾ|ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಮೂರು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ನಡುಗನ್ನಡ ಸಾಹಿತ್ಯ, ಅದರಲ್ಲೂ ವಿಶೇಷವಾಗಿ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ನೂರಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ ಎಂದರು. 

ಸಂಶೋಧನೆ ಕುರಿತು ಡಾ|ಕೆ. ರವೀಂದ್ರನಾಥ ಮಾತನಾಡಿ, ರಾಜೂರ ಅವರ ಮಹಾಪ್ರಬಂಧ ಸಾಂಗತ್ಯ ಸಂಶೋಧಕರ ಅಧ್ಯಯನಕ್ಕೆ ಆಕರಗಳಾಗಿವೆ. ವಚನಗಳ ಎಲ್ಲ ಹಸ್ತಪ್ರತಿಗಳನ್ನು ಪರಿಶೀಲಿಸಿದ ರಾಜೂರ ಅವರು ಕಲಬುರ್ಗಿ ಮಾರ್ಗದರ್ಶನದಲ್ಲಿ ಶುದ್ಧ ಸಂಪುಟಗಳನ್ನು ಹೊರ ತಂದಿದ್ದಾರೆ. ಆಶಾವಾದ ಅಧ್ಯಯನ, ಅಪಾರ ವಿದ್ವತ್‌ ಹೊಂದಿದ ಕಾರಣದಿಂದಲೇ ರಾಜೂರ ಅವರಿಂದ ಇಷ್ಟೊಂದು ಉತ್ತಮ ಕಾರ್ಯಗಳು ನಡೆದಿವೆ ಎಂದರು. 

ಡಾ|ಶಾಂತಿನಾಥ ದಿಬ್ಬದ ಅಧ್ಯಕ್ಷತೆ ವಹಿಸಿದ್ದರು. ಡಾ|ವೀರಣ್ಣ ರಾಜೂರ, ಮಾಜಿ ಶಾಸಕ ಶಾಸಕ ಚಂದ್ರಕಾಂತ ಬೆಲ್ಲದ, ಡಾ|ಶಶಿಧರ ತೋಡಕರ, ಹಂಪಿ ವಿವಿ ಕುಲಪತಿ ಮಲ್ಲಿಕಾ ಘಂಟಿ, ವಿಜಯ ಕಲಬುರ್ಗಿ, ಲೋಹಿತ್‌ ನಾಯ್ಕರ್‌, ಡಾ| ಸಿದ್ದಲಿಂಗಯ್ಯ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ರಂಜಾನ  ದರ್ಗಾ ಇತರರು ಇದ್ದರು. ಶ್ರೀನಿವಾಸ ದೊಡ್ಡಮನಿ ಸ್ವಾಗತಿಸಿದರು. ಡಾ|ಎಚ್‌.ಎಸ್‌. ಮೇಲಿನಮನಿ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next