ಅದು ಇಲ್ಲಿನ ರಸಂ, ಸಾಂಬಾರಿನ ಕರಾಮತ್ತು. ಕೇವಲ ಇವು ಮಾತ್ರವೇ ಅಲ್ಲ… ಈ ಮೆಸ್‌ನ ಬಗೆ ಬಗೆಯ ಭಕ್ಷ್ಯಗಳಿಗೆ ತನ್ನದೇ ಗತ್ತು ಗೈರತ್ತಿದೆ. ಹಾಗೆ ನೋಡಿದರೆ, ಬೆಂಗಳೂರಿನಲ್ಲಿ ಕೇರಳದಿಂದ ಬಂದು ಹೋಟೆಲ್ ಇಟ್ಟವರು ಸಾಕಷ್ಟು ಮಂದಿ ಸಿಗುತ್ತಾರೆ. ಆ ಹೋಟೆಲ್‌ಗಳು ಇವತ್ತಿಗೂ ಮಲೆಯಾಳಿ ಕೈರುಚಿಯನ್ನೇ ಉಳಿಸಿಕೊಂಡೇ ಬಂದಿವೆ. ಆದರೆ, ರಾಜರಾಜೇಶ್ವರಿ ಮೆಸ್ ಹಾಗಲ್ಲ… ಕೇರಳದ ಸಾಂಪ್ರದಾಯಿಕ ಉಪಚಾರವನ್ನು ನೀಡುತ್ತಲೇ, ಕರುನಾಡಿನ ಸಾಂಪ್ರದಾಯಿಕ ರುಚಿಯನ್ನೂ ಪ್ರತಿಬಿಂಬಿಸುವ ಕೆಲಸವನ್ನೂ ಮಾಡಿದೆ. ಮೆಸ್‌ನೊಳಗೆ ಕಾಲಿಟ್ಟ ಕೂಡಲೇ, ಕೈಮುಗಿದು ಗ್ರಾಹಕರನ್ನು ಸ್ವಾಗತಿಸುವ ಮಾಣಿಗಳ ಮಂದಹಾಸಕ್ಕೇ ಉದರ ತಂಪಾಗುತ್ತದೆ. ಹಾಗೆ ಕೈಮುಗಿಯುವುದು ಮೆಸ್‌ನ ಆದೇಶವಲ್ಲದೇ ಇದ್ದರೂ, ಅದೊಂದು ಸಂಸ್ಕೃತಿಯಾಗಿ ಇಲ್ಲಿ ಬೆಳೆದುಬಂದಿದೆ.
Advertisement
ರುಚಿಗೆ “ರಜತ’ ಕಳೆಒಂದು ಹೋಟೆಲ್ ಅನ್ನು ಹತ್ತಾರು ವರುಷ ನಡೆಸೋದಂದ್ರೆ, ಅದು ಸಾಹಸದ ಮಾತೇ ಸರಿ. ಹಾಗೆ ನೋಡಿದರೆ ಈ ಮೆಸ್, ಕಾಲು ಶತಮಾನದಿಂದ ಮಲ್ಲೇಶ್ವರಂನಲ್ಲಿ ರುಚಿಯ ಸಾಮ್ರಾಟನಾಗಿ ಮೆರೆದಿದೆ. ಕೆ. ಹರಿದಾಸನ್ ಮತ್ತು ಲೀನಾ ದಂಪತಿ 25 ವರ್ಷಗಳ ಹಿಂದೆ ಕೇರಳದ ಪಾಲಕ್ಕಾಡ್‌ನಿಂದ ಇಲ್ಲಿಗೆ ಬಂದು, ಸ್ವಂತ ಮೆಸ್ ಆರಂಭಿಸುವಾಗ ಸಾಕಷ್ಟು ಸವಾಲುಗಳಿದ್ದವು. ಕೇರಳದ ರುಚಿ ಕೈಗೆ ಒಗ್ಗಿ ಹೋಗಿತ್ತು. ಮಲ್ಲೇಶ್ವರಂನ ಜನ ಬಯಸುವ ಸಾಂಪ್ರದಾಯಿಕ ಆಸ್ವಾದವೇ ಬೇರೆ ಎನ್ನುವ ಭಾವ ಅವರಲ್ಲಿತ್ತು. ಬಾಣಸಿಗರು ತಮ್ಮ ಕೈಚಳಕದಿಂದ ಅವೆರಡೂ ಸಾಂಪ್ರದಾಯಿಕ ರುಚಿಗಳನ್ನು ಬೆಸೆದು, ಬಹುಬೇಗನೆ ಸ್ಥಳೀಯರನ್ನು ಆಕರ್ಷಿಸಿಬಿಟ್ಟರು. ಇದು ಇಂದು ಮಲ್ಲೇಶ್ವರಂನ “ಲ್ಯಾಂಡ್‌ಮಾರ್ಕ್’ಗಳಲ್ಲಿ ಒಂದು.
ಇಲ್ಲಿ ದಿನವೂ ವೈಶಿಷ್ಟé ಖಾದ್ಯಗಳೇ. ಇವತ್ತು ಸವಿದ ರುಚಿಯನ್ನು ಮತ್ತೆ ಆಸ್ವಾದಿಸಲು ಮುಂದಿನ ವಾರಕ್ಕೇ ಕಾಯಬೇಕು. ಬುಧವಾರ, ಶನಿವಾರ, ಭಾನುವಾರವಂತೂ ಇಲ್ಲಿನ ವಿಶೇಷ ಅಡುಗೆ ರುಚಿಪ್ರಿಯರಿಗೆ ಅಚ್ಚುಮೆಚ್ಚು. ಮಜ್ಜಿಗೆ ಹುಳಿಯದ್ದಂತೂ ಸದಾ ಕಾಡುವಂಥ ರುಚಿ. ಬೇಳೆ ಪಾಯಸ, ಶಾವಿಗೆ ಪಾಯಸ, ಹೆಸರುಬೇಳೆ ಪಾಯಸಗಳ ವೈಶಿಷ್ಟéಗಳೇ ಬೇರೆ. ತರಕಾರಿ ಪಲ್ಯಗಳಲ್ಲೂ ಏನೋ ವಿಶಿಷ್ಟ ಮೋಡಿ. ಇಲ್ಲಿನ ಕೇರಳ ಶೈಲಿಯ ಪುಲಾವ್, ಚಿತ್ರಾನ್ನಗಳಿಗೆ ಅಪಾರ ಅಭಿಮಾನಿಗಳೇ ಇದ್ದಾರೆ. ಎಲ್ಲಿದೆ?
ಶ್ರೀ ರಾಜರಾಜೇಶ್ವರಿ ಅಯ್ಯರ್ ಮೆಸ್, ಮಾರ್ಗೋಸಾ ರಸ್ತೆ, ಹಿಮಾಂಶು ಶಾಲೆಯ ಹತ್ತಿರ, 17ನೇ ಅಡ್ಡರಸ್ತೆ, ಮಲ್ಲೇಶ್ವರಂ.
ಸಂಪರ್ಕ: ಮೊ. 9880629646, 8317447074, 080-23561808
ಭೋಜನ ದರ: 60 ರೂ.
Related Articles
ಅದು ಸಂಕ್ರಾಂತಿಯೋ, ಯುಗಾದಿಯೋ, ದೀಪಾವಳಿಯೋ… ಹಬ್ಬಕ್ಕೇನಾದರೂ ಇಲ್ಲಿಗೆ ಬಂದುಬಿಟ್ಟರೆ, “ಅಯ್ಯೋ ಮನೆಯೂಟ ಮಿಸ್ ಆಯ್ತು’ ಅಂತ ಅನ್ನಿಸುವುದೇ ಇಲ್ಲ. ಅಷ್ಟೊಂದು ಬಗೆ ಬಗೆಯ ರುಚಿಯ, ಹತ್ತಾರು ವೆರೈಟಿಗಳು ಇಲ್ಲಿ. ಮೂರ್ನಾಲ್ಕು ಬಗೆಯ ಗಸಿ, ಹೋಳಿಗೆಯಂತೂ ಪಕ್ಕಾ. ಈ ಮೆಸ್‌ಗೆ ಕೇವಲ ಜನಸಾಮಾನ್ಯರಷ್ಟೇ ಬರುವುದಿಲ್ಲ. ತಾರೆಗಳಿಗೂ ಈ ಮೆಸ್ ಮೇಲೆ ಅದೇನೋ ಪ್ರೀತಿ. ಸಿನಿಮಾ ನಟಿ ತಾರಾ, ನಿರ್ದೇಶಕ ಎಸ್. ನಾರಾಯಣ್, ಭಗವಾನ್ ಸೇರಿದಂತೆ ಹಿರಿಯ ಐಎಎಸ್, ಕೆಎಎಸ್ ಅಧಿಕಾರಿಗಳು, ರಾಜಕಾರಣಿಗಳು ಈ ಮೆಸ್ ಅನ್ನು ಆಗಾಗ್ಗೆ ಹುಡುಕಿಕೊಂಡು ಬಂದು ಭೋಜನ ಸವಿಯುತ್ತಾರೆ.
Advertisement
– ಬಳಕೂರು ವಿ.ಎಸ್. ನಾಯಕ್