ಮಂಗಳೂರು: ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳೂರು ಹಾಗೂ ತೊಕ್ಕೊಟ್ಟು ವಲಯದಿಂದ ಭಕ್ತರು ಹಾಗೂ ದೇಗುಲಗಳಿಂದ ಸಮರ್ಪಿಸಲಾದ ಹೊರೆಕಾಣಿಕೆಗಳ ಮೆರವಣಿಗೆ ಭಕ್ತಿ ಸಂಭ್ರಮದಿಂದ ಶುಕ್ರವಾರ ನಡೆಯಿತು.
ಶುಕ್ರವಾರ ಮಧ್ಯಾಹ್ನ ಶ್ರೀ ಮಂಗಳಾದೇವಿ ದೇವಸ್ಥಾನದಿಂದ ಪ್ರಾರ್ಥನೆಗೈದು ಹೊರೆಕಾಣಿಕೆ ಹೊರಟು ಶರವು ಮಹಾಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿಗಳು ದೀಪ ಬೆಳಗುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಮೆರವಣಿಗೆ ಕದ್ರಿ ದೇವಸ್ಥಾನಕ್ಕೆ ಆಗಮಿಸಿತು. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರು ದೀಪ ಬೆಳಗಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮಂಗಳೂರಿನ ವಿವಿಧ ದೇವಸ್ಥಾನಗಳ ಸಹಿತ ಬಲ್ಲಾಳ್‌ಬಾಗ್ ಹೊರೆಕಾಣಿಕೆ ಕೇಂದ್ರ, ಉಳ್ಳಾಲ, ತೊಕ್ಕೊಟ್ಟು ವಲಯಗಳ ಹೊರೆಕಾಣಿಕೆ ಕೇಂದ್ರಗಳು ಸೇರಿದಂತೆ 15ಕ್ಕೂ ಅಧಿಕ ಕೇಂದ್ರಗಳಲ್ಲಿ ಸಂಗ್ರಹಿಸಿದ ತರಕಾರಿ, ಪಾತ್ರೆಗಳು, ಪೂಜಾ ಪರಿಕರಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಒಳಗೊಂಡ 200ಕ್ಕೂ ಅಧಿಕ ವಾಹನಗಳ ಮೆರವಣಿಗೆ ಶರವು ಕ್ಷೇತ್ರದಿಂದ ಹೊರಟು ಶ್ರೀ ಕ್ಷೇತ್ರ ಪೊಳಲಿಗೆ ಸಾಗಿತು.
ಪೂಜಾಪರಿಕರ, ಅಡುಗೆ ಪಾತ್ರೆ, ಪರಿಕರಗಳು
ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಪೂಜಾ ಪರಿಕರ, ಬೆಳ್ಳಿಯ ಪೀಠ, ಅಡುಗೆ ಸಾಮಗ್ರಿಗಳಿದ್ದವು. ಅದರಲ್ಲೂ ಮುಖ್ಯವಾಗಿ ಪೂಜಾ ಪರಿಕರಗಳು, ದೇವರ ನಿತ್ಯ ನೈವೇದ್ಯಕ್ಕೆ ಅರ್ಪಣೆಯಾಗುವ ತಾಮ್ರದ ಪಾತ್ರೆಗಳು, ಕಾಣಿಕೆ ಹುಂಡಿ, ಪಾಯಸದ ಕಡಾಯಿಗಳು, ಗೆùಂಡರ್ ಸೇರಿದಂತೆ ವಿವಿಧ ಪರಿಕರಗಳು ಗಮನ ಸೆಳೆದವು. ಇದು ಮಾತ್ರವಲ್ಲದೆ ಅಕ್ಕಿ, ತೆಂಗಿನಕಾಯಿ, ದವಸಧಾನ್ಯಗಳನ್ನು ಸಮರ್ಪಣೆ ಮಾಡಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ನಾಗರಾಜ ಶೆಟ್ಟಿ, ಆಶಾಜ್ಯೋತಿ ರೈ, ಪ್ರಕಾಶ್ ಸಾಲಿಯಾನ್, ರಾಜೇಶ್, ವಿಹಿಂಪ ಮುಖ್ಯಸ್ಥ ಪ್ರೊ| ಎಂ.ಬಿ. ಪುರಾಣಿಕ್, ಬಾಲಕೃಷ್ಣ ಕೊಟ್ಟಾರಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕದ್ರಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಉದ್ಯಮಿ ಗಣೇಶ್ ಶೆಟ್ಟಿ, ರಮಾನಂದ ಭಂಡಾರಿ, ಸುಧಾಕರ ರಾವ್ ಪೇಜಾವರ, ಪ್ರಸಾದ್ ಅತ್ತಾವರ, ಮೋಹನ್ ಮೆಂಡನ್ ಉಪಸ್ಥಿತರಿದ್ದರು.